ಚನ್ನಗಿರಿ [ಸೆ.17]:   ಯಾವುದೇ ಸರ್ಕಾರ ಆಧಿಕಾರಕ್ಕೆ ಬರಲಿ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಾದ ಅನುದಾನ ತಂದು ಅಭಿವೃದ್ದಿ ಪಡಿಸಲು ಮುಂದಾಗಿದ್ದೇನೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು. ತಾಲೂಕಿನ ಮಸಣಿಕೆರೆ ಗ್ರಾಮದ ಎಸ್‌ಟಿ ಕಾಲೋನಿಯಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣದ ಗುದ್ದಲಿ ಪೂಜೆ, ನೂತನ ವಾಲ್ಮೀಕಿ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗಲೂ ಕ್ಷೇತ್ರಕ್ಕೆ ಅಗಬೇಕಾದ ಕೆಲಸಗಳಿಗೆ ಸೂಕ್ತ ಅನುದಾನ ತಂದಿದ್ದೆ. ಈಗ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿರುವುದರಿಂದ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿಯೂ ಆಗ ಬೇಕಾದ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದರು.

ಗ್ರಾಮಗಳಲ್ಲಿ ಆ ಪಾರ್ಟಿ ಈ ಪಕ್ಷಗಳೆಂಬ ಭಿನ್ನತೆ ಇಟ್ಟುಕೊಳ್ಳದೆ ಗ್ರಾಮದ ಜನರು ಒಗ್ಗಟ್ಟಾಗಿ ಗ್ರಾಮಕ್ಕೆ ಆಗ ಬೇಕಾದ ಆಭಿವೃದ್ದಿ ಕೆಲಸಗಳನ್ನು ಮಾಡಿಸಿಕೊಳ್ಳಿರಿ ಎಂದು ಹೇಳುತ್ತಾ ಚುನಾವಣೆಯ ಸಂಧರ್ಭಗಳಲ್ಲಿ ನಾವು ರಾಜಕಾರಣ ಮಾಡೋಣ ನಂತರದಲ್ಲಿ ಪಾರ್ಟಿ-ಪಕ್ಷಗಳೆಂಬ ಭಿನ್ನತೆಗಳಿಲ್ಲದೆ ಕೆಲಸ ಮಾಡುವ ಜಯಮಾನ ನನ್ನದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಬ್ರಾಣಿ ಹೋಬಳಿಯಲ್ಲಿ ತಾವರೆಕೆರೆಯಿಂದ ಶಂಕರಿಪುರದ ವರೆಗಿನ ರಸ್ತೆ ಕಾಮಗಾರಿಗೆ 2ಕೋಟಿ, ಮುಗಳಿ ಸರ್ಕಲ್‌ ನಿಂದ ಮುಗಳಿಹಳ್ಳಿ ವರೆಗಿನ ಸಿ.ಸಿ.ರಸ್ತೆ ನಿರ್ಮಾಣಕ್ಕೆ 2.10 ಕೋಟಿ, ಮಲ್ಲೇಶ್ವರ ದಿಂದ ಗಂಗೇನಹಳ್ಳಿ ವರೆಗಿನ ರಸ್ತೆ ನಿರ್ಮಾಣಕ್ಕೆ 3ಕೋಟಿ, ನೆಲ್ಲಿಹಂಕಲಿ ನಿಂದ ಕೊಡಕಿಕೆರೆ ವರೆಗಿನ ರಸ್ತೆ ಅಭಿವೃದ್ದಿಗೆ 3 ಕೋಟಿ ರು. ಮಂಜೂರು ಮಾಡಿಸಿದ್ದು ಮುಂದಿನ ವಾರದಿಂದ ಕೆಲಸಗಳು ಅರಂಭವಾಗಲಿವೆ ಎಂದು ತಿಳಿಸಿದರು.

ತಾಪಂ ಸದಸ್ಯ ರವಿ ಮಾತನಾಡಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಈ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿದ್ದರ ಪರಿಣಾಮವಾಗಿ ರೈತರ ಬದುಕು ಹಸನಾಗಿದೆ ಎಂದರು. ಎಪಿಎಂಸಿ ಸದಸ್ಯ ರಾಜಣ್ಣ ಗ್ರಾಮದ ಮುಖಂಡ ರಾಜೇಶ್‌, ಮಹಾರುದ್ರಪ್ಪ, ಪರಮೇಶ್ವರಪ್ಪ, ಅಭಿಯಂತರ ದೇವರಾಜ್‌, ಸಬ್‌ ಇನ್ಸ್‌ ಪೆಕ್ಟರ್‌ ಎಸ್‌.ಎಸ್‌.ಮೇಟಿ ಉಪಸ್ಥಿತರಿದ್ದರು.ಚಂದ್ರಮ್ಮ ಸ್ವಾಗತಿಸಿದರು.