ಹುಬ್ಬಳ್ಳಿ(ಸೆ.20): ಕಿಮ್ಸ್‌ನಲ್ಲಿ ಎಚ್‌ಐವಿ ಪಾಸಿಟಿವ್‌, ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್‌! ಇಂಥದ್ದೊಂದು ಘಟನೆಯಿಂದ ಅಂಗವಿಕಲ ಮಹಿಳೆ ಬದುಕು ಅತಂತ್ರವಾಗಿದೆ.

ಹುಬ್ಬಳ್ಳಿ ಜನತಾ ಕಾಲನಿ ಮೂಲದ ಕಲ್ಪನಾ (ಹೆಸರು ಬದಲಾವಣೆ ಮಾಡಲಾಗಿದೆ) ಅಂಗವಿಕಲೆ. ಟೈಲರಿಂಗ್‌ ಮಾಡಿಕೊಂಡಿದ್ದ ಈಕೆ ಉಣಕಲ್‌ ಬಳಿಯ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ವಿವಾಹವಾಗಿದ್ದಳು. ತನಗೂ ಒಂದು ಆಸರೆಯಾಗುತ್ತದೆ, ಹೇಗಾದರೂ ಇರಲಿ ಪತಿ ಇರುವ ಜೀವನ ಸಿಗುತ್ತದೆ ಎಂಬ ನೂರಾರು ಕನಸು ಕಟ್ಟಿಕೊಂಡು ಮದುವೆ ಆಗಿದ್ದಳು. ಆದರೆ, ಮೂರು ತಿಂಗಳಲ್ಲೆ ಬದುಕು ಹಾದಿ ತಪ್ಪಿದೆ.

ಈ ಕುರಿತು ಮಾತನಾಡಿದ ಕಲ್ಪನಾ, ಕಳೆದ 2019ರ ಏಪ್ರಿಲ್‌ನಲ್ಲಿ ಮೂರ್ನಾಲ್ಕು ದಿನಗಳ ಕಾಲ ನಿರಂತರ ಜ್ವರ ಕಾಣಿಸಿಕೊಂಡಿತ್ತು. ಅತ್ತೆ ನನ್ನನ್ನು ಕಿಮ್ಸ್‌ಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಿದ್ದಾಳೆ. ಈ ವೇಳೆ ಎಚ್‌ಐವಿ ಪರೀಕ್ಷೆ ಮಾಡಿಸಿದ್ದು, ಅಂದು ಸಂಜೆಯೆ ವೈದ್ಯರು ಪಾಸಿಟಿವ್‌ ಎಂದು ವರದಿ ಕೊಟ್ಟಿದ್ದಾರೆ. ಅಲ್ಲದೆ, ನನಗೆ ಒಂದಿಷ್ಟು ಮಾತ್ರೆಗಳನ್ನೂ ನೀಡಿ ನಿರಂತರವಾಗಿ ತೆಗೆದುಕೊಳ್ಳುವಂತೆ ಸೂಚಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಅಧಿವೇಶನದಲ್ಲಿ ಚರ್ಚಿಸ್ತೇನೆ: ಹೊರಟ್ಟಿ

ಪಾಸಿಟಿವ್‌ ಬಂದ ದಿನವೆ ಅತ್ತೆ ಮಂಗಲಸೂತ್ರ ಕಿತ್ತುಕೊಂಡು ನನ್ನನ್ನು ಉಟ್ಟಬಟ್ಟೆಯಲ್ಲಿ ಮನೆಯಿಂದ ಹೊರ ಹಾಕಿದರು. ಇದರಿಂದ ನಾನು ತೀರಾ ನೊಂದುಕೊಂಡೆ. ಮಾನಸಿಕವಾಗಿಯೂ ಜರ್ಝರಿತಗೊಂಡೆ. ವೈದ್ಯರು ಕೊಟ್ಟಿದ್ದ ಮಾತ್ರೆಯನ್ನೂ ತೆಗೆದುಕೊಳ್ಳಲಿಲ್ಲ. ಜನತಾ ಕಾಲನಿಯ ಮನೆಗೆ ಬಂದು ಉಳಿದುಕೊಂಡಿದ್ದೇನೆ. ಇದಾದ 6 ತಿಂಗಳ ಬಳಿಕ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ಆದರೆ, ಈ ಪರೀಕ್ಷೆಯಲ್ಲಿ ನೆಗೆಟಿವ್‌ ಎಂದು ವರದಿ ನೀಡಲಾಗಿದೆ ಎಂದರು.

ಇದರಿಂದ ತೀರಾ ಗೊಂದಲವಾಗಿದೆ. ಖಾಸಗಿ ಆಸ್ಪತ್ರೆಯ ವರದಿಯನ್ನು ತೆಗೆದುಕೊಂಡು ಹೋಗಿ ಕಿಮ್ಸ್‌ ವೈದ್ಯರಿಗೆ ತೋರಿಸಿ ಮತ್ತೊಮ್ಮೆ ಪರೀಕ್ಷೆ ಮಾಡುವಂತೆ ಕೇಳಿಕೊಂಡೆ, ಆದರೆ ಅವರು ಒಪ್ಪುತ್ತಿಲ್ಲ. ಎಚ್‌ಐವಿ ವರದಿ ಬಳಿಕ ನೀಡಲಾಗಿದ್ದ ಮಾತ್ರೆಗಳ ಬಾಕ್ಸನ್ನು ಕಿಮ್ಸ್‌ ವೈದ್ಯರಿಗೆ ವಾಪಸ್‌ ನೀಡಿ ಬಂದಿದ್ದೇನೆ. ಇನ್ನು ಗಂಡನ ಮನೆಗೆ ಹೋಗಿ ವಿಷಯ ತಿಳಿಸಿದರೆ ಅವರೂ ಒಪ್ಪುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಇಷ್ಟಕ್ಕೂ ಸುಮ್ಮನಾಗದೆ, ಹೆದರಿಸಿ ಬೆದರಿಸಿ ವಿಚ್ಛೇದನ ಅರ್ಜಿಗೆ ನನ್ನಿಂದ ಸಹಿ ಪಡೆದುಕೊಂಡಿದ್ದಾರೆ. ಮುಂದೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೊ ಇಲ್ಲವೊ ಎಂಬುದು ತಿಳಿದಿಲ್ಲ ಎಂದು ಕಲ್ಪನಾ ಅಳಲು ತೋಡಿಕೊಂಡರು.

ಕಿಮ್ಸ್‌ ವರದಿಯನ್ನು ನಂಬಬೇಕೆ ಅಥವಾ ಖಾಸಗಿ ಆಸ್ಪತ್ರೆ ವರದಿ ಒಪ್ಪಬೇಕೆ ಎಂದು ತಿಳಿಯುತ್ತಿಲ್ಲ. ನನ್ನ ಗಂಡ ಮಾನಸಿಕ ಅಸ್ವಸ್ಥ. ಅವರನ್ನು ನೋಡಿಕೊಳ್ಳಬೇಕು. ಮತ್ತೆ ಮನೆ ಸೇರಿಕೊಳ್ಳಬೇಕು ಎಂಬ ಆಸೆ ಇದೆ. ಇವೆಲ್ಲ ಸಂಗತಿಗಳನ್ನು ಯಾರ ಮುಂದೆಯೂ ಹೇಳಿಕೊಂಡಿಲ್ಲ. ಆದರೆ, ಒಂದು ವರದಿಯಿಂದ ನನ್ನ ಜೀವನವೆ ಹಾಳಾಗಿದೆ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಕಣ್ಣೀರು ಹಾಕಿದರು.