ಮುಂದಿನ ಐದು ವರ್ಷದಲ್ಲಿ ಮೆಟ್ರೋ ಜಾಲದಲ್ಲಿ ಹದಿನಾರು ಮಾರ್ಗ ಬದಲಾವಣಾ ನಿಲ್ದಾಣಗಳು ( ಇಂಟರ್‌ಚೇಂಜ್‌) ನಿರ್ಮಾಣ ಆಗಲಿವೆ. ಸಂಪೂರ್ಣ ನಗರವನ್ನು ಮೆಟ್ರೋದಲ್ಲಿ ಸಂಚರಿಸಲು ಸಾಧ್ಯವಾಗುವಂತೆ ಇವು ಸಂಪರ್ಕ ಬೆಸೆಯಲಿವೆ. 

ಮಯೂರ್‌ ಹೆಗಡೆ

ಬೆಂಗಳೂರು (ಮೇ.05): ಮುಂದಿನ ಐದು ವರ್ಷದಲ್ಲಿ ಮೆಟ್ರೋ ಜಾಲದಲ್ಲಿ ಹದಿನಾರು ಮಾರ್ಗ ಬದಲಾವಣಾ ನಿಲ್ದಾಣಗಳು ( ಇಂಟರ್‌ಚೇಂಜ್‌) ನಿರ್ಮಾಣ ಆಗಲಿವೆ. ಸಂಪೂರ್ಣ ನಗರವನ್ನು ಮೆಟ್ರೋದಲ್ಲಿ ಸಂಚರಿಸಲು ಸಾಧ್ಯವಾಗುವಂತೆ ಇವು ಸಂಪರ್ಕ ಬೆಸೆಯಲಿವೆ. ಸದ್ಯ ಮೆಜೆಸ್ಟಿಕ್‌ನ ‘ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌’ ಮೆಟ್ರೋ ನಿಲ್ದಾಣ ಮಾತ್ರ ಇಂಟರ್‌ಚೇಂಜ್‌ ಆಗಿದೆ. ಪ್ರತಿನಿತ್ಯ 50ಸಾವಿರಕ್ಕೂ ಅಧಿಕ ಜನ ಈ ನಿಲ್ದಾಣ ಬಳಸುತ್ತಿದ್ದು, ಪ್ರಯಾಣಿಕರ ದಟ್ಟಣೆಯಿಂದ ಕೂಡಿದೆ. ಹೆಚ್ಚಿನ ಮಾರ್ಗ ಬದಲಾವಣಾ ನಿಲ್ದಾಣಗಳು ನಿರ್ಮಾಣ ಆದಲ್ಲಿ ಮೆಜೆಸ್ಟಿಕ್‌ ಮೆಟ್ರೋದ ಪ್ರಯಾಣಿಕರ ದಟ್ಟಣೆಯೂ ನಿಯಂತ್ರಣವಾಗಲಿದೆ.

ಯಾವ್ಯಾವ ಮಾರ್ಗ?: ಕಸ್ತೂರಿ ನಗರ ರೇಷ್ಮೇ ಮಂಡಳಿಯಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ಎರಡನೇ ಹಂತದ ನೀಲಿ ಮಾರ್ಗಗಳಲ್ಲಿ ಇಂಟರ್‌ಚೇಂಜ್‌ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧವಾದ ಮಾರ್ಗಗಳಾದ ಮೆಟ್ರೋ ಮೂರನೇ ಹಂತದ ಎರಡು ಕಾರಿಡಾರ್‌ಗಳಾದ ಜೆಪಿ ನಗರ-ಕೆಂಪಾಪುರ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆ ನಡುವಿನ ಕೇಸರಿ ಮಾರ್ಗ, 3ಎ ಹಂತದ ಹೆಬ್ಬಾಳ-ಸರ್ಜಾಪುರ ನಡುವಿನ ಕೆಂಪು ಮಾರ್ಗ ಪೂರ್ಣಗೊಂಡ ಬಳಿಕ ಒಟ್ಟಾರೆ ಹದಿನಾರು ಇಂಟರ್‌ಚೇಂಜ್‌ ನಿಲ್ದಾಣಗಳು ನಿರ್ಮಾಣ ಆಗಲಿವೆ.

ವರ್ಷಾಂತ್ಯಕ್ಕೆ 3ನೇ ಹಂತ ನಮ್ಮ ಮೆಟ್ರೋ ನಿರ್ಮಾಣಕ್ಕೆ ಸರ್ವೆ ಶೀಘ್ರ!

ಮುಂದಿನದು ಜಯದೇವ: ವರ್ಷಾಂತ್ಯಕ್ಕೆ ಉದ್ಘಾಟನೆ ಆಗುವ ನಿರೀಕ್ಷೆಯಿರುವ ಆರ್‌.ವಿ.ರಸ್ತೆ - ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಬರುವ ‘ಜಯದೇವ ಇಂಟರ್‌ಚೇಂಜ್‌’ ಶೀಘ್ರ ನಮ್ಮ ಮುಂದಿನ ಮಾರ್ಗ ಬದಲಾವಣಾ ನಿಲ್ದಾಣವಾಗಲಿದೆ. ಇದು 2026ಕ್ಕೆ ತೆರೆಯಲಿರುವ ಕಾಳೇನ ಅಗ್ರಹಾರ - ನಾಗವಾರ ನಡುವಿನ ಗುಲಾಬಿ ಮತ್ತು ಹಳದಿ ಕಾರಿಡಾರ್‌ ನಡುವಣ ಇಂಟರ್‌ಚೇಂಜ್‌ ಆಗಿ ಕೆಲಸ ಮಾಡಲಿದೆ. ಜನದಟ್ಟಣೆ ವೇಳೆ ಸುಮಾರು 25 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಸದ್ಯಕ್ಕೆ ಶೇ.95 ರಷ್ಟು ನಿರ್ಮಾಣ ಕಾರ್ಯ ಮುಗಿದಿದ್ದು, ಒಟ್ಟಾರೆ 19,826 ಚದರ ಕಿಮೀ ವಿಸ್ತೀರ್ಣವಿದೆ.

ಎಲ್ಲಿ, ಎಷ್ಟು ಇಂಟರ್‌ಚೇಂಜ್‌?: ಪ್ರಸ್ತುತ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಹಸಿರು ಮತ್ತು ನೀಲಿ ಮಾರ್ಗದ ಪ್ರಯಾಣಿಕರು ಮಾರ್ಗ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಮುಂದುವರಿದು ನೇರಳೆ ಮಾರ್ಗದಲ್ಲಿ ಐದು ಇಂಟರ್‌ಚೇಂಜ್‌, ಹಸಿರು ಮಾರ್ಗದಲ್ಲಿ ಮೂರು ಇಂಟರ್‌ಚೇಂಜ್‌ ತಲೆ ಎತ್ತಲಿದೆ. ಸುರಂಗ ಮೆಟ್ರೋ ಗುಲಾಬಿ ಮತ್ತು ನೀಲಿ ಮಾರ್ಗದಲ್ಲಿ ತಲಾ ನಾಲ್ಕು ಹಾಗೂ ಕೇಸರಿ ಮಾರ್ಗದಲ್ಲಿ ಒಂದು ಮಾರ್ಗ ಬದಲಾವಣೆ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.

ಪ್ರಯೋಜನ ಏನು?: ಇವುಗಳಿಂದ ಒಟ್ಟೂ ಇಂಟರ್‌ಚೇಂಜ್‌ ನಿಲ್ದಾಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಲಿದೆ. ಇಂಟರ್‌ ಚೇಂಜ್‌ ನಿಲ್ದಾಣಗಳಿಂದ ಪ್ರಯಾಣಿಕರು ಇಡೀ ನಗರವನ್ನು ಮೆಟ್ರೋದಲ್ಲೇ ಸುತ್ತಲು ಅನುಕೂಲವಾಗಲಿದೆ. ಇವು ಸಂಪೂರ್ಣ ಮೆಟ್ರೋ ಜಾಲವನ್ನು ಒಂದನ್ನೊಂದು ಸಂಧಿಸಲಿವೆ. ಹೀಗಾಗಿ ನೇರಳೆ, ಹಸಿರು, ಹಳದಿ ಸೇರಿ ಯಾವುದೇ ಕಾರಿಡಾರ್‌ನ ಮೆಟ್ರೋ ಏರಿದರೂ ಅದಕ್ಕೆ ಪೂರಕವಾಗಿರುವ ಇಂಟರ್‌ಚೇಂಜ್‌ನಲ್ಲಿ ಇಳಿದು ಇನ್ನೊಂದು ಮಾರ್ಗದಲ್ಲಿ ಸಂಚರಿಸಲು ಅನುಕೂಲವಾಗಲಿದೆ.

ಗುಲಾಬಿ ನಮ್ಮ ಮೆಟ್ರೋ ಮಾರ್ಗ ಸುರಂಗ 95% ರೆಡಿ: ಬಿಎಂಆರ್‌ಸಿಎಲ್

ತಲೆ ಎತ್ತಲಿರುವ ಇಂಟರ್‌ಚೇಂಜ್‌
ಇಂಟರ್‌ಚೇಂಜ್‌ ಮಾರ್ಗ

ಕೆ.ಆರ್‌.ಪುರ ನೇರಳೆ-ನೀಲಿ
ಎಂಜಿ ರಸ್ತೆ ನೇರಳೆ-ಗುಲಾಬಿ
ಹೊಸಹಳ್ಳಿ ನೇರಳೆ- ಕೇಸರಿ (ಕಡಬಗೆರೆ)
ಮೈಸೂರು ರಸ್ತೆ ನೇರಳೆ - ಕೇಸರಿ
ಪೀಣ್ಯ ಹಸಿರು- ಕೇಸರಿ
ಆರ್‌.ವಿ. ರಸ್ತೆ ಹಸಿರು- ಹಳದಿ
ಜೆ.ಪಿ.ನಗರ ಹಸಿರು -ಕೇಸರಿ (ಕೆಂಪಾಪುರ)
ಜೆ.ಪಿ.ನಗರ 4ನೇ ಹಂತ ಗುಲಾಬಿ-ಕೇಸರಿ
ಜಯದೇವ ಗುಲಾಬಿ- ಹಳದಿ
ಡೇರಿ ಸರ್ಕಲ್‌ ಗುಲಾಬಿ - ಕೆಂಪು
ನಾಗವಾರ ಗುಲಾಬಿ- ನೀಲಿ
ಕೆಂಪಾಪುರ ನೀಲಿ- ಕೇಸರಿ
ಹೆಬ್ಬಾಳ ನೀಲಿ - ಕೆಂಪು
ಅಗರ ನೀಲಿ - ಕೆಂಪು
ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನೀಲಿ - ಹಳದಿ
ಸುಮನಹಳ್ಳಿ ಕ್ರಾಸ್‌ ಕೇಸರಿ (ಕಡಬಗೆರೆ-ಜೆಪಿನಗರ)