Disha Amrit: ಗಣರಾಜ್ಯೋತ್ಸವದಲ್ಲಿ ನೌಕಾ ಪರೇಡ್ ಮುನ್ನಡೆಸಿದ ಕುಡ್ಲಾದ ಕುವರಿ ದಿಶಾ ಅಮೃತ್
: ದೆಹಲಿಯಲ್ಲಿ ಜ.26ರಂದು ನಡೆಯುವ 74ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ನೌಕಾದಳದ ತುಕಡಿಯ ನೇತೃತ್ವವನ್ನು ಪಥಸಂಚಲನದಲ್ಲಿ ಮುನ್ನಡೆಸುವ ಅವಕಾಶ ಮಂಗಳೂರಿನ ಕುವರಿ, ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ದಿಶಾ ಅಮೃತ್ ಅವರಿಗೆ ಲಭಿಸಿದೆ.
ಮಂಗಳೂರು (ಜ.27) : ದೆಹಲಿಯಲ್ಲಿ ಜ.26ರಂದು ನಡೆಯುವ 74ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ನೌಕಾದಳದ ತುಕಡಿಯ ನೇತೃತ್ವವನ್ನು ಪಥಸಂಚಲನದಲ್ಲಿ ಮುನ್ನಡೆಸುವ ಅವಕಾಶ ಮಂಗಳೂರಿನ ಕುವರಿ, ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ದಿಶಾ ಅಮೃತ್ ಅವರಿಗೆ ಲಭಿಸಿದೆ.
ದಿಶಾ ಅಮೃತ್ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ. ಈಕೆಗೆ ನೌಕಾ ಪಡೆಯ ಅಧಿಕಾರಿ ಆಗಬೇಕೆಂಬ ಆಸೆ ಬಾಲ್ಯದಲ್ಲೇ ಇತ್ತು. 8ನೇ ತರಗತಿಯಿಂದಲೇ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿದ್ದರು. ಶಾಲೆಯಲ್ಲಿ ಕಲಿಯುತ್ತಿರುವಾಗಲೇ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿದ್ದರು. ದಿಶಾ ಅವರು ಪ್ರಾಥಮಿಕದಿಂದ ಪಿಯು ವರೆಗೆ ನಗರದ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ಎನ್‌ಸಿಸಿ ಸೇರ್ಪಡೆಗಾಗಿ ಅಲೋಶಿಯಸ್ ಎನ್‌ಸಿಸಿ ಘಟಕದಲ್ಲಿ ತರಬೇತಿ ಪಡೆಯುತ್ತಿದ್ದರು. ಬಳಿಕ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತಿದ್ದಾರೆ. ಆಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸುತ್ತಿದ್ದರು. ಸತತ ಪ್ರಯತ್ನದ ಫಲವಾಗಿ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು.
ಬಂಟ್ವಾಳದ ಅಮೃತ ಸರೋವರ ಬಳಿ ಗಣರಾಜ್ಯೋತ್ಸವ ಕಾರ್ಯಕ್ರಮ
ಇವರು 2016 ರಲ್ಲಿ ನೌಕಾಪಡೆಗೆ ಸೇರಿದ್ದು, 2017ರಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ದಿಶಾ ಅಮೃತ್ ಅವರು ಮುನ್ನಡೆಸುವ ನೌಕಾಪಡೆ ತಂಡ 144 ಯುವ ನಾವಿಕರನ್ನು ಒಳಗೊಂಡಿದ್ದು, ನಾರಿ ಶಕ್ತಿ ಸ್ತಬ್ಧಚಿತ್ರ ಇರಲಿದೆ. ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರ್‌ಗಳು ಭಾಗವಹಿಸಲಿದ್ದಾರೆ. ದಿಶಾ ಅಮೃತ್ ಅವರ ಜತೆಗೆ ಮತ್ತೊಬ್ಬ ಮಹಿಳಾ ಅಧಿಕಾರಿ, ಸಬ್ ಲೆಫ್ಟಿನೆಂಟ್‌ನಲ್ಲಿ ಮೀನಾ ಎಸ್. ಕೂಡಾ ಇರಲಿದ್ದಾರೆ.
‘ನನ್ನ ತಂದೆ ಕೂಡ ಸೇನೆಯ ಭಾಗವಾಗಿರಲು ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ನಾನು ಇಂದು ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ, ನೌಕಾಪಡೆಗೆ ಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುತ್ತೇನೆ ಎಂದು ದಿಶಾ ಹೇಳಿಕೊಂಡಿದ್ದಾರೆ. 29ರ ಹರೆಯದ ದಿಶಾ ಅಮೃತ್ ಅವರು ಲೆಫ್ಟಿನೆಂಟ್ ಕಮಾಂಡರ್ ನೌಕಾಯಾನ ಕಾರ್ಯಾಚರಣೆಯ ಅಧಿಕಾರಿಯಾಗಿದ್ದು, ಅಂಡಮಾನ ಮತ್ತು ನಿಕೋಬಾರ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 2008ರಲ್ಲಿ ನ್ಯಾಷನಲ್ ಕೆಡೆಟ್ ಕಾಫ್ಸ್‌ರ್ ಗಣರಾಜ್ಯೋತ್ಸವ ತಂಡದ ಭಾಗವಾಗಿದ್ದರು.
ಗಣರಾಜ್ಯೋತ್ಸವ ಪರೇಡ್ ಮುನ್ನಡೆಸುವ ಸಲುವಾಗಿ ನ.10 ಮತ್ತು 11ರಂದು ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆಯ್ಕೆಯಾದ ಬಳಿಕ ನ.18ರಿಂದ ತರಬೇತಿ ನೀಡಲಾಗುತ್ತಿದೆ. ನಮ್ಮ ಆಸೆ ಮಗಳು ಈಡೇರಿಸಿದಳು ಎಂದು ದಿಶಾರ ತಂದೆ ಅಮೃತ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕ್ರೈಸ್ತರ ವೇದಿಕೆ ಅಭಿನಂದನೆ:
ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ನೌಕಾದಳದ ತುಕಡಿಯ ನೇತೃತ್ವವನ್ನು ಪಥಸಂಚಲನದಲ್ಲಿ ಮುನ್ನಡೆಸುವ ಅವಕಾಶವನ್ನು ಪಡೆದಿರುವುದಕ್ಕಾಗಿ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಇವರಿಗೆ ಮಂಗಳೂರಿನ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಅಭಿನಂದನೆ ಸಲ್ಲಿಸಿದೆ.
ಜೀವನದ ಅತ್ಯಂತ ಅವಿಸ್ಮರಣೀಯವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ದೇಶದ ಸೇನಾಪಡೆಯ ಭಾಗವಾಗಿರುವ ನೌಕಾದಳದ ತುಕಡಿಯನ್ನು ಮುನ್ನಡೆಸುತ್ತಿರುವುದು ದೇಶ ಹೆಮ್ಮೆ ಪಡುವ ವಿಷಯವಾಗಿದೆ ಎಂದು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೊ ಹರ್ಷ ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೇ ಪಾಕ್ 4 ಹೋಳಾಗುತ್ತದೆ, 3 ಭಾಗ ಭಾರತದ ಜೊತೆ ವಿಲೀನವಾಗಲಿದೆ: ಬಾಬಾ ರಾಮ್‌ದೇವ್!
ಈ ಆಯ್ಕೆಗಾಗಿ ಹಗಲಿರುಳು ತನ್ನ ಕಠಿಣ ಪರಿಶ್ರಮದ ಮೂಲಕ ತನ್ನ ಸಾಮರ್ಥ್ಯವನ್ನು ಸಾದರಪಡಿಸಿದ ಲೆಫ್ಟಿನೆಂಟ್ ಕಮಾಂಡರ್ ಕುಮಾರಿ ದಿಶಾ ದಕ್ಷಿಣ ಕನ್ನಡ, ಕರಾವಳಿಗೆ ಮಾತ್ರವಲ್ಲದೆ, ರಾಜ್ಯದ ಯುವಜನಾಂಗಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದವರು ಹೇಳಿದ್ದಾರೆ.