ವಿನಯ್ ಗುರೂಜಿ ಜತೆ 20 ನಿಮಿಷ ಮಾತುಕತೆ ನಡೆಸಿದ ಡಿಕೆಶಿ
KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೌರಿಗದ್ದೆ ಆಶ್ರಮಕ್ಕೆ ತೆರಳಿ ವಿನಯ್ ಗುರೂಜಿ ಭೇಟಿ ಮಾಡಿದ್ದಾರೆ. 20 ನಿಮಿಷಗಳ ಕಾಲ ಗುರೂಜಿ ಜೊತೆ ಮಾತನಾಡಿದ್ದಾರೆ.
ಚಿಕ್ಕಮಗಳೂರು (ಜ.27): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತನ್ನ ಮಗಳ ಮದುವೆಗೆ ಆಹ್ವಾನ ನೀಡಲು ಜಿಲ್ಲೆಯ ಮಠಾಧೀಶರನ್ನು ಭೇಟಿ ಮಾಡಿದ್ದರು.
ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶೃಂಗೇರಿಯ ಶ್ರೀ ಶಾರದಾಂಬೆ ದರ್ಶನ ಪಡೆದು ಬಳಿಕ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು ಮಗಳ ಮದುವೆಗೆ ಬಂದು ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡರು.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮೈತ್ರಿ ಸರ್ಕಾರ : ಡಿ.ಕೆ.ಶಿವಕುಮಾರ್ ..
ಅನಂತರ ಡಿ.ಕೆ.ಶಿವಕುಮಾರ್ ಅವರು ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ತೆರಳಿ ಅವಧೂತರಾದ ವಿನಯ್ ಗುರೂಜಿ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲವಿದ್ದು, ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಗುರೂಜಿ, ಮದುವೆಗೆ ಆಹ್ವಾನ ನೀಡಲು ಡಿ.ಕೆ.ಶಿವಕುಮಾರ್ ಬಂದಿದ್ದರು. ಎರಡು ಕುಟುಂಬಗಳು ಒಂದಾಗಬೇಕೆಂದು ಆಶ್ರಮ ಪ್ರಯತ್ನ ಮಾಡಿ ಮಾತುಕತೆ ಸಹ ಮಾಡಿತ್ತು. ಈ ಎರಡು ಕುಟುಂಬಗಳು ಆಶ್ರಮಕ್ಕೆ ನಿಕಟ ಸಂಪರ್ಕ ಹೊಂದಿವೆ. ಇದು, ಆಶ್ರಮದ ಮದುವೆ ಇದ್ದ ಹಾಗೆ ಎಂದರು.
ವ್ಯಾಲೆಂಟೈನ್‌ಸ್ ಡೇ ಮದುವೆಯಾಗಲಿ ಎಂದು ತಮಾಷೆಗೆ ಹೇಳಿದ್ದೆ. ಅದು ನೋಡಿದರೆ ಫೆ.14ರಂದು ವ್ಯಾಲೆಂಟೈನ್ಸ್ ಡೇ ದಿನ ಮದುವೆ ಆಗ್ತಾ ಇದೆ. ಇದು, ಖುಷಿಯ ದಿನ. ಇಬ್ಬರು ಮಕ್ಕಳದ್ದು ಒಂದೇ ಥಿಂಕಿಂಗ್ ಎಂದು ಹೇಳಿದ ಅವರು, ಸೂಕ್ಷ್ಮ ಶರೀರದಲ್ಲಿ ಸಿದ್ಧಾರ್ಥ ಇರುತ್ತಾರೆ. ಅವರು ಅಲ್ಲಿಂದಲೇ ಮದುವೆ ನೋಡಿ ಖುಷಿ ಪಡುತ್ತಾರೆ ಎಂದು ತಿಳಿಸಿದರು.