Shivamogga: ನೆರೆ ಹಾವಳಿಗೊಳಗಾದ ರೈತರ ಹೊಲಗಳಿಗೆ ಜಿಲ್ಲಾಧಿಕಾರಿ ಭೇಟಿ: ಮಳೆಹಾನಿ ಪ್ರದೇಶದಲ್ಲಿ ಪರಿಶೀಲನೆ
ಅತಿವೃಷ್ಟಿಯಿಂದ ಬೆಳೆಹಾನಿ ಸಂಭವಿಸಿರುವ ಶಿಕಾರಿಪುರ ತಾಲೂಕಿನ ಅಂಜನಾಪುರ ಹೋಬಳಿಯ ರೈತರ ಹೊಲಗಳಿಗೆ ಶಿವಮೊಗ್ಗ ಡಿಸಿ ಡಾ.ಸೆಲ್ವಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ: ರಾಜೇಶ್ ಕಾಮತ್, ಶಿವಮೊಗ್ಗ
ಶಿವಮೊಗ್ಗ (ಮೇ.22): ಅತಿವೃಷ್ಟಿಯಿಂದ ಬೆಳೆಹಾನಿ ಸಂಭವಿಸಿರುವ ಶಿಕಾರಿಪುರ ತಾಲೂಕಿನ ಅಂಜನಾಪುರ ಹೋಬಳಿಯ ರೈತರ ಹೊಲಗಳಿಗೆ ಶಿವಮೊಗ್ಗ ಡಿಸಿ ಡಾ.ಸೆಲ್ವಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಹಾನಿ ಕುರಿತು ಈಗಾಗಲೇ ಅಧಿಕಾರಿಗಳು ಪ್ರಾಥಮಿಕ ಹಾನಿ ವರದಿಯನ್ನು ಸಲ್ಲಿಸಿದ್ದಾರೆ. ಬೆಳೆ ಹಾನಿ ಕುರಿತು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಜಂಟಿ ಸರ್ವೇ ಕಾರ್ಯವನ್ನು ಆರಂಭಿಸಿದ್ದಾರೆ. ಸರ್ವೇ ಬಳಿಕ ನಿಖರ ವರದಿಯನ್ನು ಪಡೆದು ಆದಷ್ಟು ಶೀಘ್ರ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಅಕಾಲಿಕ ಮಳೆಯಿಂದಾಗಿ ರೈತರು ಕಟಾವು ಮಾಡ ರಾಶಿ ಹಾಕಿದ್ದ ಮುಸುಕಿನ ಜೋಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಮಳೆಯಿಂದಾಗಿ ಮೊಳೆತು ಉಪಯೋಗಕ್ಕೆ ಬಾರದಂತಾಗಿರುವುದು ಕಂಡು ಬಂದಿದೆ. ಈ ಹಾನಿಗಳಿಗೆ ಯಾವ ರೀತಿಯಲ್ಲಿ ಪರಿಹಾರವನ್ನು ಒದಗಿಸಬಹುದು ಎಂಬುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಭತ್ತದ ಗದ್ದೆಗಳಿಗೆ ಮಳೆ ನೀರು ನುಗ್ಗಿ ಭತ್ತದ ಪೈರಿನಲ್ಲಿ ಕೆಸರು ತುಂಬಿ ಹಾಳಾಗಿದೆ. ಕೆರೆಗಳ ಏರಿಗಳು ಒಡೆಯದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಕೆರೆಗಳ ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯತ್‌ಗಳಿಗೆ ಪೂರ್ಣ ಅಧಿಕಾರವಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ ಗ್ರಾಮಗಳಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದು ಅವರು ಹೇಳಿದರು.
Rajya Sabha Election: ರಾಜ್ಯಸಭೆಗೆ ಆಯ್ಕೆಗೆ ಬೆಂಬಲಿಸುವಂತೆ ಜೆಡಿಎಸ್ ಜತೆ ಚರ್ಚೆ: ಈಶ್ವರಪ್ಪ
ಬೆಳೆ ಹಾನಿ ವಿವರ: ಜಿಲ್ಲೆಯಲ್ಲಿ ಮೇ 17ರಿಂದ 21ರವರೆಗೆ ಬಿದ್ದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ 3097 ಹೆಕ್ಟೇರ್ ಬೆಳೆ ಹಾನಿಯನ್ನು ಅಂದಾಜಿಸಲಾಗಿದೆ. ಇದರಲ್ಲಿ 2518 ಹೆಕ್ಟೇರ್ ಮುಸುಕಿನ ಜೋಳ ಮತ್ತು 486 ಭತ್ತದ ಬೆಳೆಗಳಿಗೆ ಹಾನಿಯಾಗಿದೆ. ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಹೂಳು ತುಂಬಿದೆ. ಶಿಕಾರಿಪುರದಲ್ಲಿ 250ಹೆಕ್ಟೇರ್ ಭತ್ತ ಮತ್ತು 1230ಹೆಕ್ಟೇರ್ ಮುಸುಕಿನ ಜೋಳಕ್ಕೆ ಹಾನಿಯಾಗಿದ್ದು, ಸೊರಬ ತಾಲೂಕಿನಲ್ಲಿ 128ಹೆಕ್ಟೇರ್ ಭತ್ತ ಮತ್ತು 1244 ಹೆಕ್ಟೇರ್ ಮುಸುಕಿನ ಜೋಳಕ್ಕೆ ಹಾನಿಯಾಗಿದೆ. ಜಿಲ್ಲಾಧಿಕಾರಿ ಶಿಕಾರಿಪುರ ತಾಲೂಕಿನ ಅತ್ತಿಬೈಲು, ಹಾರೋಗೊಪ್ಪಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕಾರಿಪುರ ತಹಶೀಲ್ದಾರ್ ಕವಿರಾಜ್, ಕೃಷಿ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೊನೆಗೂ ಬಿಡುವು ಕೊಟ್ಟ ಮಳೆ: 3-4 ದಿನಗಳಿಂದ ವ್ಯಾಪಕವಾಗಿ ಸುರಿದಿದ್ದ ಮಳೆ ಶನಿವಾರ ವೇಳೆಗೆ ಬಹುತೇಕ ಕ್ಷೀಣಿಸಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಆಗಾಗ ತುಂತುರು, ಜಿಟಿಜಿಟಿ ಮಳೆ ಬೀಳುತ್ತಿದೆ. ಆದರೆ ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿದಿದೆ. ಭಟ್ಕಳ, ಕುಮಟಾ, ಹೊನ್ನಾವರ, ಶಿರಸಿ, ಸಿದ್ಧಾಪುರ, ಯಲ್ಲಾಪುರಗಳಲ್ಲಿ ಮಳೆ ಅಬ್ಬರಿಸಿತ್ತು. ಬಿರುಗಾಳಿ ಮಳೆಗೆ ಉರುಳಿದ ಮರಗಳಿಂದ ಕೆಲವು ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು. ಜನಜೀವನದಲ್ಲಿ ವ್ಯತ್ಯಯ ಉಂಟಾಗಿತ್ತು. ಬಹುತೇಕ ಕಡೆಗಳಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಮುಂಡಗೋಡದಲ್ಲಿ ರಸ್ತೆಯ ಮೇಲೆ ಮರಗಳು ಉರುಳಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
Shivamogga: ಮಲೆನಾಡಿನಲ್ಲಿ ನೋಡುಗರ ಕಣ್ಮನ ಸೆಳೆದ ಕೆರೆಬೇಟೆ ಹಬ್ಬ!
ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಮತ್ತೆ ಮುಂದುವರಿಯುವ ಆತಂಕವೂ ಉಂಟಾಗಿತ್ತು. ಆದರೆ ಶನಿವಾರ ಬೆಳಗ್ಗೆ ಆಗುತ್ತಿದ್ದಂತೆ ಕವಿದ ಕಾರ್ಮೋಡ ಕರಗದಿದ್ದರೂ ಮಳೆ ಮಾತ್ರ ಇಳಿಮುಖವಾಯಿತು. ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ನಗರ ಪ್ರದೇಶದಲ್ಲಿ ಮಳೆಗಾಲದ ಸಿದ್ಧತೆಗೆ ಮಳೆ ಕೈಕೊಟ್ಟಿತು. ಎಲ್ಲೆಡೆ ಚರಂಡಿಗಳಲ್ಲಿ ತುಂಬಿದ ತ್ಯಾಜ್ಯ, ಹೂಳನ್ನು ತೆಗೆಯಲಾಗಿಲ್ಲ. ಮಳೆಗಾಲದ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆಯಾಗಿಲ್ಲ. ಅಷ್ಟರಲ್ಲಿ ಮಳೆ ಅಬ್ಬರಿಸಿತ್ತು. ಮೇ ಅಂತ್ಯದಲ್ಲಿ ಮಳೆಗಾಲದ ಸಿದ್ಧತೆಯಲ್ಲಿ ಜನತೆ ಬಿರುಸಿನಿಂದ ತೊಡಗಿಕೊಳ್ಳುತ್ತಾರೆ.