Asianet Suvarna News Asianet Suvarna News

ಧಾರವಾಡ: ಶಹನಾಯಿ ಕಲಾವಿದ ಭಜಂತ್ರಿ ಸೇರಿ 5 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

* ‘ಮಹಾಗುರು’ವಿನ ಕಿರೀಟಕ್ಕೆ ರಾಜ್ಯೋತ್ಸವ ಪ್ರಶಸ್ತಿ ಗರಿ
*  ಅಂಗವಿಕಲರ ಆಶಾಕಿರಣಕ್ಕೆ ರಾಜ್ಯೋತ್ಸವ ಪ್ರಶಸ್ತಿ
*  ಕ್ಯಾಪ್ಟನ್‌ ನವೀನ್‌ ನಾಗಪ್ಪಗೆ ಒಲಿದ ಪ್ರಶಸ್ತಿ
 

Dharwad District Got Kannada Rajyotsava Award grg
Author
Bengaluru, First Published Nov 1, 2021, 10:49 AM IST

ಹುಬ್ಬಳ್ಳಿ(ನ.01): ಇದೇ ಮೊದಲ ಬಾರಿಗೆ ಧಾರವಾಡ(Dharwad) ಜಿಲ್ಲೆಗೆ 6 ರಾಜ್ಯೋತ್ಸವ ಪ್ರಶಸ್ತಿ(Kannada Rajyotsava Award) ಲಭಿಸಿವೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಐವರಿಗೆ ಹಾಗೂ ಒಂದು ಸಂಘ- ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಗರಿ ಲಭಿಸಿದೆ.

ಹುಬ್ಬಳ್ಳಿಯ(Hubballi) ಆಲ್‌ ಇಂಡಿಯಾ ಜೈನ್‌ ಯೂತ್‌ ಫೆಡರೇಶನ್‌ಗೆ ಪ್ರಶಸ್ತಿ ಲಭಿಸಿದೆ. ಅಂತೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಧಾರವಾಡ ತಾಲೂಕು ಹೆಬ್ಬಳ್ಳಿಯ ಡಾ. ವೇದವ್ಯಾಸ ದೇಶಪಾಂಡೆ, ಧಾರವಾಡದ ಡಾ. ಎಸ್‌.ಆರ್‌. ರಾಮನಗೌಡರ, ಶಿಕ್ಷಣ ಕ್ಷೇತ್ರದಲ್ಲಿ ಹುಬ್ಬಳ್ಳಿಯ ಶ್ರೀಧರ ಚಕ್ರವರ್ತಿ ಹಾಗೂ ಜಾನಪದ ಕ್ಷೇತ್ರದಲ್ಲಿ ಕುಂದಗೋಳ ತಾಲೂಕು ಶೆರೇವಾಡದ ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಅವರಿಗೆ ದೊರಕಿವೆ. ಇನ್ನು ಯೋಧ ನವೀನ ನಾಗಪ್ಪಗೆ ಪ್ರಶಸ್ತಿ ಲಭಿಸಿದೆ. ನವೀನ ನಾಗಪ್ಪ ಅವರನ್ನು ಹಾವೇರಿ ಜಿಲ್ಲೆಗೆ ಪರಿಗಣಿಸಲಾಗಿದೆ. ಆದರೆ, ಇವರು ಹುಬ್ಬಳ್ಳಿಯವರೆಂದು ಅವರೇ ತಿಳಿಸಿದ್ದಾರೆ.

‘ಮಹಾಗುರು’ವಿನ ಕಿರೀಟಕ್ಕೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಹೌದು! ಹುಬ್ಬಳ್ಳಿಯಲ್ಲಿ ಗುರುಗಳು ಲೆಕ್ಕವಿಲ್ಲದಷ್ಟು ಇದ್ದಾರೆ. ಆದರೆ, ಮಹಾಗುರು ಎನಿಸಿಕೊಂಡುವರು ಮಾತ್ರ ಒಬ್ಬರೇ ಒಬ್ಬರು. ಅವರೇ ಚಕ್ರವರ್ತಿ ಎಸ್‌. ಶ್ರೀಧರ್‌.(S Shridhar) ಪ್ರೀತಿಯ ವಿದ್ಯಾರ್ಥಿಗಳಿಗೆ(Students) ಇವರು ಶ್ರೀಧರ್‌ ಸರ್‌.

Kannada Rajyotsava| ರೋಹನ್ ಬೋಪಣ್ಣ ಸೇರಿ ನಾಲ್ವರಿಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಏನಪ್ಪ ವಿಶೇಷ ಎಂದರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರದ ದೀವಿಗೆ ಹಿಡಿಯಲು ಮದುವೆಯಾಗದೆ, ವೈಯಕ್ತಿಕ ಬದುಕು ಎನ್ನದೇ ಸತತ 37 ವರ್ಷ ಕಾಲ ಗಣಿತ ಶಿಕ್ಷಕರಾಗಿ(Teacher) ಹುಬ್ಬಳ್ಳಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಶ್ರಮಿಸಿದ್ದಾರೆ. ಸದ್ಯ ನಿವೃತ್ತಿಯಾಗಿದ್ದರೂ ಈಗಲೂ ಬಡವಿದ್ಯಾರ್ಥಿಗಳಿಗಾಗಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಇವರನ್ನು ‘ಮಹಾಗುರು’(Mahaguru) ಎಂದು ಕರೆಯಲಾಗುತ್ತಿದೆ. ಇವರ ಕಾರಣದಿಂದಲೇ ‘ಮಹಾಗುರು’ ಎಂಬ ಸಂಘಟನೆ ಕೂಡ ಹುಟ್ಟುಕೊಂಡಿದೆ. ಅದನ್ನು ನಡೆಸುವುದು ಅವರ ಅಪಾರ ಶಿಷ್ಯ ಬಳಗ.

ವಿದ್ಯಾರ್ಥಿಗಳಿಗೆ ವೇತನ:

ಮೂಲತಃ ಮೈಸೂರಿನವರಾದ(Mysuru) ಇವರು ಜನಿಸಿದ್ದು 1946ರಲ್ಲಿ. ಬಿಎಸ್ಸಿ ಬಿಎಡ್‌ ಮಾಡಿ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಗಣಿತ ಶಿಕ್ಷಕರಾಗಿ 1968ರಲ್ಲಿ ಕೆಲಸಕ್ಕೆ ಸೇರಿದ್ದಾರೆ. ತಾವು ಕೆಲಸಕ್ಕೆ ಸೇರಿದಾಗಿನಿಂದ ಹಿಡಿದು ನಿವೃತ್ತಿಯಾಗುವ ವರೆಗೂ ಸತತ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ವೇತನದ ಶೇ. 10ನ್ನು ಮಾತ್ರ ತಮ್ಮ ಬದುಕಿಗಾಗಿ ಇಟ್ಟುಕೊಂಡು ಉಳಿದ ಶೇ. 90ರಷ್ಟು ಭಾಗವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದ ಹಿರಿಮೆ ಇವರಿಗೆ ಸಲ್ಲುತ್ತದೆ. ದುಡ್ಡಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಮುಂದೆ ಓದಲಾಗದೇ ಕೈಚೆಲ್ಲಿ ಕುಳಿತಿದ್ದ ನೂರಾರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಓದಿಸಿದವರು. ಪ್ರತಿಭಾವಂತ ಬಡವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಿ ಪುಸ್ತಕ(Book) ಕೊಡಿಸಿ ಓದಿಸಿದರು. ಆ ವಿದ್ಯಾರ್ಥಿಗಳೇ ಇದೀಗ ದೇಶ ವಿದೇಶಗಳಲ್ಲಿ ಶ್ರೇಷ್ಠ ಡಾಕ್ಟರ್‌, ಎಂಜಿನಿಯರ್‌ಗಳಾಗಿದ್ದಾರೆ. ಆರ್ಕಿಟೆಕ್ಟ್ಗಳು, ಆದರ್ಶ ಶಿಕ್ಷಕರು, ಉಪನ್ಯಾಸಕರು ಹೀಗೆ ಇವರ ಶಿಷ್ಯರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹೀಗೆ ತಂದೆ ಸ್ಥಾನದಲ್ಲಿ ನಿಂತು ಸುಮಾರು 500ಕ್ಕೂ ಅಧಿಕ ಬಡ ವಿದ್ಯಾರ್ಥಿಗಳ ಬಾಳನ್ನು ಬೆಳಗಿದವರು ಶ್ರೀಧರ್‌ ಸರ್‌.

ಬರೀ ಒಂದು ಚಾಪೆ, ಹೊದಿಕೆ, ನಾಲ್ಕು ಜತೆ ಬಟ್ಟೆಇಡುವ ಸೂಟ್‌ಕೇಸ್‌, ಒಂದಿಷ್ಟು ಪುಸ್ತಕ ಮಾತ್ರ ತಮ್ಮ ಜೀವಮಾನವಿಡೀ ಇಟ್ಟುಕೊಂಡವರು ಇವರು. ಬ್ಯಾಂಕ್‌ ಬ್ಯಾಲೆನ್ಸ್‌ ಬೆಳೆಸಲಿಲ್ಲ. ಮನೆ ಕಟ್ಟಿಕೊಳ್ಳಲಿಲ್ಲ. ಮದುವೆಯಾಗಲಿಲ್ಲ. ಅಕ್ಷರಶಃ ಬಡವಿದ್ಯಾರ್ಥಿಗಳಿಗಾಗಿ ಜೀವನ ಮುಡುಪಿಗಿಟ್ಟವರು. ಸದ್ಯ ನಿವೃತ್ತರಾಗಿದ್ದಾರೆ. ಈಗಲೂ ತಮ್ಮ ನಿವೃತ್ತಿ ವೇತನದಲ್ಲೂ ಬಡ ವಿದ್ಯಾರ್ಥಿಗಳನ್ನು ಓದಿಸುತ್ತಿದ್ದಾರೆ.

Kannada Rajyotsava| ಕನ್ನಡ ಬೆಳೆಸಲು ಕನ್ನಡಿಗರೇನು ಮಾಡಬಹುದು?

ಇವರಿಂದ ಕಲಿತು ದೊಡ್ಡ ದೊಡ್ಡ ಹುದ್ದೆಗಳಿಗೇರಿರುವ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ‘ಮಹಾಗುರು’ ಎಂಬ ಸಂಘಟನೆ ಹುಟ್ಟುಹಾಕಿ ಅದರ ಮೂಲಕ ಬಡವಿದ್ಯಾರ್ಥಿಗಳಿಗೆ ನೆರವಾಗುವ ಕೆಲಸ ಮಾಡುತ್ತಿದೆ. ಕೆಲವೊಂದು ಪ್ರಶಸ್ತಿಗಳಿಂದ ವ್ಯಕ್ತಿಗಳ ಗೌರವ ಹೆಚ್ಚಿದರೆ ಶ್ರೀಧರ್‌ ಸರ್‌ಗೆ ಪ್ರಶಸ್ತಿ ಬಂದಿರುವುದು ರಾಜ್ಯೋತ್ಸವ ಪ್ರಶಸ್ತಿಯ ಹಿರಿಮೆ ಹೆಚ್ಚಿಸಿದಂತಾಗಿದೆ ಎಂಬುದು ಶಿಷ್ಯ ಬಳಗದ ಮಾತು. ಇದು ನಿಜವೂ ಹೌದು.

ಕನ್ನಡಪ್ರಭ ಬೆಳಕಿಗೆ ತಂದಿತ್ತು!:

ಇಷ್ಟೆಲ್ಲ ಸಮಾಜ ಸೇವೆ ಮಾಡುತ್ತಿದ್ದರೂ ಪ್ರಚಾರದಿಂದ ಶ್ರೀಧರ್‌ ಸರ್‌ ದೂರವೇ ಇದ್ದರು. ಇವರಿಗೆ ಬಗ್ಗೆ ‘ಕನ್ನಡಪ್ರಭ’ದಲ್ಲಿ(Kannada Prabha) ಲೇಖನ ಪ್ರಕಟವಾಗಿದ್ದಕ್ಕೆ ಬೇಸರ ಪಟ್ಟುಕೊಂಡಿದ್ದ ಶ್ರೀಧರ್‌ ಸರ್‌, ನಿಮ್ಮ ಮೇಲೆ ಕೇಸ್‌ ಹಾಕುತ್ತೇನೆ ಎಂದು ಹೇಳಿದ್ದುಂಟು. ಆ ಮಟ್ಟಿಗೆ ಪ್ರಚಾರದಿಂದ ದೂರ ಉಳಿದವರಿವರು.

ಬಡಜನರ ವೈದ್ಯರೆಂದೇ ಪ್ರಸಿದ್ಧರಾಗಿದ್ದ ಡಾ. ಎಸ್‌.ಆರ್‌. ರಾಮನಗೌಡರ

ಧಾರವಾಡ: ಬಡವರ ವೈದ್ಯರೆಂದು(Doctor) ಹೆಸರು ಮಾಡಿದ್ದ ಡಾ. ಎಸ್‌.ಆರ್‌. ರಾಮನಗೌಡರ(Dr SR Ramanagoudar) ಅವರಿಗೆ ರಾಜ್ಯ ಸರ್ಕಾರ(Government of Karnataka) ಕೊಡಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮೂಲತಃ ರೈತಾಪಿ ಕುಟುಂಬದಿಂದ ಬಂದ ಡಾ. ಶಿವನಗೌಡ ರುದ್ರಗೌಡ ರಾಮನಗೌಡರ ಅವರ ಸುದೀರ್ಘ ನಾಲ್ಕು ದಶಕಗಳ ಕಾಲದ ವೈದ್ಯಕೀಯ ಸೇವೆಗೆ(Medical Service) ಸಂದ ಗೌರವವಿದು. ಬೆಳಗಾವಿ(Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಧಾರವಾಡ ಸಮೀಪದ ಚಿಕ್ಕ ಉಳ್ಳಿಗೇರಿಯಲ್ಲಿ ಜನಿಸಿದ ಡಾ. ರಾಮನಗೌಡರ 1980ರಲ್ಲಿ ಬಡ ಜನರಿಗಾಗಿಯೇ ಬರೀ .5 ಸಂದರ್ಶನ ಶುಲ್ಕದೊಂದಿಗೆ ಆಸ್ಪತ್ರೆ(Hospital) ಆರಂಭಿಸಿದವರು. ಆರಂಭದಲ್ಲಿ 10 ಹಾಸಿಗೆಯುಳ್ಳ ಶಸ್ತ್ರಚಿಕಿತ್ಸಾ ವಿಭಾಗದೊಂದಿಗೆ ಆಸ್ಪತ್ರೆ ಆರಂಭಿಸಿದರು. ನಂತರ 1988ರಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದರು. ಇವರ ವೈದ್ಯಕೀಯ ಇತಿಹಾಸದಲ್ಲಿ ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.

ಡಾ. ರಾಮನಗೌಡರ ವೈದ್ಯಕೀಯ ಕ್ಷೇತ್ರದ ಜತೆಗೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಅನೇಕ ಸಂಘ-ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳ ಮೂಲಕ ಸೇವೆ ನೀಡಿದ್ದಾರೆ. ವೀರಶೈವ ಧರ್ಮ ಜಾಗೃತಿ ಸಮಾವೇಶದ ಅಧ್ಯಕ್ಷರಾಗಿ, 2002ರಲ್ಲಿ ಉತ್ತರ ಪ್ರಾಂತೀಯ ಆರ್‌ಎಸ್‌ಎಸ್‌ ಅಧ್ಯಕ್ಷರಾಗಿ, ಅಖಿಲ ಭಾರತ ಗೋವು ಗ್ರಾಮ ಯಾತ್ರೆ ಪ್ರಾಂತದ ಅಧ್ಯಕ್ಷರಾಗಿ, ಮುರುಘಾಮಠದ(Murughamatha) ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಹಾವೇರಿ ಜಿಲ್ಲೆಗೆ ನಾಲ್ಕು ರಾಜ್ಯೋತ್ಸವ ಪ್ರಶಸ್ತಿಯ ಗರಿ

ಭಾರತೀಯ ಸಂಸ್ಕೃತಿ ಸಮಾಜ ಪ್ರತಿಷ್ಠಾನ ಸಂಸ್ಥೆ ಹುಟ್ಟುಹಾಕಿದ ಅವರು, ಈ ಮೂಲಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಪ್ರತಿ ವಾರಕ್ಕೊಮ್ಮೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಶಿಬಿರ, ಚಿಕಿತ್ಸೆ ಒದಗಿಸುವುದು, ಆರೋಗ್ಯದ ಅರಿವು ನೀಡುವ ಕಾರ್ಯ ಮಾಡಿದ್ದಾರೆ. ಧಾರವಾಡ ಸುತ್ತಲೂ ಸುಮಾರು 5000 ಸಾವಿರ ಗಿಡಗಳನ್ನು(Tree) ನೆಟ್ಟ ಗೌರವವೂ ರಾಮನಗೌಡರಿಗೆ ಸಲ್ಲಲಿದೆ. ಜತೆಗೆ ಡಾ. ರಾಮನಗೌಡರ ಸೇವೆಗೆ ವಿವಿಧ ಸಂಘ-ಸಂಸ್ಥೆಗಳಿಂದ ಶ್ರೇಷ್ಠ ವೈದ್ಯ, ಧರ್ಮ ಭೂಷಣ, ಸಮಾಜ ಸೇವಾ ಧುರೀಣ, ವೈದ್ಯರತ್ನ, ವೈದ್ಯ ಭಾಸ್ಕರ, ಶಿವಶಕ್ತಿ, ಹೃದಯವಂತರು ಎಂಬೆಲ್ಲ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.

ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಅನಿರೀಕ್ಷಿತವಾಗಿ ಬಂದು ಖುಷಿ ಕೊಟ್ಟಿದೆ. ನಾಲ್ಕು ದಶಕಗಳ ಕಾಲ ವೈದ್ಯಕೀಯ ಕ್ಷೇತ್ರದೊಂದಿಗೆ ಸಾಮಾಜಿಕವಾಗಿಯೂ ಕೆಲಸ ಮಾಡಿದ್ದರಿಂದ ಈ ಪ್ರಶಸ್ತಿ ಬಂದಿದ್ದು, ಸಮಾಜದ ಅಭಿವೃದ್ಧಿಗೆ ಮತ್ತಷ್ಟುಜವಾಬ್ದಾರಿ ಹೆಚ್ಚಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ವೈದ್ಯರು ಡಾ. ರಾಮನಗೌಡರ ತಿಳಿಸಿದ್ದಾರೆ. 

ಶಹನಾಯಿ ಕಲಾವಿದನಿಗೆ ಒಲಿದು ಬಂದ ರಾಜ್ಯೋತ್ಸವ

ಧಾರವಾಡ: ಬರೀ ಸಂಗೀತ(Music), ಶಿಕ್ಷಣ(Education) ಮಾತ್ರವಲ್ಲದೇ ಜಾನಪದ(Folk) ಕ್ಷೇತ್ರದಲ್ಲೂ ಧಾರವಾಡ ಯಾವತ್ತೂ ಮುಂದಿದೆ. ಇಲ್ಲಿಯ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನ ಜನಪದರು ತಮ್ಮ ಸಂಪ್ರದಾಯಿಕ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಗೊತ್ತಿರುವ ಮಾತು. ಇದೀಗ ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಜಾನಪದ ಕ್ಷೇತ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಶೆರೇವಾಡದ ಹಿರಿಯ ಜಾನಪದ ಕಲಾವಿದ ವೆಂಕಪ್ಪ ಭಜಂತ್ರಿ ಬಂದಿರುವುದು ಹೆಮ್ಮೆಯ ಸಂಗತಿ.

ಮೈಸೂರು ದಸರಾ ಉತ್ಸವ(Mysuru Dasara Utasava), ಮಂಗಳೂರು ದಸರಾ ಕುದ್ರೋಳಿ ಉತ್ಸವ ಅಂತಹ ರಾಜ್ಯದ(Karnataka) ವಿವಿಧೆಡೆ ನಡೆಯುವ ಉತ್ಸವಗಳಲ್ಲಿ ಶಹನಾಯಿ(Shehanai) ಮತ್ತು ಕರಡಿ ಮಜಲುಗಳ ಮೂಲಕ ಪ್ರಸಿದ್ಧಿ ಪಡೆದವರು ವೆಂಕಪ್ಪ ಭಂಜತ್ರಿ. 70 ವಯಸ್ಸಾದರೂ ವೆಂಕಪ್ಪ ಅವರ ಮನಸ್ಸು ಮತ್ತು ಉತ್ಸಾಹಕ್ಕಲ್ಲ ಎನ್ನುವಂತೆ ಶಹನಾಯಿ ಬಾರಿಸುತ್ತಾರೆ. ಹಿರಿಯರಿಂದ ಬಳುವಳಿಯಾಗಿ ಬಂದ ಈ ಕಲೆಯನ್ನು ಆರಂಭದಲ್ಲಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಮದುವೆ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುತ್ತಿದ್ದರು. ನಂತರದಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ನೀಡುತ್ತಾ ಜನಪದ ಕಲಾವಿದರಾದ ವೆಂಕಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ(Department of Kannada and Culture) ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪೌರಾಣಿಕ ನಾಟಕ, ಸಣ್ಣಾಟ, ದೊಡ್ಡಾಟ, ಕೋಲಾಟ, ಹೆಜ್ಜೆಮೇಳ ಮತ್ತು ಭಜನಾ ಮೇಳದಲ್ಲಿ ಶಹನಾಯಿ ನುಡಿಸುವ ಮೂಲಕ ಜಿಲ್ಲೆಯಲ್ಲಿ ಚಿರಪರಿಚಿತರೂ ಹೌದು. ಇವರ ಪ್ರತಿಭೆಗೆ ಧಾರವಾಡ ಆಕಾಶವಾಣಿ(Dharwad Akashvani) ಸಹ ಅವಕಾಶಗಳನ್ನು ಕಲ್ಪಿಸಿದೆ. ಸ್ಥಳೀಯವಾಗಿ ಕೆಲ ಪ್ರಶಸ್ತಿಗಳನ್ನು(Award) ಪಡೆದಿರುವ ವೆಂಕಪ್ಪ ಕರ್ನಾಟಕ ಸಂಗೀತ(Carnatic Music), ನೃತ್ಯ ಅಕಾಡೆಮಿಯ ನಮ್ಮ ಸಾಧಕರು ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ಜನಪದದಲ್ಲಿ ನಾನೇನು ಕಮ್ಮಿ ಇಲ್ಲವೆಂದು ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದೆನು. ಆದರೆ, ನನಗೆ ಪ್ರಶಸ್ತಿ ಬರುತ್ತದೆ ಎಂದು ಗೊತ್ತಿರಲಿಲ್ಲ. ನನಗೆ ಈ ಪ್ರಶಸ್ತಿ ಬಂದಿದ್ದಕ್ಕೆ ಇಡೀ ಶೆರೇವಾಡ ಗ್ರಾಮವೇ ಸಂಭ್ರಮಿಸುತ್ತಿದೆ. ಸರ್ಕಾರ ನನ್ನನ್ನ ಗುರುತಿಸಿರುವುದಕ್ಕೆ ಧನ್ಯವಾದಗಳು ಅಂತ ಜನಪದ ಕಲಾವಿದ ವೆಂಕಪ್ಪ ಭಜಂತ್ರಿ ತಿಳಿಸಿದ್ದಾರೆ. 

ಡಾ. ದೇಶಪಾಂಡೆ ಅವರಿಗೆ ಅಚ್ಚರಿ ತಂದ ರಾಜ್ಯೋತ್ಸವ ಪ್ರಶಸ್ತಿ

ಧಾರವಾಡ: ರಾಜ್ಯ ಸರ್ಕಾರದಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ನನಗೆ ಬಂದಿರುವುದು ಅಚ್ಚರಿಯಾಗಿದೆ. ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿದ್ದಾಗ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಗ್ರಾಮದ ಜನರಿಂದಲೇ ತಿಳಿಯಿತು. ಆದರೂ ಗ್ರಾಮದಲ್ಲಿ ಮಾಡಿದ ವೈದ್ಯಕೀಯ ಸೇವೆ ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡಿರುವುದು ಖುಷಿಯಾಗಿದೆ ಎಂದು ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಧಾರವಾಡ ತಾಲೂಕಿನ ಹೆಬ್ಬಳ್ಳಿಯವರಾದ ಡಾ. ವೇದವ್ಯಾಸ ದೇಶಪಾಂಡೆ(Dr Vedavyas Deshpande) ಹೇಳಿದರು.

ಡಾ. ವೇದವ್ಯಾಸ ದೇಶಪಾಂಡೆ ಮೂಲತಃ ಹುಬ್ಬಳ್ಳಿಯವರು. ಗಣೇಶಪೇಟೆಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಕಿಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ಗ್ರಾಮೀಣದಲ್ಲಿ ವೈದ್ಯಕೀಯ ಸೇವೆ ಮಾಡಬೇಕೆಂದು ಧಾರವಾಡ ತಾಲೂಕಿನ ಹೆಬ್ಬಳ್ಳಿಗೆ 38 ವರ್ಷಗಳ ಹಿಂದೆ ಬಂದ ಡಾ. ದೇಶಪಾಂಡೆ ಜನರ ಪ್ರೀತಿಗೆ ಅಲ್ಲಿಯೇ ನೆಲೆಯೂರಿದರು.
1975ರಲ್ಲಿಯೇ ಎಂಬಿಬಿಎಸ್‌ ಆದರೂ ಗ್ರಾಮದ ಜನರ ಆರೋಗ್ಯದ ದೃಷ್ಟಿಯಿಂದ ನಗರಕ್ಕೆ ಬರದೇ ಬಡ ಜನರ ಸೇವೆ ಮಾಡಿರುವುದನ್ನು ಪರಿಗಣಿಸಿ ಸರ್ಕಾರ ರಾಜ್ಯೋತ್ಸವ ನೀಡಿದೆ. ಡಾ. ದೇಶಪಾಂಡೆ ಅವರಿಗೆ ಬಂದಿರುವ ಪ್ರಶಸ್ತಿಯಿಂದಾಗಿ ಇಡೀ ಗ್ರಾಮಸ್ಥರು ಸಹ ಖುಷಿಗೊಂಡಿದ್ದಾರೆ.

ಹೆಬ್ಬಳ್ಳಿಯಲ್ಲಿರುವ ಬ್ರಹ್ಮಚೈತನ್ಯ ಮಠದ ದತ್ತಾವಧೂತರ ಭಕ್ತರಾಗಿರುವ ಡಾ. ದೇಶಪಾಂಡೆ ಅವರ ಪ್ರೇರಣೆಯಿಂದಲೇ ಗ್ರಾಮದಲ್ಲಿದ್ದು ವೈದ್ಯಕೀಯ ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಿಂಡಿಕೇಟ್‌ ಸದಸ್ಯರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಜತೆಗೆ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸದಸ್ಯರು ಹೌದು. ವಿದ್ಯಾರ್ಥಿ ದೆಸೆಯಲ್ಲಿ ಎಬಿವಿಪಿ(ABVP) ಮತ್ತು ಆರ್‌ಎಸ್‌ಎಸ್‌ನಲ್ಲಿ(RSS) ಗುರುತಿಸಿಕೊಂಡಿದ್ದರು. ಡಾ. ದೇಶಪಾಂಡೆ ಅವರ ಸ್ಫೂರ್ತಿ ಪಡೆದ ಅವರ ಪುತ್ರ ಗುರುಪ್ರಸಾದ ಎಂಬಿಬಿಎಸ್‌(MBBS), ಎಂಡಿ ಜನರಲ್‌ ಮೆಡಿಸಿನ್‌ ಓದಿದರೂ ಸಹ ಹೆಬ್ಬಳ್ಳಿಯೇ ತಂದೆಯೊಡನೆ ಗ್ರಾಮದ ಜನರ ಸೇವೆ ಮಾಡಲು ಪಣತೊಟ್ಟಿರುವುದು ಸಾಮಾನ್ಯದ ಮಾತಲ್ಲ.

ಕ್ಯಾಪ್ಟನ್‌ ನವೀನ್‌ ನಾಗಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ಹುಬ್ಬಳ್ಳಿ: ಕಾರ್ಗಿಲ್‌ ಯುದ್ಧದಲ್ಲಿ(Kargil War) ಶತ್ರು ಸೈನ್ಯದೊಂದಿಗೆ ವೀರಾವೇಶದಿಂದ ಯುದ್ಧ ಮಾಡಿ, ಪ್ರಾಣದ ಹಂಗು ತೊರೆದು ಎದುರಾಳಿಗಳ ಬಂಕರ್‌ಗಳನ್ನು ನಾಶ ಮಾಡಿದ್ದ ಕ್ಯಾಪ್ಟನ್‌ ನವೀನ್‌ ನಾಗಪ್ಪ(Captain Naveen Nagappa) ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಭಾರತೀಯ ಸೈನ್ಯದಲ್ಲಿ(Indian Army) ಸೇವೆ ಸಲ್ಲಿಸಿ ಈಗ ಅವರು ನಿವೃತ್ತರಾಗಿದ್ದಾರೆ.

ಕ್ಯಾಪ್ಟನ್‌ ನವೀನ್‌ ಅಣಬೇರು ನಾಗಪ್ಪ ಅವರು ಹುಬ್ಬಳ್ಳಿಯಲ್ಲಿ 1973ರ ಸೆ. 5ರಂದು ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಬ್ಬಳ್ಳಿಯ ಲಯಸ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೆರವೇರಿತು. ಪದವಿ ಪೂರ್ವ ವಿದ್ಯಾಭ್ಯಾಸವೂ ಹುಬ್ಬಳ್ಳಿಯ ಪಿ.ಸಿ. ಜಾಬೀನ್‌ ವಿಜ್ಞಾನ ವಿದ್ಯಾಲಯದಲ್ಲಿ ನೆರವೇರಿತು. ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ವಿದ್ಯಾಲಯದಲ್ಲಿ 1996ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲಿ ಎಂದು ಅವರ ಪೋಷಕರು ಬಯಸಿದರು. ಆಗ ಒಲ್ಲದ ಮನಸ್ಸಿನಿಂದಲೇ ಜಿಆರ್‌ಈ, ಟೊಪಲ್‌ ಪರೀಕ್ಷೆಗಳನ್ನು ಬರೆದು, ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು. ಈ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಸಂಪಾದಿಸಿದ ಕಾರಣ ಅಮೆರಿಕೆಗೆ ಹೋಗುವ ಅವಕಾಶ ಒದಗಿ ಬಂತು. ಆದರೆ, ಮನದ ಮೂಲೆಯಲ್ಲಿ ತಾಯ್ನಾಡಿನ ಸೇವೆ ಮಾಡುವ ಅಭಿಲಾಷೆ ಸದಾ ಕಾಡುತ್ತಿತ್ತು. ಬಾಲ್ಯದ ಕನಸಿನಂತೆ ಭಾರತೀಯ ಸೈನ್ಯಕ್ಕೆ ಸೇರುವುದೆಂದು ನಿರ್ಧರಿಸಿದರು.

ಮೊದಲ ಪ್ರಯತ್ನದಲ್ಲೇ ಭಾರತೀಯ ಸೈನ್ಯಕ್ಕೆ ಆಯ್ಕೆಯಾದರು. ಆನಂತರ 1999ರಲ್ಲಿ ಡೆಹರಾಡೂನಿನ ಭಾರತೀಯ ಸೈನಿಕ ಅಕಾಡೆಮಿಯಲ್ಲಿ ಒಂದು ವರ್ಷ ಪರ್ಯಂತ ಕಠಿಣ ತರಬೇತಿಗೊಳಪಟ್ಟರು. ತರಬೇತಿಯ ಅವಧಿಯಲ್ಲಿ ತುಪಾಕಿ ಹಾರಿಸುವುದು ಹಾಗೂ ಅಶ್ವಾರೋಹಣದಲ್ಲಿ ಏ ಶ್ರೇಣಿಯನ್ನು ಗಳಿಸಿದರು. 1999ರಲ್ಲಿ ತರಬೇತಿಯ ಆನಂತರ ಜಮ್ಮು-ಕಾಶ್ಮೀರ ರೈಫಲ್ಸ್‌ನ 13ನೇ ಬೆಟಾಲಿಯನ್‌ನಲ್ಲಿ ನಿಯುಕ್ತಿಗೊಂಡರು. ಇದೇ ಸಂದರ್ಭದಲ್ಲಿ ಕಾರ್ಗಿಲ… ಗಡಿಯಲ್ಲಿ ಯುದ್ಧ ಶುರುವಾಯಿತು.

ಸ್ವಪೇರಣೆಯಿಂದ ಯುದ್ಧದಲ್ಲಿ ಭಾಗವಹಿಸಲು ಕ್ಯಾಪ್ಟನ್‌ ನವೀನ್‌ ನಿರ್ಧರಿಸಿದರು. ಅದರಂತೆ ಯುದ್ಧದಲ್ಲಿ(War) ಪಾಲ್ಗೊಂಡು ವೀರಾವೇಶದಿಂದ ಹೋರಾಡಿದರು. ಹೋರಾಟದಲ್ಲಿ ಹಲವಾರು ಶತ್ರುಗಳ ಬಂಕರ್‌ಗಳನ್ನು ನಾಶಪಡಿಸಿ ಅನೇಕ ಶತ್ರುಗಳ ಸಂಹಾರ ಮಾಡಿದರು. ಮೈ ಮರಗಟ್ಟುವ ಚಳಿಯಲ್ಲಿ ಅನ್ನಾಹಾರ, ನಿದ್ರೆಗಳಿಲ್ಲದೆ ಸತತ 48 ಗಂಟೆಗಳ ಕಾಲ ಯುದ್ಧ ನಡೆಯಿತು.

ಯುದ್ಧ ನಿರ್ಣಾಯಕ ಹಂತ ತಲುಪಲು ತಮ್ಮ ಪ್ರಾಣಕ್ಕೆ ಇರುವ ಅಪಾಯವನ್ನು ಲೆಕ್ಕಿಸದೆ ಶತ್ರುವಿನ ಬಂಕರ್‌ ಎಡೆಗೆ ನುಗ್ಗಿದರು. ಈ ಹೋರಾಟದಲ್ಲಿ ಶತ್ರು ಎಸೆದ ಗ್ರೆನೇಡ್‌ ಸ್ಫೋಟಿಸಿ ಇವರ ಎರಡು ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾದವು. ತತ್ಪರಿಣಾಮ ಎಡಗಾಲಿನ ಹೆಬ್ಬೆರಳು ಇಲ್ಲವಾಯಿತು. ಆಂಶಿಕ ಲಕ್ವದಿಂದಾಗಿ ಬಲಗಾಲು ಆಕಾರ ಕಳೆದುಕೊಂಡಿತು. ಇದರಿಂದಾಗಿ ಇವರ ಬಲಗಾಲು ಎಡಗಾಲಿಗಿಂತ ಗಿಡ್ಡವಾಯಿತು.

21 ತಿಂಗಳ ಆಸ್ಪತ್ರೆ ವಾಸ ಹಾಗೂ 8 ಶಸ್ತ್ರ ಚಿಕಿತ್ಸೆಗಳ ಆನಂತರ ಇವರು ದೈಹಿಕವಾಗಿ ಸದೃಢÜರಲ್ಲ ಎಂದು ಘೋಷಿಸಿ ಭಾರತೀಯ ಸೈನ್ಯದ ಸೇವೆಯಿಂದ ಇವರನ್ನು ಬಿಡುಗಡೆ ಮಾಡಲಾಯಿತು. ಕಾರ್ಗಿಲ್‌ ಯುದ್ಧದಲ್ಲಿ ಇವರ ಶೌರ್ಯ ಸಾಹಸಗಳನ್ನು ಗುರುತಿಸಿ ಭಾರತ ಸರ್ಕಾರವು ಇವರಿಗೆ ಸೇನಾ ಮೆಡಲ್‌ ಪುರಸ್ಕಾರ ನೀಡಿ ಗೌರವಿಸಿದೆ. ಈಗ ರಾಜ್ಯ ಸರ್ಕಾರ ಮೊದಲ ಬಾರಿಗೆ ಸೈನಿಕರ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ಮೊದಲ ಬಾರಿಗೆ ಸೈನಿಕರ ಸೇವೆಯನ್ನು ಗುರುತಿಸಿ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಖುಷಿ ತಂದಿದೆ. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರಿಗೆ ಇದರ ಗೌರವ ಸಲ್ಲುತ್ತದೆ. ಈ ಪದ್ಧತಿ ಪ್ರತಿ ವರ್ಷ ಮುಂದುವರಿಯಬೇಕು ಎಂದು ಕ್ಯಾಪ್ಟನ್‌ ನವೀನ್‌ ನಾಗಪ್ಪ ತಿಳಿಸಿದ್ದಾರೆ. 

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪ್ರಾಣೇಶ್ ಸೇರಿದಂತೆ 66 ಸಾಧಕರು ಆಯ್ಕೆ

ಅಂಗವಿಕಲರ ಆಶಾಕಿರಣಕ್ಕೆ ರಾಜ್ಯೋತ್ಸವ ಪ್ರಶಸ್ತಿ

ಹುಬ್ಬಳ್ಳಿ: ಅಂಗವಿಕಲರ ಬದುಕಿನ ಆಶಾಕಿರಣ ಎನಿಸಿರುವ ಆಲ್‌ ಇಂಡಿಯಾ ಜೈನ ಯೂತ್‌ ಫೆಡರೇಷನ್‌ಗೆ(All India Jain Youth Federation) ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇಲ್ಲಿನ ಆಲ್‌ ಇಂಡಿಯಾ ಜೈನ ಯೂತ್‌ ಫೆಡರೇಷನ್‌ 25 ವರ್ಷಗಳ ಹಿಂದೆ ಸ್ಥಾಪನೆಯಾಗಿದೆ. ಮಹಾವೀರ ಲಿಂಬ್‌ ಸೆಂಟರ್‌ ಮೂಲಕ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಕೆಲಸ ಮಾಡುತ್ತಿದೆ. ಈ ಮೂಲಕ ಅಂಗವಿಕಲರ ಬದುಕಿನ ಆಶಾಕಿರಣದಂತೆ ಕಾರ್ಯನಿರ್ವಹಿಸುತ್ತಿದೆ.

ಈ ವರೆಗೆ 40 ಸಾವಿರಕ್ಕೂ ಅಧಿಕ ವಿಕಲಾಂಗರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಮಾಡಿದ ಹಿರಿಮೆ ಈ ಸಂಸ್ಥೆಯದ್ದು. ಈ ವರೆಗೆ 190ಕ್ಕೂ ಅಧಿಕ ಶಿಬಿರಗಳನ್ನು ಮಾಡಿದೆ. ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕೃತಕ ಕಾಲು ಜೋಡಣಾ ಶಿಬಿರ ಮಾಡಿದೆ. ಬರೀ ಕಾಲುಗಳನ್ನಷ್ಟೇ ಅಲ್ಲ 300ಕ್ಕೂ ಅಧಿಕ ಜನರಿಗೆ ಕೃತಕ ಕೈಗಳನ್ನು ಜೋಡಿಸಿದೆ. ಪ್ರತಿ ತಿಂಗಳಲ್ಲಿ ಎರಡಾದರೂ ಕೃತಕ ಕಾಲು ಜೋಡಣೆ ಶಿಬಿರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಇದಲ್ಲದೇ ಡಾ. ಶರತ್‌ಚಂದ್ರ ದೀಕ್ಷಿತ ಅವರೊಂದಿಗೆ ಸೇರಿಕೊಂಡು ಸೀಳುತುಟಿ, ಮೆಳ್ಳಗಣ್ಣುವುಳ್ಳವರಿಗಾಗಿ ಪ್ಲಾಸ್ಟಿಕ್‌ ಸರ್ಜರಿ ಕ್ಯಾಂಪ್‌ಗಳನ್ನು ಮಾಡಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಗದಗ ಕನಕ ಭವನದಲ್ಲಿ ನೀರಿನ ಅರವಟಿಕೆಯನ್ನೂ ಇಟ್ಟಿದೆ. ಇದಲ್ಲದೇ ಬಡ ವಿದ್ಯಾರ್ಥಿಗಳಿಗಾಗಿ ರಿಯಾಯಿತಿ ದರದಲ್ಲಿ ನೋಟ್‌ಬುಕ್‌ ವಿತರಣೆ ಮಾಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಹುಬ್ಬಳ್ಳಿಯ ಮಹೇಂದ್ರ ಸಿಂಘಿ, ಭವರಲಾಲ್‌ ಜೈನ, ಹೇಮಂತ ಮುನಾಯತ್‌ ಸೇರಿದಂತೆ 25ಕ್ಕೂ ಹೆಚ್ಚು ಸದಸ್ಯರು 25 ವರ್ಷಗಳಿಂದ ಆಲ್‌ ಇಂಡಿಯಾ ಜೈನ ಯೂತ್‌ ಫೆಡರೇಷನ್‌ನ್ನು ಸ್ಥಾಪಿಸಿದವರು. ಸದ್ಯ ಮಹೇಂದ್ರ ಸಿಂಘಿ ಇದರ ಅಧ್ಯಕ್ಷರು. ಬಡ ಅಂಗವಿಕಲರ ಬದುಕಿನ ಆಶಾಕಿರಣವಾಗಿರುವ ಆಲ್‌ ಇಂಡಿಯಾ ಜೈನ ಯೂತ್‌ ಫೆಡೆರೇಷನ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮೂಡಿರುವುದು ಹೆಮ್ಮೆಯ ವಿಷಯವಾಗಿದೆ.

ಆಲ್‌ ಇಂಡಿಯಾ ಜೈನ ಯೂತ್‌ ಫೆಡರೇಷನ್‌ನಡಿ ಮಹಾವೀರ ಲಿಂಬ್‌ ಸೆಂಟರ್‌ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಇದೀಗ ಪ್ರಶಸ್ತಿ ಬಂದಿರುವುದು ಸಂತಸದ ವಿಷಯ ಅಂತ ಫೆಡರೇಷನ್‌ನ ನಿರ್ದೇಶಕ ಹೇಮಂತ ಮುನಾಯತ್‌ ಹೇಳಿದ್ದಾರೆ.  

ಈವರೆಗೆ 40 ಸಾವಿರಕ್ಕೂ ಅಧಿಕ ಜನರಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಅವರೆಲ್ಲರೂ ಇದೀಗ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಉಚಿತವಾಗಿಯೇ ಕಾಲು ಜೋಡಣೆ ಮಾಡುತ್ತೇವೆ ಅಂತ ಆಲ್‌ ಇಂಡಿಯಾ ಯೂತ್‌ ಫೆಡರೇಷನ್‌ ಅಧ್ಯಕ್ಷ ಮಹೇಂದ್ರ ಸಿಂಘಿ ತಿಳಿಸಿದ್ದಾರೆ. 
 

Follow Us:
Download App:
  • android
  • ios