ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ತಂಡದ ಕಾರು ಚಾರ್ಮಾಡಿ ಘಾಟ್‌ನಲ್ಲಿ ಅಪಘಾತಕ್ಕೀಡಾಗಿದೆ. ಎಸ್‌ಪಿ ಸಿ.ಎ. ಸೈಮನ್ ಸೇರಿದಂತೆ ನಾಲ್ವರು ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಕನ್ನಡ (ಜೂ.16): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ (Charmadi Ghat) ಮಂಗಳವಾರ ಮಹತ್ವದ ತನಿಖಾ ತಂಡವೊಂದರ ಕಾರು ಭೀಕರ ಅಪಘಾತಕ್ಕೆ ಈಡಾಗಿದೆ. ಧರ್ಮಸ್ಥಳದ ವಿವಾದಾತ್ಮಕ 'ಬುರುಡೆ ಪ್ರಕರಣ'ದ (Dharmasthala Burude Case) ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದ (SIT) ಎಸ್‌ಪಿ ಸಿ.ಎ. ಸೈಮನ್ ಮತ್ತು ಅವರ ತಂಡ ಪ್ರಯಾಣಿಸುತ್ತಿದ್ದ ಇನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಧರ್ಮಸ್ಥಳ ಬುರುಡೆ ಪ್ರಕರಣದ ತನಿಖಾಧಿಕಾರಿಯಾಗಿರುವ ಚಿಕ್ಕಮಗಳೂರು ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿಯಾಗಲು ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್ ಅವರು ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಲು ಅಧಿಕಾರಿಗಳ ತಂಡ ಪ್ರಯಾಣಿಸುತ್ತಿತ್ತು. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ತಲುಪಿದಾಗ, ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ.

ಗಾಯಾಳುಗಳ ವಿವರ:

ಅಪಘಾತದ ಸಮಯದಲ್ಲಿ ಕಾರಿನಲ್ಲಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಚಾಲಕ ಹಾಗೂ ಮತ್ತೊಬ್ಬ ಸಿಬ್ಬಂದಿ ಇದ್ದರು. ಕಾರು ಪಲ್ಟಿಯಾದ ಪರಿಣಾಮವಾಗಿ ಎಸ್‌ಪಿ ಸೈಮನ್ ಮತ್ತು ಇನ್ಸ್‌ಪೆಕ್ಟರ್ ಕುಸುಮಾಧರ್ ಸೇರಿದಂತೆ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ತೀವ್ರವಾಗಿ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆಗೆ ಭೇಟಿ:

ಅಪಘಾತ ಸಂಭವಿಸಿದ ಬಳಿಕ ಎಸ್‌ಪಿ ಸಿ.ಎ. ಸೈಮನ್ ಮತ್ತು ಅವರ ತಂಡ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಕುರಿತು ದೂರು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆ ಮತ್ತು ಬುರುಡೆ ಪ್ರಕರಣದ ಹಿನ್ನೆಲೆಯಲ್ಲಿ ಈ ಎಸ್‌ಐಟಿ ತಂಡವು ಬಹಳ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ತನಿಖೆಯ ಭಾಗವಾಗಿ ನಡೆಸುತ್ತಿದ್ದ ಈ ಪ್ರಯಾಣದಲ್ಲಿ ಅಪಘಾತ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿತ್ತಾದರೂ, ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.