ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ನಿಜಲಿಂಗಪ್ಪ ಮಟ್ಟಿಹಾಳ ಅವರು, 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಮ್ಮ ಚಾಲಕ ರುದ್ರಪ್ಪ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ನಿವೃತ್ತಿಯ ದಿನದಂದು,  ಸ್ವತಃ ಕಾರು ಚಲಾಯಿಸಿ ಚಾಲಕನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಮನೆಗೆ ಬಿಟ್ಟರು .

ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ಎಲ್ಲರ ಹೃದಯ ಗೆದ್ದಿದೆ. ಮಾನವೀಯತೆ, ಕೃತಜ್ಞತೆ ಮತ್ತು ತನ್ನ ಸಹೋದ್ಯೋಗಿಯ ಮೇಲಿನ ಗೌರವದಿಂದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ತಮ್ಮದೇ ನಿವೃತ್ತಿಯಾಗುತ್ತಿರುವ ಚಾಲಕನಿಗೆ ಕಾರು ಚಾಲನೆ ಮಾಡಿ ವಿಶೇಷ ಗೌರವ ಸಲ್ಲಿಸಿದರು. ಐದು ದಶಕಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇವೆ ಸಲ್ಲಿಸಿ, 22 ವರ್ಷ 9 ತಿಂಗಳುಗಳ ಕಾಲ ಕುಲಪತಿ ಮತ್ತು ಕುಲಸಚಿವರ ಅಧಿಕೃತ ವಾಹನಗಳ ಚಾಲಕನಾಗಿ ಕೆಲಸ ಮಾಡಿದ ರುದ್ರಪ್ಪ ಅವರು ಇತ್ತೀಚೆಗೆ ನಿವೃತ್ತಿ ಪಡೆದರು. ಅವರ ನಿವೃತ್ತಿ ಸಮಾರಂಭದಲ್ಲಿ ಹೃದಯಸ್ಪರ್ಶಿ ಘಟನೆ ನಡೆದಿದೆ.

ಸ್ವತಃ ಕಾರನ್ನು ಚಲಾಯಿಸಿದ ಕುಲಸಚಿವ

ಮೌಲ್ಯಮಾಪನ ಕುಲಸಚಿವರಾದ ನಿಜಲಿಂಗಪ್ಪ ಮಟ್ಟಿಹಾಳ ಅವರು, ತಮ್ಮ ಸೇವಾ ಅವಧಿಯಲ್ಲಿ ಸದಾ ನಿಷ್ಠೆಯಿಂದ, ಸಮಯ ಪಾಲನೆಯಿಂದ ಕೆಲಸ ಮಾಡಿದ ರುದ್ರಪ್ಪನೊಂದಿಗೆ ಇರುವ ತಮ್ಮ ಬಾಂಧವ್ಯವನ್ನು ನೆನೆದು, ಈ ಬಾರಿ ತಾವು ಚಾಲಕನಾಗುವುದಾಗಿ ನಿರ್ಧರಿಸಿದರು. ರುದ್ರಪ್ಪನು ಪಕ್ಕದಲ್ಲಿ ಕುಳ್ಳಿರಿಸಿ ನಿಜಲಿಂಗಪ್ಪ ಅವರು ಸ್ವತಃ ಕಾರನ್ನು ಚಲಾಯಿಸಿದರು. ಇದು ಎಲ್ಲರನ್ನೂ ಅಚ್ಚರಿಗೊಳಿಸಿದಂತೆಯೇ ಭಾವುಕರನ್ನೂ ಮಾಡಿತು.

ಕರ್ತವ್ಯನಿಷ್ಠೆ, ಸರಳತೆ

ರಜನೀಶ ಗೋಯಲ್ ಅವರು ಕುಲಸಚಿವರಾಗಿದ್ದ ಸಂದರ್ಭದಲ್ಲಿ ಕಾರು ಚಾಲಕನಾಗಿ ನೇಮಕಗೊಂಡಿದ್ದ ರುದ್ರಪ್ಪ, ದೀರ್ಘಾವಧಿಯಲ್ಲಿ ಅನೇಕ ಕುಲಪತಿಗಳು ಮತ್ತು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ತನ್ನ ಕರ್ತವ್ಯನಿಷ್ಠೆ, ಸರಳತೆ ಮತ್ತು ವಿನಯಶೀಲತೆಯಿಂದ ಎಲ್ಲರ ಮನ ಗೆದ್ದಿದ್ದ ರುದ್ರಪ್ಪನಿಗೆ, ಮೌಲ್ಯಮಾಪನ ಕುಲಸಚಿವರು ನೀಡಿದ ಈ ವಿಶಿಷ್ಟ ಗೌರವವು ಅವರ ಸೇವೆಗೆ ಸಲ್ಲಿಸಿದ ಕೃತಜ್ಞತೆಯ ಪ್ರಮುಖ ಸಂಕೇತವಾಗಿ ಪರಿಗಣಿಸಲಾಗಿದೆ.

ವಿವಿಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗ ವರ್ಗದ ಅನೇಕರು ಈ ದೃಶ್ಯವನ್ನು ಕಣ್ಣಾರೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ಚಾಲಕನಿಗೆ ಚಾಲಕನಾಗಿ ಗೌರವ’’ ನೀಡಿದ ಈ ಘಟನೆ, ಸಾರ್ವಜನಿಕ ಜೀವನದಲ್ಲೂ ಮಾನವೀಯತೆ ಎಂದಿಗೂ ಮರೆತುಹೋಗುವುದಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ.