ಯುಕೆಪಿ ಭೂಸ್ವಾಧೀನ ಪರಿಹಾರದಲ್ಲಿ ತಾರತಮ್ಯ: ಎಂ.ಬಿ. ಪಾಟೀಲ
ತಮ್ಮನ್ನು ತಾವೇ ಮೇಧಾವಿ ಎಂದುಕೊಂಡಿರುವ ಸಚಿವರೊಬ್ಬರು ಈ ತಾರತಮ್ಯಕ್ಕೆ ಕಾರಣರಾಗಿದ್ದಾರೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಗೋವಿಂದ ಕಾರಜೋಳ ಮತ್ತು ಮುರಗೇಶ ನಿರಾಣಿ ರೈತರಿಗೆ 40 ಲಕ್ಷ ಮತ್ತು 50 ಲಕ್ಷ ಪರಿಹಾರ ನೀಡಲು ಒತ್ತಾಯಿಸಿದ್ದರು. ಆದರೆ, ತಮ್ಮ ಅಧಿಕಾರ ಅವಧಿಯಲ್ಲಿ ತಾವೇ ಹೇಳಿದಷ್ಟುಪರಿಹಾರ ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದ ಎಂ.ಬಿ. ಪಾಟೀಲ.
ವಿಜಯಪುರ(ಮಾ.25): ಯುಕೆಪಿ 3ನೇ ಹಂತದ ಭೂಸ್ವಾಧೀನ ಪರಿಹಾರ ತಾರತಮ್ಯದಿಂದ ಕೂಡಿದೆ. ವಿಜಯಪುರ ಜಿಲ್ಲೆಯ ರೈತರು ಕನ್ಸೆಂಟ್ ಪತ್ರ ಪಡೆದರೆ ಅನ್ಯಾಯಕ್ಕೆ ಒಳಗಾಗಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮನ್ನು ತಾವೇ ಮೇಧಾವಿ ಎಂದುಕೊಂಡಿರುವ ಸಚಿವರೊಬ್ಬರು ಈ ತಾರತಮ್ಯಕ್ಕೆ ಕಾರಣರಾಗಿದ್ದಾರೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಗೋವಿಂದ ಕಾರಜೋಳ ಮತ್ತು ಮುರಗೇಶ ನಿರಾಣಿ ರೈತರಿಗೆ 40 ಲಕ್ಷ ಮತ್ತು 50 ಲಕ್ಷ ಪರಿಹಾರ ನೀಡಲು ಒತ್ತಾಯಿಸಿದ್ದರು. ಆದರೆ, ತಮ್ಮ ಅಧಿಕಾರ ಅವಧಿಯಲ್ಲಿ ತಾವೇ ಹೇಳಿದಷ್ಟುಪರಿಹಾರ ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಕೆಲವರ ಒತ್ತಡ ತಾಳಲಾರದೇ ಕಣ್ಣೀರಿಟ್ಟ ಶ್ರೀಗಳು: ಸಂಗಮೇಶ ಬಬಲೇಶ್ವರ ಆರೋಪ
ಬೀಳಗಿ ಭಾಗದ ರೈತರಿಗೆ ಘೋಷಿಸಲಾಗಿರುವ ಭೂಸ್ವಾಧೀನ ಪರಿಹಾರದ ವಿರುದ್ಧ ಅಲ್ಲಿನ ರೈತರು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಆದರೆ, ವಿಜಯಪುರ ಜಿಲ್ಲೆಯ ರೈತರಿಗೆ ಕನ್ಸೆಂಟ್ ಹೆಸರಿನಲ್ಲಿ ಅನ್ಯಾಯ ಮಾಡಲಾಗಿದ್ದು, ಇಲ್ಲಿನ ರೈತರು ಕನ್ಸೆಂಟ್‌ಗೆ ಒಪ್ಪಿದರೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಿಲ್ಲ. ಹೀಗಾಗಿ, ಈ ಭಾಗದ ರೈತರು ಅದನ್ನು ಒಪ್ಪಿದರೆ ಮೋಸ ಹೋದಂತೆ ಎಂದು ಎಚ್ಚರಿಕೆ ನೀಡಿದ ಅವರು, ಈ ತಾರತಮ್ಯದ ಕುರಿತು ನಾನು ಬಹಿರಂಗ ಸಭೆಯಲ್ಲಿ ಸಿಎಂ ಗಮನಕ್ಕೆ ತಂದಿದ್ದೇನೆ. ಅವರು ಇದನ್ನು ಮಾಡದಿದ್ದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾರತಮ್ಯ ಸರಿಪಡಿಸುತ್ತೇವೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿರೋಧಿಗಳಿಗೆ ಮತ ಹಾಕಿದರೆ ಓಣಿಗೊಂದು ಮದ್ಯದ ಅಂಗಡಿ, ಪೊಲೀಸ್ ಠಾಣೆ ತೆರೆಯುತ್ತಾರೆ. ತಮ್ಮ ಸಂಸಾರ ಹಾಳು ಮಾಡಲು ಪೊಲೀಸ್ ಠಾಣೆಗಳಿಗೆ ಅಲೆದಾಡುವಂತೆ ಮಾಡುತ್ತಾರೆ. 4 ವರ್ಷ ಜನರ ಶೋಷಣೆ ಮಾಡಿರುವ ಅವರು ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಂಥ ಕಣ್ಣೀರ ಹಾಕುವ ಗಂಡಸರನ್ನು ನಂಬಬಾರದು. ನಾವು ಅಧಿಕಾರಕ್ಕೆ ಬಂದ ಮೇಲೆ ಬಬಲೇಶ್ವರ ಮತಕ್ಷೇತ್ರಾದ್ಯಂತ ಕಿರಾಣಿ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತೇವೆ. ತಾವು ವಿರೋಧಿಯ ಡೆಪಾಸಿಟ್ ಜಪ್ತಿ ಮಾಡಲು ಸಹಕರಿಸಬೇಕು ಎಂದು ಹೇಳಿದರು.
ಆಶಾ ಪಾಟೀಲ ಮಾತನಾಡಿದರು. ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿ ಎಂ.ಬಿ.ಪಾಟೀಲ, ಸುನೀಲಗೌಡ ಪಾಟೀಲ ಮತ್ತು ಬಸನಗೌಡ ಪಾಟೀಲ ಅವರನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ಮೆರವಣಿಗೆ ಮೂಲಕ ಕರೆತಂದರು.
ನಿವೃತ್ತ ಶಿಕ್ಷಕ ವೆಂಕಟೇಶ ಅರಕೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೇಣುಕಾ ಪಾಟೀಲ, ಈರನಗೌಡ ಬಿರಾದಾರ, ವಿದ್ಯಾರಾಣಿ ತುಂಗಳ, ಕಲ್ಪನಾ ಪಾಟೀಲ, ಬಸವರಾಜ ದೇಸಾಯಿ, ಜ್ಯೋತಿ ಬಸವರಾಜ ದೇಸಾಯಿ, ಕುಮಾರ ದೇಸಾಯಿ, ಭಾಗೀರಥಿ ತೇಲಿ, ಜಂಗಮಶೆಟ್ಟಿ, ವಿ.ಎಸ್.ಪಾಟೀಲ, ಎಚ್.ಎಸ್.ಕೋರಡ್ಡಿ, ಲಕ್ಷ್ಮಣ ತೇಲಿ, ಎಚ್.ಎಸ್.ಬಿರಾದಾರ, ವಿ.ಎಚ್.ಬಿದರಿ, ಶೋಭಾ ಬಿದರಿ, ಪ್ರಶಾಂತ ದೇಸಾಯಿ ಅಲ್ಲದೇ, ದೇವರಗೆಣ್ಣೂರ, ಹಂಗರಗಿ, ಬೆಳ್ಳುಬ್ಬಿ, ಜೈನಾಪುರ, ಮಂಗಳೂರು, ಉಪ್ಪಲದಿನ್ನಿ, ಕೊಡಬಾಗಿ, ತಾಜಪುರ, ಲಿಂಗದಳ್ಳಿ, ಸುತಗುಂಡಿ, ದೇವಾಪುರ, ಹೊಸೂರ, ಜಂಬಗಿ ಎಚ್, ಚಿಕ್ಕಗಲಗಲಿ, ಕಣಬೂರ, ಶಿರಬೂರ, ಬಬಲಾದಿ, ಕೆಂಗಲಗುತ್ತಿ, ಗುಣದಾಳ, ದೂಡಿಹಾಳ, ಮಮದಾಪುರ, ಹಂಚನಾಳ, ಖಿಲಾರಹಟ್ಟಿ, ಬೋಳಚಿಕ್ಕಲಕಿ ಗ್ರಾಮಸ್ಥರು ಉಪಸ್ಥಿತರಿದ್ದರು.