ಧರ್ಮಸ್ಥಳದ ಸೌಜನ್ಯ ಅ**ಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ ಬಗ್ಗೆ ಸೌಜನ್ಯಳ ತಾಯಿ ಕುಸುಮಾವತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳನ್ನು ತಂಡದಲ್ಲಿ ನೇಮಿಸಿರುವುದೇ ಅವರ ಆಕ್ಷೇಪಕ್ಕೆ ಮುಖ್ಯ ಕಾರಣ.
ದಕ್ಷಿಣ ಕನ್ನಡ (ಸೆ.24): ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ ಕುಮಾರಿ ಸೌಜನ್ಯ ಅ**ಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ, ರಾಜ್ಯ ಸರ್ಕಾರವು ವಿಶೇಷ ತನಿಖಾ ದಳವನ್ನು (SIT) ರಚಿಸಿದೆ. ಆದರೆ, ಸರ್ಕಾರದ ಈ ಎಸ್‌ಐಟಿ ರಚನೆ ಮತ್ತು ಅದರಲ್ಲಿರುವ ಅಧಿಕಾರಿಗಳ ನೇಮಕದ ಬಗ್ಗೆ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕುಸುಮಾವತಿ ಅವರು, "ನನ್ನ ಮಗಳು ಸೌಜನ್ಯಳಿಗಾದ ದುರಂತದ ಮರುತನಿಖೆಗೆ ಆದೇಶಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ನಾವು ಎಂದಿಗೂ ಆಭಾರಿಯಾಗಿರುತ್ತೇವೆ. ಆದರೆ, ಮರುತನಿಖೆಗಾಗಿ ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳದ (SIT) ಬಗ್ಗೆ ನಮಗೆ ತೀವ್ರ ಅಸಮಾಧಾನವಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್‌ಐಟಿ ತಂಡದಲ್ಲಿ ಯಾರ್ಯಾರಿದ್ದಾರೆ? ಆಕ್ಷೇಪ ಯಾಕೆ?
ರಾಜ್ಯ ಸರ್ಕಾರವು ಐಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಈ ತಂಡದಲ್ಲಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತವಾರ್ತೆ ವಿಭಾಗದ ಎಸ್‌ಪಿ ನಿಶಾ ಜೇಮ್ಸ್, ಸಿಐಡಿ ಎಸ್‌ಪಿ ಲೋಕೇಶ್ ಜಗಲಾಸರ್ ಹಾಗೂ ಬೆಂಗಳೂರು ಗ್ರಾಮಾಂತರ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಆದರೆ, ಈ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ಕೆಲಸ ಮಾಡಿದ್ದ ಮತ್ತು ಕೆಲವು ವಿವಾದಾತ್ಮಕ ಹಿನ್ನೆಲೆಯಿರುವ ಅಧಿಕಾರಿಗಳನ್ನು ನೇಮಿಸಿರುವುದಕ್ಕೆ ಸೌಜನ್ಯ ಪರ ಹೋರಾಟಗಾರರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಎಸ್‌ಐಟಿ ಮುಖ್ಯಸ್ಥರಾಗಿರುವ ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಿದ್ದರು. ಹಾಗೆಯೇ ವೆಂಕಟೇಶ್ ಪ್ರಸನ್ನ ಅವರು ಹಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಮಂಗಳೂರು ಕಮಿಷನರ್ ಆಗಿರುವ ಸುಧೀರ್ ಕುಮಾರ್ ರೆಡ್ಡಿ ಅವರ ಹೆಸರೂ ಈ ತಂಡದಲ್ಲಿದೆ.
ದಕ್ಷಿಣ ಕನ್ನಡ ನಂಟಿಲ್ಲದವರ ಆಯ್ಕೆ ಮಾಡಿ
ಪಕ್ಷಪಾತವಿಲ್ಲದೆ ನ್ಯಾಯಯುತ ತನಿಖೆ ನಡೆಯಬೇಕಾದರೆ, ಈ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ನಂಟು ಇರುವ ಅಧಿಕಾರಿಗಳನ್ನು ಎಸ್‌ಐಟಿಯಿಂದ ಕೈಬಿಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಸೌಜನ್ಯ ತಾಯಿಯ ಈ ಅಸಮಾಧಾನದ ಹೇಳಿಕೆಯು ಈಗ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ.


