ಕೆಲವರ ಒತ್ತಡ ತಾಳಲಾರದೇ ಕಣ್ಣೀರಿಟ್ಟ ಶ್ರೀಗಳು: ಸಂಗಮೇಶ ಬಬಲೇಶ್ವರ ಆರೋಪ

• ಕೂಡಲಸಂಗಮ ಜಗದ್ಗುರುಗಳ ಮೇಲೆ ಕೆಲವರಿಂದ ಭಾರಿ ಒತ್ತಡ
• ಶ್ರೀಗಳಿಂದ ಆತ್ಮಸಾಕ್ಷಿಗೆ ವಿರುದ್ಧವಾದ ಹೇಳಿಕೆ ಕೊಡಿಸಿದ್ದಾರೆ
• ವಿಜಯಪುರದಲ್ಲಿ ಸಂಗಮೇಶ ಬಬಲೇಶ್ವರ ಗಂಭೀರ ಆರೋಪ..!

Swamiji could not bear pressure from some people burst into tears Sangamesh Babaleshwar sat

ವಿಜಯಪುರ (ಮಾ.25) :  ಕೂಡಲ ಸಂಗಮ ಪಂಚಮಸಾಲಿ ಜಯಮೃತ್ಯುಂಜ ಸ್ವಾಮೀಜಿಗಳು ಕೆಲವರು ನೀಡುತ್ತಿರುವ ರಾಜಕೀಯ ಒತ್ತಡವನ್ನು ತಾಳಲಾರದೆ ಕಣ್ಣೀರಿಟ್ಟಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಅಭಿಪ್ರಾಯಪಟ್ಟಿದ್ದಾರೆ. 

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಶ್ರೀಗಳ ಕಣ್ಣೀರಿಗೆ ಕಾರಣರಾದವರ ಬಗ್ಗೆ ನನಗೆ ಆಕ್ರೋಶವಿದೆ ಎಂದಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ  ದೊರಕಿಸಿ ಕೊಡೋದರ ಮೂಲಕ ಸಮುದಾಯದ ಮಕ್ಕಳ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿಗಾಗಿ ಪುಜ್ಯರು ಐತಿಹಾಸಿಕ ಹೋರಾಟ ಮಾಡಿದ್ದಾರೆ. ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಕಣ್ಣೀರಿನ ಶಾಪ ಸಮುದಾಯವನ್ನು ಹಾಗೂ ಸಮುದಾಯದ ಜಗದ್ಗುರುಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡವರಿಗೆ ತಟ್ಟದೇ ಬಿಡುವುದಿಲ್ಲ ಎಂದು ತಮ್ಮ ಅಸಮಧಾನ ಹೊರ ಹಾಕಿದ್ದಾರೆ. 

ಪಂಚಮಸಾಲಿಗೆ 2ಡಿ ಮೀಸಲಾತಿ: ಹೋರಾಟ ಸಮಿತಿ ಇಬ್ಭಾಗದಿಂದ ಕಣ್ಣೀರಿಟ್ಟ ಸ್ವಾಮೀಜಿ

ಶ್ರೀಗಳ ಆತ್ಮಸಾಕ್ಷಿ ವಿರುದ್ಧ ಹೇಳಿಕೆ: ನಮ್ಮ ಸಮುದಾಯಕ್ಕೆ ಬೇಕಾಗಿದ್ದು 2ಎ ಮೀಸಲಾತಿ, ಇಲ್ಲವೇ ತತ್ಸಮಾನವಾದ ಸೌಲಭ್ಯಗಳೇ ಹೊರತು, 2ಡಿ ಮೀಸಲಾತಿಯಲ್ಲ. ನಮ್ಮ ಜಗದ್ಗುರುಗಳು ಭಾವುಕರಾಗಿ ಕಣ್ಣೀರಿಡುತ್ತಾ "ಹೋರಾಟದ ಮೊದಲ ಹೆಜ್ಜೆ ಇದು, ಹೋರಾಟ ಚುನಾವಣೆ ನಂತರ ನಿರಂತರವಾಗಿರುತ್ತದೆ ಎನ್ನುವ ಹೇಳಿಕೆಯನ್ನ ಸ್ವಾಮೀಜಿ ಮೂಲಕ ಸ್ವಾಮೀಜಿಯವರ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೊಡಿಸಲಾಗಿದೆ. ನಮ್ಮ ಜಗದ್ಗುರುಗಳು ಯಾವುದೇ ಒಬ್ಬಿಬ್ಬರ ಒತ್ತಡಕ್ಕೂ ಮಣಿಯಬಾರದು ಎಂದು ಮನವಿ ಮಾಡಿದರು.

ಸ್ವಾರ್ಥಕ್ಕಾಗಿ ಸಮಾಜ, ಗುರುಗಳ ಬಳಕೆ: ರಾಜ್ಯದಲ್ಲಿ ಸರ್ಕಾರಗಳು ಬರುತ್ತವೆ ಹೋಗುತ್ತವೆ. ಇದರೊಂದಿಗೆ ಸ್ವಾಮೀಜಿಗಳ ಪಕ್ಕದಲ್ಲಿಯೇ ಕುಳಿತುಕೊಂಡು ಸ್ವಾರ್ಥಕ್ಕಾಗಿ ಸಮಾಜವನ್ನು ಹಾಗೂ ಗುರುಗಳನ್ನು ಬಳಸಿಕೊಳ್ಳುವವರು ಸಹ ಇದ್ದಾರೆ. ಅಂಥವರು ಸರ್ಕಾರ ಇದ್ದಾಗ ಇದ್ದು, ನಾಳೆ ಇಲ್ಲವಾಗಬಹುದು. ಆದರೆ, ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಮುದಾಯದ ಜನರನ್ನು ಕಟ್ಟಿಕೊಂಡು ಮಾಡಿದ ಐತಿಹಾಸಿಕ ಹೋರಾಟದ ಫಲ ಇಂದಲ್ಲ ನಾಳೆ ನಮಗೆ ದೊರತೇ ದೊರೆಯುತ್ತದೆ. ಈ ಹೋರಾಟವನ್ನು ನಾವು ಜನಾಂದೋಲನವನ್ನಾಗಿ ರೂಪಿಸಬೇಕಾಗಿದೆ ಎಂದು ಹೇಳಿದರು.

ಹೋರಾಟದ ನೆಪದಲ್ಲಿ ಸ್ವಂತ ಕೆಲಸ ಮಾಡಿಸಿಕೊಂಡರು: ಇನ್ನು ಕೆಲವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದುಕೊಂಡು ಮುಖ್ಯಮಂತ್ರಿಯೊಂದಿಗೆ ತಮ್ಮ ಸ್ವಂತ ಕೆಲಸಕ್ಕಾಗಿ ದ್ವಿಪಾತ್ರಧಾರಿಗಳಾಗಿ ಕೆಲಸ ಮಾಡಿದ್ದಾರೆ. ಅಂಥವರ ಸ್ವಾರ್ಥದಿಂದಾಗಿ ನಮ್ಮ ಜಗದ್ಗುರುಗಳ ಹೋರಾಟ ಪೂರ್ಣ ಪ್ರಮಾಣದ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ. ನಮ್ಮ ಸಮುದಾಯವನ್ನು ಅತ್ಯಂತ ಕೆಟ್ಟ ರೀತಿಯಿಂದ ನಡೆಸಿಕೊಂಡು ಮುಖ್ಯಮಂತ್ರಿಗಳು ಹಾಗೂ ದ್ವಿಪಾತ್ರಧಾರಿಗಳಿಗೆ ಸಮುದಾಯದ ಜನ ತಕ್ಕ ಪಾಠ ಕಲಿಸಬೇಕು ಎನ್ನುವುದು ನಮ್ಮ ಸಮುದಾಯದ ಜನರ ಆಶಯವಾಗಿದೆ ಎಂದಿದ್ದಾರೆ.

Breaking, Reservation: ಪಂಚಮಸಾಲಿ ಲಿಂಗಾಯತಕ್ಕೆ 7% ಮೀಸಲಾತಿ ಘೋಷಣೆ, ಮುಸ್ಲಿಂ ಮೀಸಲಾತಿಗೆ ಕೋಕ್!

ಬೊಮ್ಮಾಯಿ ಹೃದಯದ ಬದಲು, ಬುದ್ಧಿ ಕೆಲಸ ಮಾಡಿದೆ: ರಾಜ್ಯದಲ್ಲಿ ವಾಸ್ತವವಾಗಿ ಬೊಮ್ಮಾಯಿ ನೇತೃತ್ವದ ಸರ್ಕಾರ ನಮ್ಮ ಸಮುದಾಯದ ಜಗದ್ಗುರುಗಳ ಹೋರಾಟವನ್ನು ಲಘುವಾಗಿ ಪರಿಗಣಿಸಿ ತಲೆಗೆ ತುಪ್ಪ ಸವರುವ ಕೆಲಸವನ್ನು ಅತ್ಯಂತ ಜಾಣತನದಿಂದ ಮಾಡಿದೆ. ನಮ್ಮ ಸಮುದಾಯ ಹಾಗೂ ಜಗದ್ಗುರುಗಳ ಮೀಸಲಾತಿ ಹೋರಾಟದ ವಿಷಯದಲ್ಲಿ ಮುಖ್ಯಮಂತ್ರಿಗಳ ಬುದ್ಧಿ ಕೆಲಸ ಮಾಡಿದೆಯೇ ಹೊರತು, ಅವರ ಹೃದಯ ಕೆಲಸ ಮಾಡಲೇ ಇಲ್ಲ. ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜಕೀಯ ಜೀವನದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಮ್ಮ ಸಮುದಾಯಕ್ಕೆ ನ್ಯಾಯ ಕಲ್ಪಿಸಿ ಕೊಡುತ್ತಾರೆ ಎನ್ನುವ ನಮ್ಮ ಭರವಸೆಯನ್ನ ಹುಸಿಯಾಗಿಸಿದ್ದಾರೆ ಎಂದು ಆರೋಪಿಸಿದರು.

2ಡಿ ಮೀಸಲಾತಿ ಸಮಾಧಾನ ತಂದಿಲ್ಲ: ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಇಟ್ಟುಕೊಂಡು ತಾವು ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲವೆಂದು, ಸ್ವಾಮೀಜಿ ನೋವಿನ ಕಣ್ಣೀರು ಹಾಕಿದ್ದಾರೆ. ಈಗ ಸರ್ಕಾರ 2ಡಿ ಮೀಸಲಾತಿಯನ್ನು ನೀಡಿದ್ದು, ಇದರಿಂದ ನಮಗೆ ಸಮಾಧಾನ ಆಗಿಲ್ಲ. ಈಗ ಸ್ವಾಮೀಜಿಗಳು ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕವಾಗಿ ವಿದಾಯ ಹೇಳಿ ಫ್ರೀಡಂ ಪಾರ್ಕ್ ನಿಂದ ಅತ್ಯಂತ ನೋವಿನಿಂದ ವಾಪಸ್‌ ಮರಳುತ್ತಿರುವುದು ನಮ್ಮ ದುರ್ದೈವವಾಗಿದೆ ಎಂದು ಸಂಗಮೇಶ್ ಬಬಲೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios