ಹಾವೇರಿ(ಮಾ.15): ಕೊರೋನಾ ವೈರಸ್‌ ಜಿಲ್ಲೆಗೂ ಕಾಲಿಟ್ಟಿದೆ ಎಂಬ ವದಂತಿಯನ್ನು ಹಾವೇರಿ ಜಿಲ್ಲೆಯ ಸಿಂದಗಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರೇ ಹಬ್ಬಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ನೆಹರು ಓಲೇಕಾರ ಅವರು ವೈದ್ಯರನ್ನು ಕರೆಯಿಸಿ ಸುಳ್ಳು ಸುದ್ದಿ ಹಬ್ಬಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಡಾ.ಶರಣು ಅಂಗಡಿ ಎಂಬುವರೇ ವಾಟ್ಸಾಪ್‌ನಲ್ಲಿ ವದಂತಿ ಹರಡಿದವರು. ಹಜ್‌ ಯಾತ್ರೆ ಮುಗಿಸಿ ವಾಪಸ್‌ ಬಂದ ಸವಣೂರಿನ ವ್ಯಕ್ತಿಗೆ ಕೊರೋನಾ ವೈರಸ್‌ ಬಂದಿದ್ದು, ರೋಗಿಯನ್ನು ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿಗೆ ಕಳುಹಿಸಲಾಗಿದೆ ಎಂಬ ಸಂದೇಶವನ್ನು ಫಾರ್ವಡ್‌ ಮಾಡಿದ್ದರು. ಇದು ಭಾರೀ ವೈರಲ್‌ ಆಗಿತ್ತು. ಆದರೆ ಇದು ಸುಳ್ಳು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಸರ್ಜನ್‌ ಡಾ.ನಾಗರಾಜ ನಾಯಕ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ರೀತಿ ವದಂತಿ ಹಬ್ಬಿಸಿದ ಬಗ್ಗೆ ಶಾಸಕ ನೆಹರು ಓಲೇಕಾರ ಅವರಿಗೆ ತಿಳಿಯುತ್ತಿದ್ದಂತೆ ವೈದ್ಯರನ್ನು ತಾವಿರುವ ಸ್ಥಳಕ್ಕೆ ಕರೆಯಿಸಿಕೊಂಡಿದ್ದರು. ಈ ವೇಳೆ ಪ್ರಾಧ್ಯಾಪಕರು ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆಯಾಚಿಸಿದರು. ಸುಳ್ಳು ಸುದ್ದಿ ಹರಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಆಗ್ರಹಿಸಿದರು.  ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿದ್ದರು. ಮತ್ತೊಮ್ಮೆ ಹೀಗೆ ಮಾಡದಂತೆ ತಿಳಿವಳಿಕೆ ನೀಡಿ ಕಳುಹಿಸಲಾಯಿತು.