ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮಾಡಲು ಸಿಎಂ ಜೊತೆ ಚರ್ಚೆ: ಎಂ.ಬಿ.ಪಾಟೀಲ
ಈ ಹಿಂದೆ ನಾನೇ ಉಸ್ತುವಾರಿ ಸಚಿವನಾಗಿದ್ದಾಗ ಬಿಜಾಪುರ ಇರುವುದನ್ನು ವಿಜಯಪುರ ಅಂತ ಮಾಡಲಾಗಿತ್ತು. ಮೆರಿಟ್ ಆಧರಿಸಿ, ಇತಿಹಾಸವನ್ನು ಗಮನದಲ್ಲಿರಿಸಿಕೊಂಡು ಆ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ವಿಜಯಪುರ ಹೆಸರನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಸವಣ್ಣನವರು ಜನಿಸಿದ ಜಿಲ್ಲೆ ಇದು, ಇದಕ್ಕೆ ಯಾರೊಬ್ಬರದ್ದೂ ವಿರೋಧ ಇಲ್ಲ ಎಂದ ಸಚಿವ ಎಂ.ಬಿ.ಪಾಟೀಲ
ವಿಜಯಪುರ(ನ.02): ಬಸವೇಶ್ವರರ ಹೆಸರನ್ನು ಜಿಲ್ಲೆಗೆ ಇಟ್ಟು ಸೀಮಿತ ಮಾಡಬಾರದು. ಜಾಗತಿಕ ಮಟ್ಟದಲ್ಲಿ ಹೆಸರಿದೆ. ವಿಶ್ವದ ಗುರು ಆಗಿದ್ದು, ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮಾಡುವಂತೆ ಸಿಎಂ ಜೊತೆ ಚರ್ಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನೇ ಉಸ್ತುವಾರಿ ಸಚಿವನಾಗಿದ್ದಾಗ ಬಿಜಾಪುರ ಇರುವುದನ್ನು ವಿಜಯಪುರ ಅಂತ ಮಾಡಲಾಗಿತ್ತು. ಮೆರಿಟ್ ಆಧರಿಸಿ, ಇತಿಹಾಸವನ್ನು ಗಮನದಲ್ಲಿರಿಸಿಕೊಂಡು ಆ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ವಿಜಯಪುರ ಹೆಸರನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಸವಣ್ಣನವರು ಜನಿಸಿದ ಜಿಲ್ಲೆ ಇದು, ಇದಕ್ಕೆ ಯಾರೊಬ್ಬರದ್ದೂ ವಿರೋಧ ಇಲ್ಲ ಎಂದರು.
ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ಸಚಿವ ಎಂ.ಬಿ. ಪಾಟೀಲ
ಬೆಂಗಳೂರು ಮೆಟ್ರೋಗೆ ನಮ್ಮ ಬಸವೇಶ್ವರ ಮೆಟ್ರೊ ಎಂದು ನಾಮಕರಣ ಮಾಡಲು ನಾನು ಬದ್ಧವಾಗಿದ್ದೇನೆ. ಈ ಹಿಂದೆ ವೀರಶೈವ ಮಹಾಸಭಾದವರು ಇದನ್ನು ಹೇಳಿದರು. ನಾಡಪ್ರಭು ಕೆಂಪೇಗೌಡ ಎಂದು ಕರೆಯುವಂತೆ, ಮೆಟ್ರೋಗೆ ನಾಮಕರಣ ಮಾಡಲು ಚಿಂತನೆ ನಡೆದಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರು ಸಾಂಸ್ಕೃತಿಕ ರಾಯಭಾರಿ ಆಗಿದ್ದಾರೆ. ಹಾಗೆ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಇಡುವ ಮೂಲಕ ಅವರ ಗೌರವ ಹೆಚ್ಚಿಸಲಾಗುತ್ತದೆ. ಜಿಲ್ಲೆಗೆ ಬಸವೇಶ್ವರ ಹೆಸರು ಇಡೋದು ರಾಜಕಾರಣಿಗಳಿಂದ ಬಂದಿಲ್ಲ. ಇದು ಸಂಘ-ಸಂಸ್ಥೆಗಳಿಂದ ಬಂದಿದೆ. ಬಸವೇಶ್ವರ ಮೂರ್ತಿಯನ್ನು ಲಂಡನ್‌ನ ಥೇಮ್ಸ್ ನದಿ ದಡದಲ್ಲಿ ಸ್ಥಾಪನೆ ಮಾಡಲಾಗಿದೆ ಎಂದರು.
ಇಂಡಿ ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮಾತನಾಡಿದ ಅವರು, ಕಾಲಕಾಲಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಮಾಡುತ್ತದೆ. ಅದು ಅಲ್ಲಿಯ ಶಾಸಕರ ಬೇಡಿಕೆ ಇರುತ್ತದೆ. ಅದು ಸ್ವಾಭಾವಿಕ. ಅದು ತಪ್ಪಲ್ಲ ಎಂದು ಹೇಳಿದರು.
ಬಸವನಾಡು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಸವೇಶ್ವರ ಜನ್ಮಸ್ಥಳ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಸರ್ಕಾರದಿಂದ ಆಗಬೇಕಿದೆ. ಕೂಡಲಸಂಗಮದಲ್ಲಿ ಅಭಿವೃದ್ಧಿ ಆಗಬೇಕು. ನಾನೇ ₹139 ಕೋಟಿ ಮ್ಯೂಸಿಯಂಗೆ ಕೊಟ್ಟಿದ್ದೆ. ಅದು ಕಾರಣಾಂತರಗಳಿಂದ ತಕ್ಕಮಟ್ಟಿಗೆ ಅಭಿವೃದ್ಧಿ ಆಗಿಲ್ಲ ಎಂದರು.
ಮರಾಠ ನೆಲದಲ್ಲಿ "ಕನ್ನಡ ಡಿಂಡಿಮ" ಬಾರಿಸಿದ್ದ ಹೆಮ್ಮೆಯ ಕನ್ನಡಿಗ..!
ಸರ್ಕಾರ ಎಲ್ಲವನ್ನೂ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ. ಗೊಂದಲ ಸೃಷ್ಟಿ ಬೇಡ. ಬಸವೇಶ್ವರರು ಶ್ರೇಷ್ಠ ಗುರು. ಸಂವಿಧಾನ ಬೇರೆ ಅಲ್ಲ, ಬಸವೇಶ್ವರರ ಚಿಂತನೆ ಬೇರೆ ಅಲ್ಲ. ರಾಜ್ಯಕ್ಕೆ ಅಂಬೇಡ್ಕರ್ ಹೆಸರು ವಿಚಾರ ತಪ್ಪೇನಿದೆ. ಎಲ್ಲವನ್ನೂ ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ. ಅಂಬೇಡ್ಕರರು ಸಂವಿಧಾನ ಕೊಟ್ಟವರು ಎಂದು ಹೇಳಿದರು.
ಮೈಸೂರು ರಾಜ್ಯದಿಂದ ಕರ್ನಾಟಕ ರಾಜ್ಯವಾಗಿ ಅಧಿಕೃತವಾಗಿ ೫೦ ವರ್ಷಗಳು ಪೂರ್ಣವಾಗಿವೆ. ಕರ್ನಾಟಕ ಏಕೀಕರಣಕ್ಕೆ ಅನೇಕ ಹಿರಿಯರು, ಸಂಘ, ಸಂಸ್ಥೆಗಳ ತ್ಯಾಗ ಬಲಿದಾನದಿಂದ ಇಂದು ನಮಗೆ ಕರ್ನಾಟಕ ಉದಯವಾಗಿದೆ. ಇಡೀ ವಿಶ್ವದಲ್ಲಿ ಕರ್ನಾಟಕ ರಾಜ್ಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾತ್ಯತೀತ, ಸಮಾನವಾಗಿ ದಾಪುಗಾಲು ಇಡುತ್ತದೆ. ಇಂದು ನಮ್ಮ ಆದ್ಯ ಕರ್ತವ್ಯ. ಧಾರವಾಡದಲ್ಲಿ ಕರ್ನಾಟಕ ಸಂಘವು ಹೋರಾಟ ಮಾಡಿದ್ದು, ಇಂದು ಸ್ಮರಣೆ ಮಾಡಬೇಕು. ಕನ್ನಡ ಉಳಿಸಿ. ತಮ್ಮ ಕೊಡುಗೆ ನೀಡಿದ್ದಾರೆ. ಅದನ್ನು ಸ್ಮರಣ ಮಾಡಬೇಕು ಎಂದರು.