ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಮುಂದಿನ ಮೂರು ದಿನಗಳವರೆಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ..
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಜೂ.08): ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಮುಂದಿನ ಮೂರು ದಿನಗಳವರೆಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಹಾಗೂ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಅಚ್ಚು-ಕಟ್ಟು ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹದ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್.ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಭಾರಿ ಮಳೆಯಿಂದ ನೀರಿನ ಮಟ್ಟದಲ್ಲಿನ ಏರಿಕೆಯಾಗಿ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ ಇದರಿಂದ ಬೆಣ್ಣಿಹಳ್ಳ ಮತ್ತು ತುಪ್ಪರಿ ಹಳ್ಳಗಳಲ್ಲಿ, ನಗರ ಪ್ರದೇಶ ತಗ್ಗು ಪ್ರದೇಶಗಳಲ್ಲಿ, ಕಲ್ಲಿನ ಕ್ವಾರಿಗಳು, ಕಾಲುವೆಗಳು, ಕೃಷಿ ಹೊಂಡಗಳು, ತುಂಬಿ ಹರಿಯುವ ಚರಂಡಿಗಳು ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಬಳಿ ಆಟವಾಡುವುದು ಈಜುವುದು ಮತ್ತು ಸಂಚರಿಸಬಾರದು ಎಂದು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳಲ್ಲಿ ನೀರಿನ ಹೆಚ್ಚಿನ ಹರಿವಿನಿಂದ ಮುಳುಗಿರುವ ಸೇತುವೆ, ಮೇಲ್ಮಟ್ಟದಲ್ಲಿ ಹರಿಯುವ ಕಲ್ವರ್ಟಗಳನ್ನು ದಾಟಲು ಪ್ರಯತ್ನಿಸಬಾರದು ಜನ-ಜಾನುರುಗಳು ನೀರಿನ ಸೆಳೆತಕ್ಕೆ ಸಿಲುಕುವ ಸಾಧ್ಯತೆಗಳಿರುವದರಿಂದ ಎಚ್ಚರಿಕೆ ವಹಿಸಬೇಕು ಹಳ್ಳ-ಕೊಳ್ಳಗಳು, ಜಲಪಾತಗಳು, ಕೆರೆಗಳು, ಕೃಷಿ ಹೊಂಡಗಳು ಅಪಾಯ ಮಟ್ಟಕ್ಕಿಂತ ಹೆಚ್ಚಾಗಿ ನೀರು ಸಂಗ್ರಹವಿರುವ ಸ್ಥಳಗಳ ಹತ್ತಿರ ಸಾರ್ವಜನಿಕರು ಸೆಲ್ಪಿ ಅಥವಾ ಪೋಟೋಗಳನ್ನು ತೆಗೆಯಲು ಹೋಗಬಾರದು ಎಂದು ತಿಳಿಸಿದ್ದಾರೆ
ವಿಶೇಷವಾಗಿ ಜಲ ಮೂಲಗಳು ತಗ್ಗು ಪ್ರದೇಶದಲ್ಲಿ ಮತ್ತು ಪ್ರವಾಹ ಪೀಡಿತ ಜನವಸತಿ ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು ಪ್ರವಾಹ ಸಂದರ್ಭಗಳಲ್ಲಿ ಶಿಥಿಲಗೊಂಡ ಸೇತುವೆಗಳು ಅದೃಶ್ಯ ತೆರೆದ ಮ್ಯಾನ್‍ಹೋಲ್‍ಗಳು ಹಾನಿಗೊಂಡ ರಸ್ತೆಗಳ ಮುಖಾಂತರ ಸಂಚರಿಸಬಾರದು. ಈ ಪ್ರದೇಶದಲ್ಲಿ ನೀರಿನ ಸೆಳೆತದಿಂದ ಗಂಭೀರ ಪ್ರಮಾಣದ ಅಪಾಯವನ್ನುಂಟು ಮಾಡಬಹುದು ಆದ್ದರಿಂದ ಪ್ರವಾಹದ ನೀರಿನಲ್ಲಿ ಸಂಚಾರ ಮಾಡಬಾರದು.
ವಿದ್ಯುತ್ ಸಂಪರ್ಕ ಕಲ್ಪಿಸುವ ಸ್ಥಾವರ, ರಚನೆಗಳ ಬಳಿ ನೀರಿನಿಂದ ಆವೃತಗೊಂಡ ಪ್ರದೇಶಗಳು, ಶಿಥಿಲಗೊಂಡ, ಮುರಿದು ಬಿದ್ದ ವಿದ್ಯುತ್ ಕಂಬಗಳು, ಕಡಿತಗೊಂಡ ವಿದ್ಯುತ್ ತಂತಿಗಳನ್ನು ಮುಟ್ಟಬಾರದು. ಮತ್ತು ಸಮೀಪಕ್ಕೆ ತೆರಳದಂತೆ ಹಾಗೂ ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂದರ್ಭವಿರುತ್ತದೆ ಹಾಗೂ ಶಿಥಿಲಾವಸ್ಥೆಯಲ್ಲಿ ಮರಗಳು ಬೀಳುವ ಸಂಭವವಿರುತ್ತವೆ ಇದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿರುವುದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ದೃಷ್ಠಿಯಿಂದ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ
ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯ: 0836-2445508 ಮತ್ತು 1077 ಧಾರವಾಡ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಸಂಖ್ಯೆ :0836-2233860, ಹುಬ್ಬಳ್ಳಿ ನಗರ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 0836-2358035, ಅಳ್ನಾವರ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 0836-2385544, ನವಲಗುಂದ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 08380-229240, ಕುಂದಗೋಳ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 08304-290239, ಹುಬ್ಬಳ್ಳಿ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 0836-22338449, ಧಾರವಾಡ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 0836-2233822, ಕಲಘಟಗಿ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 08370-284535, ಅಣ್ಣಿಗೇರಿ ತಹಶೀಲ್ದಾರ ಕಾರ್ಯಾಲಯ ಸಂಖ್ಯೆ : 9482151566, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಯಾಲಯದ ಸಂಖ್ಯೆ : 0836-2213869 ಗಳಿಗೆ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


