Asianet Suvarna News Asianet Suvarna News

Chamarajanagar: ನೋಟಿಸ್‌ ನೀಡಿದ್ರೂ ಗಣಿ ಸದ್ದು ನಿಂತಿಲ್ಲ: ಕದ್ದು ಮುಚ್ಚಿ ಗಣಿಗಾರಿಕೆ

ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೂಚನೆ ಇದ್ದರೂ ಕ್ವಾರಿಗಳಲ್ಲಿ ಕದ್ದು ಮುಚ್ಚಿ ಸ್ಛೋಟಕ ಬಳಕೆ, ಗಣಿಗಾರಿಕೆ ಜೊತೆಗೆ ಟಿಪ್ಪರ್‌ಗಳಲ್ಲಿ ಕಲ್ಲು ಸಾಗಾಣೆ ತಾಲೂಕಿನಲ್ಲಿ ನಡೆದಿದೆ. 
 

Despite the notice the noise of the mining did not stop at chamarajanagar gvd
Author
First Published Jan 14, 2023, 7:24 PM IST

ಗುಂಡ್ಲುಪೇಟೆ (ಜ.14): ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೂಚನೆ ಇದ್ದರೂ ಕ್ವಾರಿಗಳಲ್ಲಿ ಕದ್ದು ಮುಚ್ಚಿ ಸ್ಛೋಟಕ ಬಳಕೆ, ಗಣಿಗಾರಿಕೆ ಜೊತೆಗೆ ಟಿಪ್ಪರ್‌ಗಳಲ್ಲಿ ಕಲ್ಲು ಸಾಗಾಣೆ ತಾಲೂಕಿನಲ್ಲಿ ನಡೆದಿದೆ. ಚಾ.ನಗರ ಬಿಸಲವಾಡಿ ಕ್ವಾರಿ ದುರಂತ ಹಾಗೂ ಹಿರೀಕಾಟಿ ಕ್ವಾರಿಯಲ್ಲಿ ಅಕ್ರಮ ಗಣಿಗಾರಿಕೆ, ಕೋಟಿಗಟ್ಟಲೇ ರಾಜಧನ ಬಾಕಿಯಿದ್ದರೂ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಹಿನ್ನೆಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕ್ವಾರಿ ಸುರಕ್ಷಿತವೇ ಎಂದು ಪರಿಶೀಲನೆ ತನಕ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ನೋಟಿಸ್‌ ನೀಡಿದೆ.

ಆದರೂ, ತಾಲೂಕಿನ ಹಿರೀಕಾಟಿ ಹಾಗೂ ಗುಂಡ್ಲುಪೇಟೆ ಸುತ್ತಲಿನ ಕ್ವಾರಿಗಳಲ್ಲಿ ಹತ್ತಾರು ಟಿಪ್ಪರ್‌ಗಳಲ್ಲಿ ಓವರ್‌ ಲೋಡ್‌ ಕಲ್ಲು ತುಂಬಿಕೊಂಡು ಅತೀ ವೇಗವಾಗಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಓವರ್‌ಲೋಡ್‌ ಕಲ್ಲು, ಎಂ.ಸ್ಯಾಂಡ್‌, ಜಲ್ಲಿ ತುಂಬಿದ ಟಿಪ್ಪರ್‌ಗಳು ರಾಜಾರೋಷವಾಗಿ ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಪೊಲೀಸ್‌ ಠಾಣೆಗಳ ಮುಂದೆ ಓಡಾಡುತ್ತಿವೆ. ಆದರೆ, ಪೊಲೀಸರು ಟಿಪ್ಪರ್‌ಗಳ ನೋಡುತ್ತಿಲ್ಲ ಎಂದು ಸಾರ್ವಜನಿಕರ ದೂರು. ಸುರಕ್ಷಿತ ಗಣಿಗಾರಿಕೆ ಸಂಬಂಧ ಭೂ ವಿಜ್ಞಾನ ಇಲಾಖೆ ಅ​ಧಿಕಾರಿಗಳು ಭೇಟಿ ನೀಡಿದ್ದರು. 

Chamarajanagar: ಶೀತ ಹೆಚ್ಚಾದ ಕಾರಣ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ: ರೇಷ್ಮೆ ಬೆಳೆಗಾರರ ಆತಂಕ

ನೋಟಿಸ್‌ ನೀಡಿಯೂ ಗಣಿಗಾರಿಕೆ ಸದ್ದು ನಡೆಯುತ್ತಿದೆ ಎಂದು ಇಲಾಖೆ ನೀಡಿದ ನೋಟಿಸ್‌ಗೆ ಮೂರು ಕಾಸಿನ ಬೆಲೆ ಇಲ್ಲವೇ ಎಂದು ಹಿರೀಕಾಟಿ ಗ್ರಾಮದ ಎಚ್‌.ಎಸ್‌.ದಿನೇಶ್‌ ಪ್ರಶ್ನಿಸಿದ್ದಾರೆ. ಹಿರೀಕಾಟಿ ಕ್ವಾರಿಯಲ್ಲಿರುವ ದೇವಸ್ಥಾನ ಹಾಗೂ ಸ್ಮಶಾನದ ಸುತ್ತ ಮಣ್ಣು ಎತ್ತಿಸಿ ಗಣಿಗಾರಿಕೆ ನಡೆಸಲು ಕೋಟ್ಯಾಂತರ ಬಾಕಿ ಇರುವ ಲೀಸ್‌ದಾರರು ಮುಂದಾಗಿದ್ದಾರೆ. ಇದು ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ ಎಂದಿದ್ದಾರೆ. ಹಿರೀಕಾಟಿ ಕ್ವಾರಿಯೊಂದರಲ್ಲೇ ಕೋಟ್ಯಾಂತರ ರು. ಬಾಕಿ ಇರುವ ಲೀಸ್‌ದಾರರಿಗೆ ಮತ್ತೆ ಲೀಸ್‌ ಮಾಡುವ ಮೂಲಕ ಇಲಾಖೆ ನಿಯಮ ಉಲ್ಲಂಘಿಸಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರೂ ಪರಿಶೀಲನೆಯ ನೆಪ ಹೇಳುತ್ತಿದ್ದಾರೆ ಆದರೆ ಕ್ರಮ, ಕೇಸು ಹಾಕುತ್ತಿಲ್ಲ ಎಂಬುದು ಅವರ ಅನುಮಾನವಾಗಿದೆ.

ಕ್ವಾರಿಗೆ ಡಿಸಿ ಭೇಟಿ ಸುದ್ದಿ ಕೇಳಿ ಗಣಿಗಾರಿಕೆಯೇ ಸ್ಥಗಿತ: ಕನ್ನಡಪ್ರಭ ಪತ್ರಿಕೆಯಲ್ಲಿ ತಾಲೂಕಿನ ಹಿರೀಕಾಟಿ ಕ್ವಾರಿಯ ಅಕ್ರಮಗಳ ಬಗ್ಗೆ ವರದಿ ಗಮನಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಕ್ವಾರಿಗೆ ಭೇಟಿ ನೀಡಲಿದ್ದಾರೆಂಬ ವಿಷಯ ಸೋರಿಕೆಯಾದ ಹಿನ್ನೆಲೆ ಕ್ವಾರಿಯಲ್ಲಿ ಅಕ್ರಮಗಳ ಬಂಡವಾಳ ಬಯಲಿಗೆ ಬರುತ್ತದೆ ಎಂದು ಕ್ವಾರಿ ನಡೆಸುವ ಮಂದಿ ಗಣಿ ಸದ್ದು ಸ್ತಬ್ಧಗೊಳಿಸಿದ ಪ್ರಸಂಗ ನಡೆಯಿತು. ತಾಲೂಕಿನ ಹಿರೀಕಾಟಿ ಬಳಿಯ ಕ್ವಾರಿಯಲ್ಲಿ ನಿಯಮ ಬದ್ಧ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದ ಗಣಿ ಗುತ್ತಿಗೆ ಲೀಸ್‌ದಾರರು ಜಿಲ್ಲಾಧಿಕಾರಿಗಳು ಕ್ವಾರಿಗೆ ಭೇಟಿ ನೀಡುತ್ತಾರೆ ಎಂದು ಕ್ವಾರಿಯಲ್ಲಿ ಗಣಿಗಾರಿಕೆ ನಿಲ್ಲಿಸಿದ್ದೇಕೆ ಎಂಬ ಸಹಜವಾಗಿ ಪ್ರಶ್ನೆ ಎಳುತ್ತಿದೆ.

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮುನ್ನ ಅಧಿಕಾರಿಯೊಬ್ಬರು ಹಿರೀಕಾಟಿ ಕ್ವಾರಿಯ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಬರುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸಭೆ ಮುಗಿಸಿ ಹಿರೀಕಾಟಿ ಕ್ವಾರಿಯತ್ತ ಹೋಗೋಣ ಎಂದು ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಕರೆಸಲು ಸೂಚನೆ ನೀಡಿದ್ದು ಆಯಿತು.

Chamarajanagar: ಬೆಳೆ ರಕ್ಷಣೆಗಾಗಿ ರೈತನಿಂದ ನಾಯಿಗೆ ಹುಲಿ ಬಣ್ಣ!

ನಂತರ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಕೆಲ ಪತ್ರಕರ್ತರು ಸರ್‌ ನೀವು ಹಿರೀಕಾಟಿ ಕ್ವಾರಿಗೆ ಹೋಗುವ ವಿಚಾರ ಅರಿತು ಗಣಿಗಾರಿಕೆ ನಿಲ್ಲಿಸಿದ್ದಾರೆ. ಟಿಪ್ಪರ್‌ಗಳು ಕೂಡ ನಿಂತಿವೆ. ಡ್ರೋನ್‌ ಸರ್ವೆ ಎಂದು ಕ್ವಾರಿಯ ಆಳಕ್ಕೆ ಮಣ್ಣು ಹಾಕಿದ್ದಾರೆ ಎಂದರು. ಹೌದ ಎಂದ ಜಿಲ್ಲಾಧಿಕಾರಿಗಳು ಅನಿರೀಕ್ಷಿತವಾಗಿ ಕ್ವಾರಿಗೆ ಭೇಟಿ ನೀಡಿದರೆ ಆಯಿತು ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಕ್ವಾರಿಗೆ ಬರುತ್ತಾರೆ ಎಂದು ಗಣಿಗಾರಿಕೆ ಸದ್ದು ನಿಲ್ಲಿಸಿದ್ದ ಕ್ವಾರಿ ನಡೆಸುವವರು ಜಿಲ್ಲಾಧಿಕಾರಿಗಳು ಚಾಮರಾಜನಗರಕ್ಕೆ ತೆರಳಿದರೂ ಗಣಿಗಾರಿಕೆ ಸಂಜೆಯ ತನಕ ನಡೆಸಲಿಲ್ಲ.

Follow Us:
Download App:
  • android
  • ios