ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ನ್ಯಾಯಾಲಯದಿಂದ ವಾರಂಟ್‌  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಂಗಳವಾರ ಸುಳ್ಯ ಕೋರ್ಟ್‌ಗೆ ಹಾಜರಾಗಲಿದ್ದಾರೆ

ಸುಳ್ಯ (ಅ.04):  ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಸುಳ್ಯ ತಾಲೂಕು ನ್ಯಾಯಾಲಯದಿಂದ ವಾರಂಟ್‌ (Warrant) ಜಾರಿಯಾಗಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಮಂಗಳವಾರ ಸುಳ್ಯ ಕೋರ್ಟ್‌ಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಬೆಳ್ಳಾರೆಯ ಸಾಯಿ ಗಿರಿಧರ ರೈ ಎಂಬವರು 2016ರ ಫೆ.28ರಂದು ಆಗಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ದೂರವಾಣಿ ಕರೆ ಮಾಡಿ ಇಲ್ಲಿನ ವಿದ್ಯುತ್‌ ಅವ್ಯವಸ್ಥೆ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂಬ ಕಾರಣಕ್ಕಾಗಿ ವಿಷಯವನ್ನು ಡಿ.ಕೆ.ಶಿವಕುಮಾರ್‌ ಆಗಿನ ಮೆಸ್ಕಾಂ (Mescom) ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಸಾಯಿ ಗಿರಿಧರ ರೈ ಈ ಮೊದಲೇ ಸುಳ್ಯ ಜೆಇಇ (JEE) ಹರೀಶ್‌ ನಾಯ್ಕ್ ರಿಗೂ ಫೋನ್‌ ಮಾಡಿ ನಿಂದಿಸಿದ್ದುದರಿಂದ ಹರೀಶ್‌ ನಾಯ್ಕ್ ಪೊಲೀಸ್‌ ದೂರು ನೀಡಿದ್ದರು.

ಕಾಂಗ್ರೆಸ್ ನಲ್ಲಿ ಮಾತ್ರ ಗಾಂಧಿಯಂಥ ಆದರ್ಶ ವ್ಯಕ್ತಿಗಳು ಸಿಗುತ್ತಾರೆ : ಡಿಕೆಶಿ

ಆ ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇತರರೆಲ್ಲ ಸಾಕ್ಷಿಗಳು ನ್ಯಾಯಾಲಯಕ್ಕೆ (Court) ಹಾಜರಾಗಿದ್ದರೂ ಸಾಕ್ಷಿದಾರರಲ್ಲೊಬ್ಬರಾದ ಡಿ.ಕೆ. ಶಿವಕುಮಾರ್‌ ವಾರಂಟ್‌ ಜಾರಿಗೊಳಿಸಿದ್ದರೂ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಇದೀಗ ಎರಡನೇ ಬಾರಿ ವಾರಂಟ್‌ ಜಾರಿ ಆಗಿರುವ ಹಿನ್ನೆಲೆಯಲ್ಲಿ ಅವರು ಮಂಗಳವಾರ ಬೆಳಗ್ಗೆ 7 ಗಂಟೆಗೆ ವಿಮಾನ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ಸುಳ್ಯಕ್ಕೆ ಆಗಮಿಸಿ, ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಂಗಳೂರಿಗೆ ಹಿಂತಿರುಗಿ ರಾತ್ರಿ 8 ಗಂಟೆ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್‌ ಹೋಗುವರು ಎಂದು ತಿಳಿದುಬಂದಿದೆ.

ಇತ್ತ ರಾಜಕೀಯ ಜೋರು

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Assembly Election) ಜೆಡಿಎಸ್‌ನದ್ದು (JDS) ಮಿಷನ್‌ -123, ಬಿಜೆಪಿಯವರದ್ದು ಮಿಷನ್‌-150 ಎಂದು ಹೇಳುತ್ತಿದ್ದಾರೆ. ಆದರೆ, ನಾನು 224 ಕ್ಷೇತ್ರಗಳ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ನಮ್ಮದು ಮಿಷನ್‌ -224’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ದೆಹಲಿಯಲ್ಲಿ (Delhi) ಮಾತನಾಡಿದ್ದ ಅವರು, ನಮ್ಮ 20 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ನಾನು 224 ಶಾಸಕರ ಜೊತೆಗೂ ಮಾತನಾಡುತ್ತೇನೆ. ಯಾರ ಜತೆಗೂ ನನಗೆ ಭಿನ್ನಾಭಿಪ್ರಾಯವಿಲ್ಲ. ಸದ್ಯಕ್ಕೆ ನಾವು ಆಪರೇಷನ್‌ ಹಸ್ತದ ವಿಚಾರವಾಗಿ ಯೋಚನೆ ಮಾಡಿಲ್ಲ. ಅವರು (ಬಿಜೆಪಿ) ಎಷ್ಟುಜನರನ್ನು ಕರೆದುಕೊಳ್ಳಬೇಕೋ ಕರೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.