Asianet Suvarna News Asianet Suvarna News

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ: ಸರಳತೆಯಲ್ಲೂ ಉಕ್ಕುತ್ತಿದೆ ಭಕ್ತಿ..!

ದಾಸೋಹಕ್ಕೆ ಹರಿದು ಬರುತ್ತಿರುವ ದವಸಧಾನ್ಯ| ಕೋವಿಡ್‌ ಭಯವೂ ದೂರವಾಗಲಿ, ಸಮೃದ್ಧ ಬದುಕು ನಮ್ಮದಾಗಲಿ ಎಂದು ಕತೃಗದ್ದುಗೆಯ ಮುಂದೆ ನಿಂತು ಭಕ್ತಿಯಿಂದ ಬೇಡಿಕೊಳ್ಳುತ್ತಿರುವ ಭಕ್ತರು| ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಇನ್ನೊಂದು ದಿನ ಮಾತ್ರ ಬಾಕಿ| 

Devotees Rush to Visit Gavisiddeshjwara Matha in Koppal grg
Author
Bengaluru, First Published Jan 28, 2021, 10:40 AM IST

ಕೊಪ್ಪಳ(ಜ.28): ಕೋವಿಡ್‌ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲು ನಿರ್ಧರಿಸಿದ್ದರೂ ಭಕ್ತರ ಭಕ್ತಿ ಮಾತ್ರ ಉಕ್ಕುತ್ತಲೇ ಇದೆ. ಜನರು ಮಠದತ್ತ ಆಗಮಿಸಿ, ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಜಾತ್ರೆಯ ಪ್ರಾರಂಭದ ಮೂರನೇ ದಿನ ಇದ್ದ ತೆಪ್ಪೋತ್ಸವವನ್ನು ರದ್ದು ಮಾಡಲಾಗಿದೆ. ಆದರೂ ಭಕ್ತರು ಮಾತ್ರ ಆಗಮಿಸಿ, ಕೆರೆಯ ಸುತ್ತ ಸುತ್ತಿ ಹಳೆಯದನ್ನು ನೆನಪಿಸಿಕೊಳ್ಳುತ್ತಿರುವ ದೃಶ್ಯ ಗುರುವಾರ ಸಾಮಾನ್ಯವಾಗಿತ್ತು.

ಹರಿದುಬರುತ್ತಿರುವ ದವಸಧಾನ್ಯ: 

ಪ್ರತಿ ವರ್ಷವೂ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ದವಸ ಧಾನ್ಯ, ತಿನಿಸು, ರೊಟ್ಟಿಯ ಮಹಾಪೂರವೇ ಹರಿದುಬರುತ್ತಿತ್ತು. ಈ ವರ್ಷ ಅಂಥ ಮಹಾನ್‌ ದಾಸೋಹವನ್ನು ರದ್ದು ಮಾಡಿ, ಕೇವಲ ಸರಳ ದಾಸೋಹ ಹಮ್ಮಿಕೊಂಡಿದ್ದರೂ ಭಕ್ತರು ತಮ್ಮ ಭಕ್ತಿಯಿಂದ ಸಲ್ಲಿಸಬೇಕಾಗಿರುವುದನ್ನು ಸಲ್ಲಿಸುತ್ತಲೇ ಇದ್ದಾರೆ. ದೇಣಿಗೆ ಅಪಾರ ಪ್ರಮಾಣದಲ್ಲಿ ಹರಿದುಬರುತ್ತಿದೆ. ಕೊಪ್ಪಳ ಕಿರಾಣಿ ವರ್ತಕರು ಗುರುವಾರ ಕಿರಾಣಿಯನ್ನು ಸಂಗ್ರಹಿಸಿ ಮಠಕ್ಕೆ ಸಲ್ಲಿಸಿದರು.

ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ಸೇವೆ ತಪ್ಪಬಾರದು ಎಂಬ ಉದ್ದೇಶದಿಂದ ಸತತ 15 ದಿನಗಳ ಕಾಲ ನಡೆಯುತ್ತಿದ್ದ ದಾಸೋಹ ಸೇವೆಯನ್ನು ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಕೇವಲ ಮೂರು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಭಕ್ತ ಸಮೂಹಕ್ಕೆ ಕೇವಲ ದವಸ, ಧಾನ್ಯವನ್ನು ಮಠಕ್ಕೆ ಅರ್ಪಿಸುವಂತೆ ಕರೆ ನೀಡಿದ್ದರಿಂದ ಸದ್ಭಕ್ತರೂ ಧಾನ್ಯವನ್ನು ಮೆರವಣಿಗೆ ಮಾಡುತ್ತಾ ಶ್ರೀಮಠದ ದಾಸೋಹ ಮಂಟಪಕ್ಕೆ ತಂದು ಅರ್ಪಿಸುತ್ತಿದ್ದಾರೆ. ಇನ್ನೂ ಪ್ರತಿ ವರ್ಷದಂತೆ ಕೊಪ್ಪಳದ ವರ್ತಕರು ಮಠಕ್ಕೆ ದಾಸೋಹ ಸೇವೆ ಸಲ್ಲಿಸುತ್ತಿದ್ದು, ಅಂಗಡಿಗಳಲ್ಲಿ ಕಿರಾಣಿ ಸಾಮಗ್ರಿಗಳನ್ನು ಅರ್ಪಿಸುತ್ತಿದ್ದಾರೆ. ಬುಧವಾರ ನಗರದಲ್ಲಿನ ಹಲವು ಅಂಗಡಿ ಮುಂಗಟ್ಟುಗಳಲ್ಲಿ ಟ್ರ್ಯಾಕ್ಟರ್‌ ಮೂಲಕ ಕಿರಾಣಿಗಳನ್ನು ದಾಸೋಹ ಮಂಟಪಕ್ಕೆ ಅರ್ಪಿಸಲಾಯಿತು.

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಕೋವಿಡ್‌ನಲ್ಲೂ ಬತ್ತದ ಭಕ್ತಿ-ಭಾವ:

ಸರ್ಕಾರ, ಜಿಲ್ಲಾಡಳಿತ ಕೋವಿಡ್‌ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಈ ಮಧ್ಯೆಯೂ ಅಜ್ಜನ ಜಾತ್ರೆಗೆ ಭಕ್ತಿ ಭಾವ ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶದಿಂದ ಭಕ್ತರು ಮನೆ ಮನೆಗಳಿಂದ ಸಂಗ್ರಹಿಸಿದ ಅಕ್ಕಿ, ಬೇಳೆ, ಗೋಧಿ ಸೇರಿದಂತೆ ಇತರೆ ಧವಸ, ಧಾನ್ಯವನ್ನು ಟ್ರ್ಯಾಕ್ಟರ್‌, ಟಂಟಂ ಸೇರಿ ಆಟೋಗಳಲ್ಲಿ ಗ್ರಾಮದಿಂದ ಮಠದ ವರೆಗೂ ಭಕ್ತಿಯಿಂದ ಭಜನೆ ಮಾಡುತ್ತಲೇ ಅರ್ಪಿಸಿ ಭಕ್ತಿ ಭಾವ ತೋರುತ್ತಿದ್ದಾರೆ. ಕೋವಿಡ್‌ ಭಯವೂ ದೂರವಾಗಲಿ, ಸಮೃದ್ಧ ಬದುಕು ನಮ್ಮದಾಗಲಿ ಎಂದು ಕತೃಗದ್ದುಗೆಯ ಮುಂದೆ ನಿಂತು ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದಾರೆ.

"

ಜ. 28ಕ್ಕೆ ಗವಿಸಿದ್ದೇಶ್ವರ ಮೂರ್ತಿ ಮೆರವಣಿಗೆ :

ಮಠದ ಈ ಹಿಂದಿನ ಸಂಪ್ರದಾಯದಂತೆ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ನಡೆಯುವ ಒಂದು ದಿನ ಮೊದಲು ಗವಿಮಠಕ್ಕೆ ಭಕ್ತ ಸಮೂಹದಿಂದ ರಥೋತ್ಸವದ ಕಳಸ, ಗವಿಸಿದ್ದೇಶ್ವರರ ಮೂರ್ತಿ, ಪಲ್ಲಕ್ಕಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಲಿದೆ. ಅದರಂತೆ ಕೊಪ್ಪಳದ ಜಡೇಗೌಡರ ಮನೆಯಿಂದ ಪಲ್ಲಕ್ಕಿ ಮೆರವಣಿಗೆ ಬರಲಿದೆ. ತಾಲೂಕಿನ ಮುದ್ದಾಬಳ್ಳಿ-ಮಂಗಳಾಪುರ ಗ್ರಾಮಗಳಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿ ಹಾಗೂ ಹಲಗೇರಿ ಲಿಂ. ವೀರನಗೌಡ್ರ ಮನೆಯಿಂದ ರಥೋತ್ಸವದ ಕಳಸ ಜ. 28ರಂದು ನಗರದ ರಾಜಬೀದಿಯಲ್ಲಿ ಸಾಗಿ ಬರಲಿದೆ.

ಕಳೆಗಟ್ಟುತ್ತಿರುವ ಮಠ:

ಪ್ರಸಕ್ತ ವರ್ಷ ಜಾತ್ರೆಯ ಬಹುತೇಕ ಕಾರ್ಯಕ್ರಮಗಳನ್ನ ರದ್ದು ಮಾಡಿದ್ದರೂ ಮಠದಲ್ಲಿ ಜಾತ್ರೆಯ ಕಳೆ ಮತ್ತೆ ಕಟ್ಟುತ್ತಿದೆ. ಅದರಲ್ಲೂ ವಿದ್ಯುತ್‌ ದೀಪಾಲಂಕಾರ ಕಂಗೊಳಿಸುತ್ತಿದೆ.

ಇನ್ನೊಂದು ದಿನ ಬಾಕಿ:

ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಇನ್ನೇನು ಮಹಾರಥೋತ್ಸವ ಸಮಯ ಬಂದೇ ಬಿಟ್ಟಿತು, ಏನು ಮಾಡುತ್ತಾರೆ ಎನ್ನುವ ಕುತೂಹಲ ಇದ್ದೆ, ಇದೆ. ಜಾತ್ರೆಯ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದರೂ ರಥೋತ್ಸವ ಕುರಿತು ಇನ್ನು ನಿಖರ ಮಾಹಿತಿ ನೀಡದೆ ಇರುವುದರಿಂದ ಜನರು ತುದಿಗಾಲ ಮೇಲೆ ನಿಂತಿದ್ದಾರೆ. ಸರಳ ಜಾತ್ರೆಯ ರಥೋತ್ಸವ ಹೇಗೆ ಸಾಗುತ್ತದೆ ಎನ್ನುವುದೇ ಸದ್ಯದ ಕುತೂಹಲ.
 

Follow Us:
Download App:
  • android
  • ios