ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಕೆವಿಕೆ ಆವರಣದಲ್ಲಿ 2023-24ನೇ ಸಾಲಿನ ಪೂರ್ವ ಮುಂಗಾರು ಕೃಷಿ ತಾಂತ್ರಿಕ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ದೊಡ್ಡಬಳ್ಳಾಪುರ (ಜೂ.13) ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಕೆವಿಕೆ ಆವರಣದಲ್ಲಿ 2023-24ನೇ ಸಾಲಿನ ಪೂರ್ವ ಮುಂಗಾರು ಕೃಷಿ ತಾಂತ್ರಿಕ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್‌.ವಿ.ಸುರೇಶ್‌ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೆಂಗಳೂರಿನ ಕೃಷಿ ವಿವಿ, ಜಿಕೆವಿಕೆ ವ್ಯಾಪ್ತಿಯಲ್ಲಿ ಬರುವ ಹತ್ತು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ತಾಂತ್ರಿಕ ಆಂದೋಲನವನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಕೃಷಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಆದ್ದರಿಂದ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿಗೆ ಸಂಬಂಧಪಟ್ಟಉಪಕಸುಬುಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಕೃಷಿಯಲ್ಲಿ ನಿರಂತರವಾಗಿ ತಾಂತ್ರಿಕ ಚಿಂತನೆ ಅಗತ್ಯ. ಹಲವು ಸವಾಲುಗಳಿಗೆ ಇದು ಉತ್ತಮ ಪರಿಹಾರವಾಗಬಲ್ಲದು ಎಂದು ತಿಳಿಸಿದರು.

ಕೆಲವೇ ವರ್ಷಗಳಲ್ಲಿ ವಿಶ್ವ ನಕ್ಷೆಯಿಂದ ಕಣ್ಮರೆಯಾಗಲಿವೆ ಈ ತಾಣಗಳು… ಭಾರತವೂ ಈ ಲಿಸ್ಟಲ್ಲಿದೆ

ಬೆಂ.ಗ್ರಾ. ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಸ್‌.ಎಸ್‌.ಲಲಿತಾರೆಡ್ಡಿ ಮಾತನಾಡಿ, ಈಗಾಗಲೇ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಕ್ಯೂಆರ್‌ ಕೋಡ್‌ ತಂತ್ರಜ್ಞಾನದ ಮೂಲಕ ರೈತರಿಗೆ ಬೀಜಗಳನ್ನು ವಿತರಣೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬೆಂ.ಗ್ರಾ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಉಪನಿರ್ದೇಶಕ ಜಿ.ಎಂ.ನಾಗರಾಜ್‌ ಮಾತನಾಡಿ, ರೈತರು ಕೃಷಿಯ ಜೊತೆಗೆ ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ ಮಾಡಿದರೆ ಆರ್ಥಿಕ ಸ್ಥಿರತೆ ಕಾಣಬಹುದು ಮತ್ತು ಕೃತಕ ಗರ್ಭಧಾರಣೆಯಲ್ಲಿ ಹೆಣ್ಣು ಕರು ಲಿಂಗ ನಿರ್ಧಾರಿತ ನಳಿಕೆಗಳ ಬಳಕೆ, ಚರ್ಮಗಂಟು ರೋಗದ ವಿರುದ್ಧ ಲಸಿಕೆ ಹಾಕಿಸಬೇಕು ಎಂದು ಮಾಹಿತಿ ನೀಡಿದರು.

ತಾಂತ್ರಿಕ ಅಧಿವೇಶನದಲ್ಲಿ ಮಾಹಿತಿ ವಿನಿಮಯ:

ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜೆ.ಗುಣವಂತ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳಿಂದ ನಡೆದ ತಾಂತ್ರಿಕ ಅಧಿವೇಶನದಲ್ಲಿ ಕೃಷಿ ವಿವಿ ಪ್ರಾಧ್ಯಾಪಕ ಡಾ. ಎಂ.ಎನ್‌. ತಿಮ್ಮೇಗೌಡ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಶೇ. 90ರಷ್ಟುವಾಡಿಕೆ ಮಳೆಯಿದ್ದು, ಹಂಚಿಕೆಯಲ್ಲಿ ವ್ಯತ್ಯಾಸವಾಗಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ಕೃಷಿ ಹೊಂಡ ಮತ್ತು ಇಂಗು ಗುಂಡಿಗಳ ಮೂಲಕ ಮಳೆ ನೀರನ್ನು ಸಂರಕ್ಷಿಸುವುದು, ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡುವ ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು.

ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ವೆಂಕಟೆಗೌಡ, ಮಾತನಾಡಿ, ಬಿತ್ತನೆಗೂ ಮೊದಲು ಮಾಗಿ ಉಳುಮೆ ಮಾಡುವುದು ಹಾಗು ರಾಗಿಯಲ್ಲಿ ಜೂನ್‌ ತಿಂಗಳಿನಲ್ಲಿ ಎಂ.ಆರ್‌-1, ಎಂ.ಆರ್‌-6 ತಳಿಗಳ ಬಿತ್ತನೆ ಮಾಡುವುದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ರೈತರಲ್ಲಿ ಅರಿವು ಮೂಡಿಸಿದರು. ತೊಗರಿಯಲ್ಲಿ ತರಕಾರಿಗೆ ಸೂಕ್ತವಾದ ಬಿಆರ್‌ಜಿ-1 ಹಾಗೂ ಕಾಳುಗಳ ಅವಶ್ಯಕತೆಗೆ ಬಿಆರ್‌ಜಿ-5 ತಳಿಯನ್ನು ಬಳಸಬೇಕು ಎಂದು ತಿಳಿಸಿದರು.

ಮಣ್ಣು ವಿಜ್ಞಾನಿ ಡಾ.ವೀರನಾಗಪ್ಪ ಮಾತನಾಡಿ, ಕೃಷಿಯಲ್ಲಿ ಮಣ್ಣಿನ ಮಹತ್ವವನ್ನು ತಿಳಿಸಿಕೊಟ್ಟರು. ಮಣ್ಣಿನ ಆರೋಗ್ಯ ನಿರ್ವಹಣೆಗಾಗಿ ಹಸಿರೆಲೆ ಗೊಬ್ಬರಗಳ ಬಳಕೆ, ಮಣ್ಣು ಪರೀಕ್ಷೆ, ಎರೆಹುಳು ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.

Climate change: ಹವಾಮಾನ ವೈಪರೀತ್ಯದಿಂದ ಗೇರು, ಮಾವು, ಹಲಸು ಇಳುವರಿ ಕುಂಠಿತ: ಸಂಕಷ್ಟದಲ್ಲಿ ರೈತರು

ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಡಾ.ಜಿ.ಎಂ.ದರ್ಶಿನಿ, ಡಾ.ಬಿ.ಜಿ.ಹನುಮಂತರಾಯ, ಡಾ.ವೆಂಕಟೇಗೌಡ, ಡಾ.ಎನ್‌.ನೇತ್ರಾಜಿಪಂ ಮಾಜಿ ಸದಸ್ಯ ಎಚ್‌.ಅಪ್ಪಯ್ಯಣ್ಣ ಮಾತನಾಡಿದರು. ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕುಗಳ 110ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.