ನ್ಯಾಯಾಧೀಶ ರೈ ಅವರು, ಹರ್ಷೇಂದ್ರ ಕುಮಾರ್‌ ಕುಟುಂಬ ನಿರ್ವಹಣೆ ಮಾಡುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು.

ಬೆಂಗಳೂರು (ಆ.05): ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪಕ್ಕೆ ಸಂಬಂಧಿಸಿ ಧರ್ಮಾಧಿಕಾರಿ‌ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡದಂತೆ ನಿರ್ದೇಶಿಸಲು ಕೋರಿದ್ದ ಅಸಲು ದಾವೆಯ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಬೆಂಗಳೂರು ನಗರ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್‌ ನ್ಯಾಯಾಧೀಶರಿಗೆ 10ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯಕುಮಾರ್ ರೈ ಕೋರಿದ್ದಾರೆ.

ಪ್ರಕರಣ ಸಂಬಂಧ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡದಂತೆ ಮಾಧ್ಯಮಗಳಿಗೆ ನಿರ್ದೇಶಿಸುವಂತೆ ಕೋರಿ ಕೋರಿ ಡಿ.ಹರ್ಷೇಂದ್ರ ಕುಮಾರ್‌ ಅವರು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗೆ ಅಸಲು ದಾವೆ ಸಲ್ಲಿಸಿದ್ದರು. ಅದನ್ನು 2025ರ ಜು.18ರಂದು ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿಜಯ್‌ಕುಮಾರ್‌ ರೈ ಅವರು, ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ನಿರ್ಬಂಧಕಾಜ್ಞೆ ಹೊರಡಿಸಿತ್ತು.

ಇದರಿಂದ ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಮಧ್ಯಂತರ ಮೆಮೊ ಸಲ್ಲಿಸಿದ್ದರು. ನ್ಯಾಯಾಧೀಶ ರೈ ಅವರು, ಹರ್ಷೇಂದ್ರ ಕುಮಾರ್‌ ಕುಟುಂಬ ನಿರ್ವಹಣೆ ಮಾಡುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ, ಹಾಲಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಮೆಮೊದಲ್ಲಿ ಕೋರಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಧೀಶ ರೈ ಅವರು, ತಮ್ಮ ಮುಂದಿರುವ ಹರ್ಷೇಂದ್ರ ಕುಮಾರ್‌ ಅವರ ಅಸಲು ದಾವೆಯ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವುದು ಸೂಕ್ತ ಎಂದು ಪ್ರಧಾನ ನ್ಯಾಯಾಧೀಶರಿಗೆ ಕೋರಿದ್ದಾರೆ.

ಶವ ಪತ್ತೆಗೆ ರಾಡಾರ್‌? ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಅನುಮಾನಾಸ್ಪದವಾಗಿ ಹೂಳಲಾಗಿದೆ ಎಂಬ ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ ಈಗಾಗಲೇ ವಿಶೇಷ ತನಿಖಾ ತಂಡ(ಎಸ್‌ಐಟಿ) ಗುರುತು ಮಾಡಿದ 13 ಜಾಗಗಳ ಪೈಕಿ 10 ಜಾಗಗಳಲ್ಲಿ ಉತ್ಖನನ ನಡೆಸಿದೆ. ಇದರಲ್ಲಿ ಒಂದು ಜಾಗದಲ್ಲಿ ಮಾತ್ರ ಉತ್ಖನನ ವೇಳೆ ಅಸ್ಥಿಯ ತುಣುಕುಗಳು ಪತ್ತೆಯಾಗಿವೆ. ಉಳಿದ ಯಾವುದೇ ಜಾಗಗಳಲ್ಲಿ ಮಾನವನ ಕಳೇಬರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಪತ್ತೆಕಾರ್ಯಕ್ಕೆ ಅನುಕೂಲವಾಗಲು ಗ್ರೌಂಡ್‌ ಪೆನೆಟ್ರೇಟಿಂಗ್‌ ರಾಡಾರ್‌ (ಜಿಪಿಆರ್‌) ಬಳಸಿ, ಸ್ಥಳ ತನಿಖೆ ನಡೆಸುವಂತೆ ಬೆಂಗಳೂರಿನ ವಕೀಲರೊಬ್ಬರು ಎಸ್ಐಟಿಯನ್ನು ಕೋರಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯಾ ಭಟ್‌ ಪರ ವಕೀಲ ಮಂಜುನಾಥ್‌, ಭಾನುವಾರ ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ಈ ಆಗ್ರಹ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ಈವರೆಗೆ ಸಾಕ್ಷಿ-ದೂರುದಾರ ತೋರಿರುವ 10 ಸ್ಥಳಗಳಲ್ಲಿ ಕೆಲವು ಸ್ಥಳದಲ್ಲಿ ಕಳೇಬರಗಳು ಪತ್ತೆಯಾಗಿರುತ್ತದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಸಾಕ್ಷಿಯೇ ಹೇಳಿರುವಂತೆ, ಆತ ಧರ್ಮಸ್ಥಳವನ್ನು 2014ರಲ್ಲಿಯೇ ತೊರೆದಿದ್ದಾನೆ. ಅಪಾರ ಮಳೆಯನ್ನು ಕಾಣುವ ಈ ಪ್ರದೇಶದಲ್ಲಿ ಮಣ್ಣು ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಶೇಖರಣೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ, ಸುಮಾರು 11 ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟಿಕೊಂಡ ಗುರುತಿನಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇರುತ್ತದೆ.