ಬಸವರಾಜ ಹಿರೇಮಠ

ಧಾರವಾಡ[ಮಾ.23]: ‘ಎ ಸ್ಟಿಚ್‌ ಇನ್‌ ಟೈಮ್‌ ಸೇವ್ಸ್ ನೈನ್‌’ ಎಂಬ ಇಂಗ್ಲಿಷ್‌ ಗಾದೆ ಮಾತು ವಿಶ್ವದಾದ್ಯಂತ ಪ್ರಚಲಿತದಲ್ಲಿದ್ದು ಪ್ರಸ್ತುತ ಕೊರೋನಾ ವೈರಸ್‌ ವಿರುದ್ಧ ಸಾರಿದ ಯುದ್ಧಕ್ಕೆ ಸಾಕ್ಷಿ ಎಂಬಂತಿದೆ. ಆದರೆ, ಧಾರವಾಡದಲ್ಲಿ ವಿದೇಶದಿಂದ ಬಂದ ಓರ್ವ ವ್ಯಕ್ತಿಯ ಬೇಜವಾಬ್ದಾರಿ ನಡೆಯಿಂದಾಗಿ ಇದೀಗ ಅನೇಕ ಮುಗ್ಧ ಜೀವಿಗಳಿಗೆ ಕೊರೋನಾ ಭಯ ಶುರುವಾಗಿದೆ.

ಹೊಸಯಲ್ಲಾಪೂರದ ವ್ಯಕ್ತಿಯೋರ್ವ ಮಾ. 12ರಂದು ಧಾರವಾಡಕ್ಕೆ ಬಂದ ತಕ್ಷಣ, ತನ್ನಲ್ಲಿ ಕೋವಿಡ್‌-19 ಲಕ್ಷಣಗಳಿದ್ದರೂ ಕೂಡಾ ಅದನ್ನು ಬಚ್ಚಿಟ್ಟು ಬೈಕ್‌, ಬಸ್‌ ಹಾಗೂ ಆಟೋ ರಿಕ್ಷಾದಲ್ಲಿ ಓಡಾಡಿದ್ದಾನೆ. ಧಾರವಾಡಕ್ಕೆ ಆಗಮಿಸಿದ ಮೇಲೆಯೂ ಆತನು ಎಲ್ಲೆಡೆ ಸುತ್ತಾಡಿದ್ದಾನೆ. ಎರಡು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತನ್ನ ಕೆಮ್ಮು, ಗಂಟಲು ಕೆರೆತ ಹಾಗೂ ಜ್ವರಕ್ಕೆ ಚಿಕಿತ್ಸೆ ಕೇಳಿದ್ದಾನೆ.

ಕೊರೋನಾ ಕಾಟ: ಧಾರವಾಡದ ವ್ಯೆಕ್ತಿಗೆ ಕೋವಿಡ್ 19 ಸೋಂಕು ದೃಢ

ಆತಂಕದಲ್ಲಿ ಧಾರವಾಡ:

ಇದಕ್ಕಿಂತ ಪ್ರಮುಖವಾಗಿ ಐದು ದಿನಗಳ ಕಾಲ ತನಗೆ ಯಾವುದೇ ಸೋಂಕು ಇಲ್ಲವೆಂಬ ಮಾದರಿಯಲ್ಲಿ ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲೆದಾಡಿದ್ದಾನೆ ಎಂಬ ಮಾಹಿತಿಯನ್ನು ಈ ಪ್ರಕರಣದ ಬೆನ್ನು ಬಿದ್ದಿರುವ ವಿಶೇಷ ಅಧಿಕಾರಿಗಳ ತಂಡವು ಕಲೆ ಹಾಕಿದೆ. ಪ್ರತಿ ನಿತ್ಯವೂ ವಿದೇಶಿಗರು ತಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ ಎಂದು ಭಾರತೀಯರಿಗೆ ಪದೇ ಪದೇ ಹೇಳುತ್ತಿದ್ದರೂ, ಟೆಕ್ಕಿಯಾದ ಈ ವಿದ್ಯಾವಂತ ಯುವಕನು ಇಂತಹ ದುಷ್ಕತ್ರ್ಯಕ್ಕೆ ಕೈ ಹಾಕಿದ್ದು ಇಡೀ ಧಾರವಾಡದ ಜನತೆಗೆ ಆತಂಕಕ್ಕೆ ಈಡು ಮಾಡಿದೆ.

ಬೆಚ್ಚಿ ಬಿದ್ದ ಜನತೆ:

ಹೊಸಯಲ್ಲಾಪುರ ಜನರು ಈ ಪ್ರಕರಣದಿಂದ ಬೆಚ್ಚಿ ಬಿದ್ದಿದ್ದು ತಾವು ಆ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದೇವೆಯೇ ಎಂಬ ಭೀತಿ ಅವರಲ್ಲಿ ಹುಟ್ಟಿಕೊಂಡಿದೆ. ಹೊಸಯಲ್ಲಾಪುರ ಹಳೆಯ ಧಾರವಾಡದ ನಗರವಾಗಿದ್ದು ಮನೆಗಳು ಕೊಡಿಕೊಂಡಿವೆ. ಇದು ಜನದಟ್ಟಣೆಯ ಪ್ರದೇಶ. ಅನೇಕ ಐತಿಹಾಸಿಕ ಜೈನ ಮಂದಿರಗಳು, ದೇವಸ್ಥಾನಗಳಿದ್ದು, ಈ ಪ್ರದೇಶ ಮಾರುಕಟ್ಟೆಗೆ ಸಮೀಪದ ಸ್ಥಳ. ಧಾರವಾಡದ ಪ್ರತಿ ನಾಗರಿಕರನು ಹೊಸಯಲ್ಲಾಪುರಕ್ಕೆ ಹತ್ತಿಕೊಂಡ ಅನೇಕ ಸ್ಥಳಗಳಿಗೆ ನಿತ್ಯ ಒಡನಾಟ ಇಟ್ಟುಕೊಂಡಿದ್ದಾನೆ. ಇಂತಹ ಸೂಕ್ಷ್ಮತೆಯನ್ನು ಅರಿಯದ ಈ ವ್ಯಕ್ತಿ ತನಗೆ ತಗುಲಿದ ಭಯಾನಕ ರೋಗವನ್ನು ಏಕೆ ಮರೆಮಾಚಿದ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.

ಸಂಪರ್ಕಿತರಿಗೆ ಹುಡುಕಾಟ:

ಗದಗ ಜಿಲ್ಲಾಧಿಕಾರಿಗಳು ಈಗಾಗಲೇ ಕೊರೋನಾ ಪೀಡಿತ ವ್ಯಕ್ತಿ ಪ್ರಯಾಣಿಸಿದ ಸಾರಿಗೆ ಸಂಸ್ಥೆಯ ಬಸ್ಸಿನ ಪ್ರಯಾಣಿಕರಿಗೆ ಹಾಗೂ ಚಾಲಕ, ನಿರ್ವಾಹಕನಿಗೆ ಗದಗ ಜಿಮ್ಸ್‌ಗೆ ಬಂದು ತಪಾಸಣೆಗೆ ಒಳಗಾಗಬೇಕೆಂದು ಆದೇಶ ಹೊರಡಿಸಿದ್ದು ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿ ಆ ಬಸ್ಸಿನಲ್ಲಿ ಜನರ ಮಾಹಿತಿ ಕಲೆ ಹಾಕಲಾಗುತ್ತಿದೆ. ಹಾಗೆಯೇ, ಧಾರವಾಡ ಜಿಲ್ಲಾಧಿಕಾರಿಗಳು ಕೂಡಾ ಪತ್ರಿಕಾ ಪ್ರಕಟಣೆ ಮೂಲಕ ಯಾರಾದರೂ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರೆ 1077 ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಧಾರವಾಡ: ಕೊರೋನಾ ಸೋಂಕಿತನ ಪ್ರಯಾಣದ ಹಿಸ್ಟರಿ ಬಹಿರಂಗ

ಈ ಎಲ್ಲದರ ಮಧ್ಯೆಯೂ ಈ ವ್ಯಕ್ತಿ ತನ್ನ ಒಂದು ವಾರದ ಕಾಲದಲ್ಲಿ ಅನೇಕ ಜನ ವೈದ್ಯರನ್ನು, ನರ್ಸ್‌ಗಳನ್ನು ಹಾಗೂ ಜನಸಾಮಾನ್ಯರ ಸಂಪರ್ಕಕ್ಕೆ ಬಂದಿದ್ದಾನೆ. ಹೀಗಾಗಿ ಅವರು ಸಹ ತೀವ್ರ ಆತಂಕದಲ್ಲಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರ ಮೇಲೆಯೂ ನಿಗಾ ವಹಿಸಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಆತನ ಮನೆಯ ಸದಸ್ಯರನ್ನು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ.

ನಿಮಲ್ಲಿ ಯಾರಾದರೂ ವಿದೇಶಿದಿಂದ ಬಂದು ಅವರಿಗೆ ಕೋವಿಡ್‌ -19 ಲಕ್ಷಣಗಳಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ಜಿಲ್ಲಾಡಳಿತ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗೆಯೇ, ಹೊಸಯಲ್ಲಾಪುರದ ಪ್ರಕರಣ ಮರುಕಳಿಸದಂತೆ ಜಿಲ್ಲೆಯ ಆಶಾ ಕಾರ್ಯಕರ್ತರು ಸರ್ವೇ ಕಾರ್ಯ ಮಾಡುತ್ತಿದ್ದು, ಅದು ಭಾನುವಾರದಿಂದಲೇ ನಡೆಯುತ್ತಿದೆ. ವಿದೇಶದಿಂದ ಆಗಮಿಸಿದ ಅಥವಾ ಕೋವಿಡ್‌ -19 ಲಕ್ಷಣಗಳನ್ನು ಹೊಂದಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹೊಸಯಲ್ಲಾಪುಕ್ಕೆ ನಿರ್ಬಂಧ:

ಕಳೆದ ಒಂದು ವಾರದಿಂದಲೇ ಧಾರವಾಡದಲ್ಲಿ ಸರ್ಕಾರದ ನಿರ್ದೇಶನದಂತೆ ಸಿನಿಮಾ ಮಂದಿರ, ಸಾರ್ವಜನಿಕ ಸಭೆ-ಸಮಾರಂಭಗಳು, ಮದುವೆ ಅಂತಹ ಕಾರ್ಯಕ್ರಮಗಳಿಗೆ ನಿಷೇಧ ಹೇರಿತ್ತು. ಇದೀಗ ಧಾರವಾಡದಲ್ಲಿಯೇ ಮೊದಲ ಪ್ರಕರಣ ಪತ್ತೆಯಾಗಿದ್ದು ಜಿಲ್ಲಾಡಳಿತ ಮತ್ತಷ್ಟುಬಿಗಿ ಕ್ರಮಗಳಿಗೆ ಮುಂದಾಗಿದೆ. ಹೊಸಯಲ್ಲಾಪುರ ಪ್ರದೇಶದ ಮೂರು ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಸಂಪೂರ್ಣ ನಿರ್ಬಂಧ ಹೇರಿದೆ. ಈ ಪ್ರದೇಶಕ್ಕೆ ಹೊರಗಿನ ವ್ಯಕ್ತಿ ಬರುವುದು, ಒಳಗಿನ ವ್ಯಕ್ತಿ ಹೊರ ಹೋಗುವುದನ್ನು ಸಹ ನಿರ್ಬಂಧಿಸಿದ್ದು ವಾಹನ ಸಂಚಾರ ಸಹ ಬಂದ್‌ ಮಾಡಲಾಗಿದೆ.

ಅಲ್ಲಿನ ನಿವಾಸಿಗಳಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಮುಂದಿನ ಆದೇಶದ ವರೆಗೂ ಮನೆಯಲ್ಲಿಯೇ ಇರಲು ತಿಳಿಸಲಾಗಿದೆ. ಇದರೊಂದಿಗೆ ಸೋಂಕಿತ ವ್ಯಕ್ತಿಯು ಆಸ್ಪ್ರೇಲಿಯಾದಿಂದ ಹೊಸ ಯಲ್ಲಾಪುರ ವರೆಗೆ ಯಾರಾರ‍ಯರ ಜತೆಗೆ ಸಂಪರ್ಕ ಹೊಂದಿದ್ದನು ಎಂಬುದನ್ನು ಸಹ ಜಿಲ್ಲಾಡಳಿತವು ಕಲೆ ಹಾಕುತ್ತಿದೆ.

ಹೊಸಯಲ್ಲಾಪೂರದ 33 ವರ್ಷದ ವ್ಯಕ್ತಿಗೆ ಕೊರೋನಾ ವೈರಸ್‌ ಇರುವುದಾಗಿ ಪತ್ತೆಯಾಗಿದ್ದು ಆತನಿಗೆ ಕಿಮ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡು ಬಂದ ಪ್ರದೇಶದ ಸುತ್ತಲೂ ಮೂರು ಕಿಮೀ ವ್ಯಾಪ್ತಿ ನಿಯಮಾನುಸಾರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು  ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದ್ದಾರೆ. 

ಜಿಲ್ಲೆಯ ಗಡಿಯಲ್ಲಿ ಕಟ್ಟೆಚ್ಚರ

ಜಿಲ್ಲಾದ್ಯಂತ ಕೊರೋನಾ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಮಾ. 22ರಿಂದ ಮಾ.31ರ ವರೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ಆಗಮಿಸುವ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಬರುವ ಹಾಗೂ ಹೋಗುವ ಎಲ್ಲ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಂತೆಯೇ, ಜಿಲ್ಲೆಯ ಎಲ್ಲ ಚೆಕ್‌ ಪೋಸ್ಟ್‌ಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮತ್ತು ಸ್ಪ್ರೇಯಿಂಗ್‌ ಕಾರ್ಯವನ್ನು ಸಹ ಜಿಲ್ಲಾಡಳಿತವು ಮಾಡುತ್ತಿದೆ.