ಮೈಸೂರು(ಏ.12): ವರದಕ್ಷಿಣೆ ಕಿರುಕುಳ ತಾಳಲಾರದೆ ಮನನೊಂದ ಮಹಿಳೆ ತನ್ನ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹೆಮ್ಮಿಗೆಯಲ್ಲಿ ಶನಿವಾರ ಜರುಗಿದೆ. ಸೀಮಾ ಬಾನು(24), ಪುತ್ರಿ ಮನ್‌ ಹಾ ಬಾನು(03) ಮೃತರು.

ಸೀಮಾ ಬಾನು ಹೆಮ್ಮಿಗೆಯವರಾಗಿದ್ದು, ಅದೇ ಗ್ರಾಮದ ಸೈಯದ್‌ ಸದ್ದಾಂ ಅವರನ್ನು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಅವಳಿ ಜವಳಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದವು, ಗಂಡ ಹೆಂಡತಿಯ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ಶನಿವಾರ ಬೆಳಗ್ಗೆ ಸಹ ಮನೆಯಲ್ಲಿ ಜಗಳವಾಗಿದೆ.

ನಾನ್‌ವೆಜ್‌ಗಾಗಿ ಶಿಸ್ತಿನ ಸಿಪಾಯಿಗಳಾದ ಜನ: ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಮಂದಿ!

ಬೆಳಗ್ಗೆ ಸೈಯದ್‌ ಸದ್ದಾಂ ಜಮೀನಿಗೆ ತೆರಳಿದ್ದು, ಜೊತೆಯಲ್ಲಿ ಆತನ ತಂದೆ ಮತ್ತು ತಾಯಿ ಅವರ ಮೂರು ವರ್ಷದ ಗಂಡು ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಸೀಮಾ ಬಾನು ಮನೆಯಲ್ಲಿ ತನ್ನ ಹೆಣ್ಣು ಮಗುವನ್ನು ಸಾಯಿಸಿ ತಾನೂ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೀಮಾ ಬಾನು ತಂದೆ ಕಲೀಮುಲ್ಲಾ ಷರೀಫ್‌ ಪಿರಿಯಾಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸೈಯದ್‌ ಸದ್ದಾಂನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.