ದೂರುದಾರರು ತಮ್ಮ ಜಮೀನನ್ನು ಸರಿಯಾಗಿ ಉಳುಮೆಮಾಡಿ ಅದಕ್ಕೆ ಬೇಕಾದ ಗೊಬ್ಬರ ಇತ್ಯಾದಿಗಳನ್ನು ಉಪಯೋಗಿಸಿ ಸಾಕಷ್ಟು ಹಣ ಖರ್ಚು ಮಾಡಿ ತಮ್ಮ 35 ಎಕರೆಯಲ್ಲಿ ಸದರಿ ಗೋವಿನ ಜೋಳದ ಬೀಜ ಹಾಕಿಸಿದ್ದರು.

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಏ.07): ಧಾರವಾಡ ತಾಲ್ಲೂಕಿನ ಪುಡಕಲಕಟ್ಟಿಯ ಗ್ರಾಮದ ನಿವಾಸಿ/ರೈತ ಬಸವರಾಜ ಚಂದರಗಿರವರು 2022ನೇ ಇಸವಿಯಲ್ಲಿ ತಮ್ಮ ಸುಮಾರು 35 ಎಕರೆಯಲ್ಲಿ ಗೋವಿನ ಜೋಳ ಬಿತ್ತಲು ನಿರ್ಣಯಿಸಿದ್ದರು. ತೆಲಂಗಾಣದ ಸತ್ಯಕಾಮ್ ದುಡಿಗಳ್ಳ ಸಂಸ್ಥೆಯವರು ತಯಾರಿಸಿದ 42 ಗೋವಿನ ಜೋಳದ ಬೀಜಗಳ ಪ್ಯಾಕೇಟನ್ನು 56 ಸಾವಿರ ಖರ್ಚು ಮಾಡಿ ಹುಬ್ಬಳ್ಳಿಯ ಅಮರಗೋಳದ ಸಿದ್ದೇಶ್ವರ ಆಗೋ ಟ್ರೇಡರ್ಸ್ ಹಾಗೂ ಧಾರವಾಡದ ಕಾಯಕಯೋಗಿ ತೋಟಗಾರಿಕಾ ಸಂಸ್ಥೆಯವರಿಂದ ಖರೀದಿಸಿದ್ದರು

ದೂರುದಾರರು ತಮ್ಮ ಜಮೀನನ್ನು ಸರಿಯಾಗಿ ಉಳುಮೆಮಾಡಿ ಅದಕ್ಕೆ ಬೇಕಾದ ಗೊಬ್ಬರ ಇತ್ಯಾದಿಗಳನ್ನು ಉಪಯೋಗಿಸಿ ಸಾಕಷ್ಟು ಹಣ ಖರ್ಚು ಮಾಡಿ ತಮ್ಮ 35 ಎಕರೆಯಲ್ಲಿ ಸದರಿ ಗೋವಿನ ಜೋಳದ ಬೀಜ ಹಾಕಿಸಿದ್ದರು. ಅದು ಮೊಳಕೆ ಒಡೆದು ಗಿಡ ಬೆಳೆದರೂ ಗೋವಿನ ಜೋಳದ ತೆನೆ ಸರಿಯಾಗಿ ಕಾಳಾಗಿ ಮಾರ್ಪಾಟಾಗದೇ ತನಗೆ ನಿರೀಕ್ಷಿತ ಇಳುವರಿ ಆಧಾಯ ಬಂದಿಲ್ಲ ಅನ್ನುವುದು ದೂರುದಾರರ ಕೋರಿಕೆಯಾಗಿದೆ ಈ ಬಗ್ಗೆ ಅವರು ಧಾರವಾಡ ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದರು.

ಕೃಷಿ ಅಧಿಕಾರಿಗಳ ಸೂಚನೆಯಂತೆ ಗರಗದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ದೂರುದಾರರ ಜಮೀನಿಗೆ ಭೇಟಿಕೊಟ್ಟು ಬೆಳೆ ಪರಿಶೀಲಿಸಿ ತೆನೆಯಲ್ಲಿ ಕಾಳು ಸರಿಯಾಗಿ ಆಗದೇ ದೂರುದಾರರಿಗೆ ಬೆಳೆ ನಷ್ಟವಾಗಿದೆ ಅಂತಾ ವರದಿಕೊಟ್ಟಿದ್ದರು. ಆ ವರದಿಯನ್ನು ಆಧರಿಸಿ ಮತ್ತು ತನಗೆ ಕಳಪೆ ಗುಣಮಟ್ಟದ ಬೀಜ ಮಾರಿದ್ದರಿಂದ ಆರ್ಥಿಕವಾಗಿ ನಷ್ಟವಾಗಿದೆ ಅಂತಾ ಹೇಳಿ ಗೋವಿನ ಜೋಳದ ಬೀಜದಉತ್ಪಾಧಕರು ಹಾಗೂ ವಿತರಕರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 20.5.2023ರಂದು ದೂರು ಸಲ್ಲಿಸಿದ್ದರು.

ಸದರಿ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಶ್ರೀಮತಿ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು ತೆಲಂಗಾಣದ ಸತ್ಯಕಾಮಾ ಸಂಸ್ಥೆಯವರು ಸದರಿ ಗೋವಿನ ಜೋಳದ ಬೀಜದ ಉತ್ಪಾದಕರಿದ್ದು 2 ಮತ್ತು 3ನೇ ಎದುರುದಾರರು ಅದರ ಸ್ಥಳೀಯ ವಿತರಕರಾಗಿದ್ದಾರೆ ಉತ್ತಮ ಗುಣಮಟ್ಟದ ಬೀಜ ಇವೆ ಅಂತಾ ಎದುರುದಾರರು ದೂರುದಾರರಿಗೆ ಭರವಸೆ ಕೊಟ್ಟು ಅವರಿಂದ ಸಾಕಷ್ಟು ಹಣ ಪಡೆದು ಬೀಜ ಮಾರಾಟ ಮಾಡಿದ್ದಾರೆ. ಆದರೆ ಸ್ಥಳದಲ್ಲಿ ಗೋವಿನ ಜೋಳದ ಗಿಡ ಚೆನ್ನಾಗಿ ಬೆಳೆದಿದ್ದರೂ ಅದರಲ್ಲಿ ಬರುವ ತೆನೆಯಲ್ಲಿ ಕಾಳುಗಳು ಸರಿಯಾಗಿ ಮೂಡದ್ದರಿಂದ ಒಟ್ಟಾರೆ ದೂರುದಾರರಿಗೆ ಕನಿಷ್ಠ ಇಳುವರಿ ಸಹ ಬಂದಿಲ್ಲ.

ಸೇವಾ ನ್ಯೂನ್ಯತೆ

ಇದರಿಂದ 1ನೇ ಎದುರುದಾರರು ಕಳಪೆ ಗುಣಮಟ್ಟದ ಬೀಜಗಳನ್ನು ರೈತರಾದ ದೂರುದಾರರಿಗೆ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಕಳಪೆ ಗುಣಮಟ್ಟದ ಗೋವಿನ ಜೋಳದ ಬೀಜಗಳನ್ನು ಉತ್ಪಾದಿಸಿ ದೂರುದಾರರಿಗೆ ಮಾರಾಟ ಮಾಡಿದ 3 ಜನ ಎದುರುದಾರರು ಸೇರಿಕೊಂಡು ಒಟ್ಟಾರೆ ರೂ 5 ಲಕ್ಷ ಪರಿಹಾರ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ 50 ಸಾವಿರ ಪರಿಹಾರ ಮತ್ತು 10 ಸಾವಿರ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯೋಗ ಆದೇಶಿಸಿದೆ.