ಎಲ್ಲದಕ್ಕೂ ದೇವೇಗೌಡರನ್ನು ಹೊಣೆ ಮಾಡಲಾಗದು: ಸಿ.ಎಸ್.ಪುಟ್ಟರಾಜು
ಮಗ-ಮೊಮ್ಮಗ ಮಾಡಿರುವ ತಪ್ಪುಗಳಿಗೆಲ್ಲಾ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೊಣೆಗಾರರನ್ನಾಗಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಶ್ನಿಸಿದರು.
- ಮಂಡ್ಯ: ಮಗ-ಮೊಮ್ಮಗ ಮಾಡಿರುವ ತಪ್ಪುಗಳಿಗೆಲ್ಲಾ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೊಣೆಗಾರರನ್ನಾಗಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಶ್ನಿಸಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ತನಿಖೆ ಆರಂಭಗೊಂಡಿದೆ. ಪಕ್ಷ ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಅವರು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವೇಗೌಡರ ಕುಟುಂಬದ ವಿರುದ್ಧ ಕುತಂತ್ರ ನಡೆಸುವ ಸಲುವಾಗಿಯೇ ಲಕ್ಷಾಂತರ ಪೆನ್‌ಡ್ರೈವ್‌ಗಳನ್ನು ಹಂಚಿ ಮರ್ಯಾದಸ್ಥ ಹೆಣ್ಣು ಮಕ್ಕಳನ್ನು ಬೀದಿಗೆಳೆದಿದ್ದಾರೆ. ಅವರು ಯಾರೇ ಆಗಿದ್ದರೂ ಅವರಿಗೂ ಶಿಕ್ಷೆಯಾಗಬೇಕು. ಚುನಾವಣೆಗೆ ಮೂರು ದಿನ ಇರುವಾಗ ಪೆನ್‌ಡ್ರೈವ್‌ಗಳನ್ನು ಹಂಚಲಾಗಿದೆ. ಇದರ ಹಿಂದಿನ ಉದ್ದೇಶವೇನು. ಚುನಾವಣಾ ದೃಷ್ಟಿಯಿಂದ ಈ ಕೆಲಸ ಮಾಡಿದ್ದು ಅದು ಕೊನೆಗೂ ಫಲಿಸಲಿಲ್ಲ ಎಂದರು.
ಪ್ರಜ್ವಲ್ ತಪ್ಪು ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ಈಗಿನ ತಂತ್ರಜ್ಞಾನದಲ್ಲಿ ಏನನ್ನು ಬೇಕಾದರೂ ಮಾಡಬಹುದು. ತನಿಖೆಯಾಗಿ ಸಂಪೂರ್ಣ ಸತ್ಯಾಸತ್ಯತೆ ಹೊರಬರಲಿ. ಪ್ರಜ್ವಲ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ನಿರ್ಧರಿಸಿರುವ ನಾಯಕರು ಹುಬ್ಬಳ್ಳಿಯಲ್ಲಿ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಸಭೆಯಲ್‌ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ನುಡಿದರು.
ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯವರ ಲೋಪವೂ ಎದ್ದು ಕಾಣುತ್ತಿದೆ. ಪೆನ್‌ಡ್ರೈವ್‌ಗಳನ್ನು ಹಂಚಿರುವ ಮಾಹಿತಿ ಸಿಕ್ಕರೂ ಸಕಾಲದಲ್ಲಿ ಪೊಲೀಸರು ಎಚ್ಚೆತ್ತುಕೊಂಡು ಅವುಗಳನ್ನು ಹಂಚಿದವರು ಯಾರೆಂಬ ಬಗ್ಗೆ ಪತ್ತೆಹಚ್ಚಲಿಲ್ಲ. ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಹಾಕದಂತೆ ನಿರ್ಬಂಧಿಸಲಿಲ್ಲ. ಹಾಗೆ ಮಾಡಿದ್ದರೆ ಕನಿಷ್ಠ ಮರ್ಯಾದಸ್ಥ ಹೆಣ್ಣು ಮಕ್ಕಳ ಗೌರವವನ್ನಾದರೂ ಕಾಪಾಡಬಹುದಿತ್ತು ಎಂದರು.