ಸರ್ವರೂ ಒಪ್ಪಿಕೊಳ್ಳುವಂತಹ ದಿವ್ಯ ಚೈತನ್ಯ ವಿವೇಕಾನಂದರು : ಪ್ರಭಾವತಿ ಎಂ. ಹಿರೇಮಠ್
ಯಾವುದೇ ಜಾತಿ, ಧರ್ಮ, ಮತ, ಶ್ರೀಮಂತ, ಬಡವ ಎಂಬ ತಾರತಮ್ಯವಿಲ್ಲದೆ ಸರ್ವರೂ ಒಪ್ಪಿಕೊಳ್ಳುವಂತಹ ದಿವ್ಯ ಚೈತನ್ಯ, ದಿವ್ಯ ವ್ಯಕ್ತಿತ್ವ ಸ್ವಾಮಿ ವಿವೇಕಾನಂದ ಅವರದ್ದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಹೇಳಿದರು.
ಮೈಸೂರು : ಯಾವುದೇ ಜಾತಿ, ಧರ್ಮ, ಮತ, ಶ್ರೀಮಂತ, ಬಡವ ಎಂಬ ತಾರತಮ್ಯವಿಲ್ಲದೆ ಸರ್ವರೂ ಒಪ್ಪಿಕೊಳ್ಳುವಂತಹ ದಿವ್ಯ ಚೈತನ್ಯ, ದಿವ್ಯ ವ್ಯಕ್ತಿತ್ವ ಸ್ವಾಮಿ ವಿವೇಕಾನಂದ ಅವರದ್ದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಹೇಳಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಐಕ್ಯೂಎಸಿ ಮತ್ತು ಯುವ ರೆಡ್ ಕ್ರಾಸ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ರಾಷ್ಟೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಆಚಾರ ವಿಚಾರಗಳು, ಮಹಿಳೆಯರ ಸ್ಥಾನಮಾನ, ಯುವ ಪೀಳಿಗೆಗೆ ಮಾದರಿಯಾಗಬೇಕು. ದೇವರ ಪೂಜೆ ಮಾಡುತ್ತಾ ಸಮಯ ಕಳೆಯುವ ಬದಲು ಶೋಷಿತರ ಕಣ್ಣೀರಿಗೆ ಸ್ಪಂದಿಸುವಂತಾಗಬೇಕು ಹಾಗೂ ಬೇರೊಬ್ಬರ ಉಪಯೋಗಕ್ಕೆ ಬರುವ ವ್ಯಕ್ತಿಯಾಗು, ಆನಂತರ ಯೋಗಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ಜಗತ್ ಜನನಿಯ ಪ್ರತಿರೂಪವೇ ಮಹಿಳೆ, ಪೋಷಕರಾದವರು ಮಕ್ಕಳಿಗೆ ಸನ್ನಡತೆ ಮಾರ್ಗವನ್ನು ತೋರಿಸಬೇಕು, ಜೊತೆಗೆ ಒಳ್ಳೆಯ ಬುದ್ದಿ ಮಾತುಗಳನ್ನು ಸಹ ಕಲಿಸಬೇಕು, ಜೀವನದಲ್ಲಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದರು ಮಹಿಳೆಯರ ಬಗ್ಗೆ ಹೊಂದಿದ್ದ ಅಪಾರ ಗೌರವ, ಅಭಿಮಾನದ ಬಗ್ಗೆ ವಿವರಿಸುತ್ತಾ ಪೌರಾತ್ಯ ರಾಷ್ಟ್ರಗಳ ಮಹಿಳೆಯರಿಗಿಂತ ಭಾರತೀಯ ಹೆಣ್ಣುಮಕ್ಕಳಲ್ಲಿ ಆಧ್ಯಾತ್ಮಿಕತೆ ಹೆಚ್ಚಿದೆ, ವೇದಗಳ ಕಾಲದಲ್ಲಿ ಮಹಿಳೆಗೆ ಸಮಾನತೆ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸಮಾನತೆ ಕ್ಷೀಣಿಸುತ್ತಿದೆ. ಮಹಿಳೆಯರಿಗೆ ಸಕಲ ವಿದ್ಯೆಗಳಲ್ಲಿಯೂ ಜ್ಞಾನ, ಶಿಕ್ಷಣ, ಸಮಾನತೆ ಸಿಗಬೇಕು. ಯುವ ಸಮೂಹಕ್ಕೆ ಬೆಂಬಲ ದೊರಕಬೇಕು ಎಂದು ಹೇಳುತ್ತಾ ಜ್ಞಾನಯೋಗ, ಕರ್ಮಯೋಗ ಮತ್ತು ರಾಜಯೋಗದಲ್ಲೂ ಸ್ವಾಮಿ ವಿವೇಕಾನಂದರ ಹೆಸರು ಅಜರಾಮರ ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. .ದಿನೇಶ್ ಮಾತನಾಡಿ, ಮಹಿಳೆಯರು ಸ್ವತಂತ್ರವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮಹಿಳೆಯು ತಾನು ದುಡಿಯುವ ಸಂಘ-ಸಂಸ್ಥೆಗಳಲ್ಲಿ, ಸಂಸ್ಥೆಗಳೇ ರಚಿಸಿರುವಂತಹ ಆಂತರಿಕ ದೂರು ಸಮಿತಿಯಿದ್ದು ಅದರಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ದುರ್ಘಟನೆಗಳು ಸಂಭವಿಸಿದ್ದಲ್ಲಿ ಸಮಿತಿಗೆ ತಿಳಿಸಿ ನ್ಯಾಯ ಪಡೆಯುವ ಅವಕಾಶವಿರುತ್ತದೆ ಎಂದು ಹೇಳಿದರು.
ಮಹಿಳೆಯು ಯಾರದೋ ಒತ್ತಡದ ನಿರ್ಧಾರಗಳಿಗೆ ಕಿವಿ ಕೊಡದೆ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಸ್ವತಂತ್ರ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಪರಾಧಗಳು ಕಂಡು ಬರುತ್ತಿದ್ದು, ಮಹಿಳೆಯರು ಆದಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಜಾಗರೂಕರಾಗಿ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ವೈದ್ಯನಾಥ್, ಐ.ಕ್ಯೂ.ಎ.ಸಿ ಸಂಚಾಲಕ ವಿ. ನಂದಕುಮಾರ್, ಯುವ ರೆಡ್ ಕ್ರಾಸ್ ಸಂಚಾಲಕ ಡಾ.ಎಂ.ಎನ್. ಕುಮಾರ್ ಇತರರು ಇದ್ದರು.