Asianet Suvarna News Asianet Suvarna News

ಕೊಪ್ಪಳ: ತಗ್ಗಿದ ಕೊರೋನಾ, ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ಲಗ್ಗೆ..!

* ತುಂಗಭದ್ರಾ ಜಲಾಶಯಕ್ಕೂ ಮುಗಿಬಿದ್ದ ಪ್ರವಾಸಿಗರು
* ಗುರುಪೂರ್ಣಿಮೆಯಲ್ಲಿಯೂ ಸಹಸ್ರಾರು ಭಕ್ತರು
* ತುಂಗಾಭದ್ರಾ ಜಲಾಶಯದ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆ
 

Devotees Rush To Visits Anjanadri Hill in Koppal grg
Author
Bengaluru, First Published Jul 25, 2021, 2:03 PM IST

ಕೊಪ್ಪಳ(ಜು.25): ಜಿಲ್ಲೆಯಲ್ಲಿ ಕೊರೋನಾ ತಗ್ಗಿರುವ ಹಿನ್ನೆಲೆಯಲ್ಲಿ ಜನರು ಮೈಚಳಿಯನ್ನು ಬಿಟ್ಟು ಪ್ರವಾಸಿ ತಾಣಗಳಿಗೆ ಸುತ್ತುತ್ತಿದ್ದಾರೆ. ಜಿಲ್ಲೆಯಲ್ಲಿರುವ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳಲ್ಲಿ ಜನರು ಶನಿವಾರ ಕಿಕ್ಕಿರಿದು ಸೇರಿರುವುದು ಕಂಡು ಬಂದಿತು.

ಹೌದು, ಕೊರೋನಾ ಸಂಕಷ್ಟದಿಂದ ನಲುಗಿ ಹೋಗಿರುವ ಜನರು ಈಗ ಅದರಿಂದ ಒಂದಿಷ್ಟು ವಿನಾಯಿತಿ ದೊರೆಯುತ್ತಿದ್ದಂತೆ ಪ್ರವಾಸಿ ತಾಣಗಳು, ದೇವಸ್ಥಾನಗಳಿಗೆ ಅಪಾರ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅದರಲ್ಲೂ ಗುರುಪೂರ್ಣಿಮೆಯ ಶನಿವಾರವಂತೂ ಜಿಲ್ಲೆಯ ದೇವಸ್ಥಾನಗಳು, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳಲ್ಲಿ ಜನವೋ ಜನ ಎನ್ನುವಂತೆ ಕಂಡು ಬಂದಿತು.

ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ದೇವರ ದರ್ಶನ ಪಡೆಯಲು ಅಪಾರ ಪ್ರಮಾಣದ ಭಕ್ತರು ಆಗಮಿಸಿದ್ದರು. ಅಂಜನಾದ್ರಿ ಬೆಟ್ಟದ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಆಗಿದ್ದರಿಂದ ತೆರವು ಮಾಡಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ದೇವಸ್ಥಾನ ಸಮಿತಿಯ ಪ್ರತಿನಿಧಿಗಳು ನೀಡುವ ಮಾಹಿತಿಯ ಪ್ರಕಾರ ಸುಮಾರು 20 ಸಾವಿರ ಭಕ್ತರು ಏಕಕಾಲಕ್ಕೆ ಆಗಮಿಸಿದ್ದರಿಂದ ಭಾರಿ ಸಮಸ್ಯೆಯಾಯಿತು. ಅಂಜನಾದ್ರಿ ಬೆಟ್ಟವನ್ನು ಏರುವುದಕ್ಕೂ ಭಕ್ತರು ಹರಸಾಹಸ ಮಾಡಬೇಕಾಯಿತು.

ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ

ವಾಹನ ನಿಲುಗಡೆಯಲ್ಲಿಯೂ ಜಾಗ ಸಾಕಾಗದೆ ಇರುವುದರಿಂದ ದೇವಸ್ಥಾನದ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಯಿತು. ಕೊನೆಗೆ ರಸ್ತೆಯ ಎರಡು ಬದಿಯಲ್ಲಿ ದೂರದಿಂದಲೇ ವಾಹನಗಳನ್ನು ತಡೆದು, ಟ್ರಾಫಿಕ್‌ ಸಮಸ್ಯೆಯನ್ನು ನಿವಾರಣೆ ಮಾಡಲಾಯಿತು.

ಲಗ್ಗೆ ಇಟ್ಟ ಜನರು

ತುಂಗಭದ್ರಾ ಜಲಾಶಯಕ್ಕೆ ಲಕ್ಷ ಕ್ಯುಸೆಕ್‌ ಹರಿದು ಬರುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದನ್ನು ನೋಡಲು ಪ್ರವಾಸಿಗರ ಲಗ್ಗೆ ಇಟ್ಟಿದ್ದರು. ಮುನಿರಾಬಾದ್‌, ಪಂಪಾವನ, ತುಂಗಭದ್ರಾ ಜಲಾಶಯ ಮೇಲ್ಭಾಗದಲ್ಲಿ ಜನವೋ ಜನ ಎನ್ನುವಂತೆ ಸೇರಿದ್ದರು.

ಜಲಾಶಯ ಇನ್ನೇನು ಒಂದೆರಡು ದಿನದಲ್ಲಿ ಭರ್ತಿಯಾಗುವುದರಿಂದ ನದಿಗೂ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆ ಇದೆ. ಹೀಗಾಗಿ, ಕ್ರಸ್ಟ್‌ ಗೇಟ್‌ಗಳನ್ನು ಯಾವಾಗ ತೆರೆಯಲಾಗುತ್ತದೆ ಎನ್ನುವ ಕುತೂಹಲದಲ್ಲಿ ಜನರು ಸೇರಿದ್ದರು.

ಕಳೆದೆರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಜಲಾಶಯ ವ್ಯಾಪ್ತಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಹೀಗಾಗಿ, ಈ ವರ್ಷ ಲಾಕ್‌ಡೌನ್‌ ತೆರವಾಗಿರುವುದರಿಂದ ಜನರು ತುಂಗಭದ್ರಾ ತುಂಬುವುದನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ಅಯ್ಯೋ ಎಷ್ಟೋ ದಿವಸಗಳಾಗಿವೆ ಇಂಥ ಆನಂದ ಸವಿಯದೇ, ಮನೆಯಲ್ಲಿಯೇ ಕಟ್ಟಿಹಾಕಿದ್ದ ಬದುಕಿಗೆ ಈಗ ರೆಕ್ಕೆ ಬಂದಂತೆ ಆಗಿದ್ದು, ಹೀಗಾಗಿ, ನಮ್ಮ ಜೀವನಾಡಿ ತುಂಬಿಕೊಳ್ಳುತ್ತಿರುವುದನ್ನು ನೋಡಲು ಬಂದಿದ್ದೇವೆ ಎನ್ನುತ್ತಾರೆ ಪ್ರವಾಸಿಗರು.

ಆಂಜನೇಯ ಜನ್ಮಸ್ಥಳ ಗೊಂದಲ ಎಬ್ಬಿಸುವುದು ಸರಿಯಲ್ಲ: ಮೋದಿ

ಇಲ್ಲ ಮುನ್ನೆಚ್ಚರಿಕೆ

ಕೊರೋನಾ ಸಂಪೂರ್ಣ ಹೋಗಿಲ್ಲ, ಈಗಲೂ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಜನ ಸೇರುವುದಕ್ಕೂ ಮಿತಿ ಹೇರಲಾಗಿದೆ. ಆದರೆ, ಇದ್ಯಾವುದನ್ನು ಲೆಕ್ಕಿಸದೇ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳನ್ನು ಸುತ್ತುತ್ತಿದ್ದಾರೆ. ಅಂಜನಾದ್ರಿ, ಮಹಾಲಕ್ಷ್ಮೀ ದೇವಾಲಯ. ಪಂಪಾ ಸರೋವರ, ಆನೆಗೊಂದಿ, ಇಟಗಿ, ಹುಲಿಗೆಮ್ಮಾ ದೇವಸ್ಥಾನ, ಕೊಪ್ಪಳ ಗವಿಮಠಕ್ಕೂ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿರುವುದು ಕಂಡು ಬಂದಿತು.

ಗುರುಪೂರ್ಣಿಮೆಯಲ್ಲಿಯೂ ಜನ

ಭಾಗ್ಯನಗರ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತ ಶನಿವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಭೇಟಿ ನೀಡಿ, ಆಶೀರ್ವಾದ ಪಡೆದರು.
 

Follow Us:
Download App:
  • android
  • ios