ಬಂಟ್ವಾಳದ ಅಮೃತ ಸರೋವರ ಬಳಿ ಗಣರಾಜ್ಯೋತ್ಸವ ಕಾರ್ಯಕ್ರಮ
ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರದ ದಡದ ಬಳಿಕ ಧ್ವಜಾರೋಹಣ ನಡೆಸಲಾಯಿತು. ಈ ವೇಳೆ ಅಮೃತ ಸರೋವರದ ಪ್ರಾಮುಖ್ಯತೆಯ ಕುರಿತು ತಿಳಿಸಲಾಯಿತು.
ಬಂಟ್ವಾಳ (ಜ.26): 74ನೇ ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ನ ಅಮೃತ ಸರೋವರದ ಕಲ್ಕುಟ ಕೊಳದ ಬಳಿ ಕೆರೆ ದಂಡೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದಂದು ಕೆರೆಯ ಬಳಿ ಧ್ವಜಾರೋಹಣ ಕಾರ್ಯಕ್ರಮದಿಂದ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಬಗ್ಗೆ ಜನರಿಗೆ ತಿಳಿಸಲು ಅನುಕೂಲವಾಗಿದೆ. ಮಕ್ಕಳಿಗೂ ಅಮೃತ ಸರೋವರದ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವುದರಿಂದ ಜಲ ಸಂರಕ್ಷಣೆ ಮುಂದಿನ ದಿನಗಳಲ್ಲಿ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಕೆರೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು. ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 100 ದಿನಗಳನ್ನು ಪೂರ್ಣಗೊಳಿಸಿದ ಇಬ್ಬರು ಫಲಾನುಭವಿಗಳಿಗೆ ಟಿ-ಶರ್ಟ್ ಮತ್ತು ಕ್ಯಾಪ್ ಸಾಂಕೇತಿಕವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ವೀಣಾ ಆಚಾರ್ಯ, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲಿನಿ, ತಾಲೂಕು ಐಇಸಿ ಸಂಯೋಜಕರಾದ ರಾಜೇಶ್, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.