Chamarajanagar: ಶೀತ ಹೆಚ್ಚಾದ ಕಾರಣ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ: ರೇಷ್ಮೆ ಬೆಳೆಗಾರರ ಆತಂಕ
ತುಂತುರು ಮಳೆ,ಮೋಡ ಮುಸುಕಿದ ವಾತಾವರಣ, ಚಳಿಯಿಂದ ಹಿಪ್ಪುನೇರಳೆ ಗಿಡಗಳ ಬೆಳವಣಿಗೆ ವೇಗ ತಗ್ಗಿಸಿದೆ. ಇದು ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಸೊಪ್ಪು ಸಿಗದಿರುವುದರಿಂದ ಹುಳು ಸಾಕಾಣಿಕೆ ಕುಂಠಿತವಾಗ್ತಿದೆ.
ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜ.11): ತುಂತುರು ಮಳೆ,ಮೋಡ ಮುಸುಕಿದ ವಾತಾವರಣ, ಚಳಿಯಿಂದ ಹಿಪ್ಪುನೇರಳೆ ಗಿಡಗಳ ಬೆಳವಣಿಗೆ ವೇಗ ತಗ್ಗಿಸಿದೆ. ಇದು ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಸೊಪ್ಪು ಸಿಗದಿರುವುದರಿಂದ ಹುಳು ಸಾಕಾಣಿಕೆ ಕುಂಠಿತವಾಗ್ತಿದೆ. ನಲವತ್ತರಿಂದ ನಲವತ್ತೈದು ದಿನಕ್ಕೆ ಬರ್ತಿದ್ದ ಸೊಪ್ಪು ಅರವತ್ತು ದಿನ ಕಳೆದರೂ ಬರ್ತಿಲ್ಲ.ಇದ್ರಿಂದ ರೇಷ್ಮೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ. ಒಂದು ಕಾಲದಲ್ಲಿ ರೇಷ್ಮೆಗೆ ಚಾಮರಾಜನಗರ ಹೆಸರುವಾಸಿಯಾಗಿತ್ತು. ರಾಜ್ಯದ ನಾನಾ ಭಾಗದಿಂದ ರೇಷ್ಮೆ ಕೊಂಡುಕೊಳ್ಳಲೂ ವ್ಯಾಪಾರಿಗಳು ತಾ ಮುಂದು ನಾ ಮುಂದು ಅಂತಾ ಚಾಮರಾಜನಗರಕ್ಕೆ ಬರುತ್ತಿದ್ದರು.
ಚಾಮರಾಜನಗರ ಜಿಲ್ಲೆಯಲ್ಲೆ ಕೊಳ್ಳೇಗಾಲ, ಸಂತೆಮರಹಳ್ಳಿ ಹಾಗು ಚಾಮರಾಜನಗರ ಸೇರಿದಂತೆ ಮೂರು ಸರ್ಕಾರಿ ರೇಷ್ಮೆ ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಹೀಗಾಗಿ ಹೆಚ್ಚಿನ ರೈತರು ರೇಷ್ಮೆ ಬೆಳೆಯುವ ಮೂಲಕ ಜೀವನ ನಡೆಸ್ತಿದ್ದರು. ಇತ್ತೀಚೆಗೆ ರೇಷ್ಮೆ ಬೆಳೆಯುವವರ ಸಂಖ್ಯೆ ಇಳಿಮುಖವಾಗಿದ್ದು, ಸದ್ಯ ಹಿಪ್ಪುನೇರಳೆ ಬೆಳೆ ಬೆಳೆಯುವ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆಳೆಯನ್ನು ಬೆಳೆದ್ರೆ ಲಾಭ ಖಂಡಿತಾ ಸಿಗುತ್ತದೆ ಎಂಬುದು ರೈತರ ಅಭಿಪ್ರಾಯ. ಆದ್ರೆ ಗಡಿಜಿಲ್ಲೆ ಚಾಮರಾಜನಗರದ ಯಳಂದೂರು, ಕೊಳ್ಳೇಗಾಲ ಭಾಗದಲ್ಲಿ ಮಾತ್ರ ಹಿಪ್ಪುನೇರಳೆ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಚಿಂತಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಜ.16ರಂದು ಕುಮಾರಸ್ವಾಮಿ 'ರೈತ ಸಂಕ್ರಾಂತಿ': ರಾಜ್ಯದ ರೈತರ ಜತೆ ಅನ್‌ಲೈನ್ ಸಂವಾದ
ಯಾಕಂದ್ರೆ ಚಳಿ ಮತ್ತು ಹಿಮದ ಕಾರಣದಿಂದ 40 ದಿನಕ್ಕೆ ಕಟಾವಿಗೆ ಬರಬೇಕಿದ್ದ ಸೊಪ್ಪು 60 ದಿನಗಳಾದ್ರೂ ಕಟಾವಿಗೆ ಬಂದಿಲ್ಲ. ಶೀತ ಹೆಚ್ಚಾಗಿರುವುದರಿಂದ ಎಲೆಗಳ ಮೇಲೆ ತೇವ ಆವರಿಸಿರುತ್ತದೆ. ಇಂತಹ ಸೊಪ್ಪನ್ನು ಹುಳುಗಳಿಗೆ ಹಾಕಿದ್ರೆ ಸುಣ್ಣಕಟ್ಟು ರೋಗ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಿಪ್ಪುನೇರಳೆ ಬೆಳೆದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.ಆದಾಯದ ರೇಷ್ಮೆ ಬೆಳೆಯಲು ರೈತರು ಹಿಂದೇಟು ಹಾಕುವಂತಾಗಿದೆ. ಇನ್ನು ರೇಷ್ಮೆ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ 1117 ಹೇಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ ಬೆಳೆಯಲಾಗಿದೆ. ಈ ಬಾರಿ ಅತಿಯಾದ ಮಳೆ ಆಗಿರುವುದರಿಂದ, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಹಾಗು ಜಾಸ್ತಿ ಚಳಿ ಇರುವುದರಿಂದ ಸೊಪ್ಪಿನ ಇಳುವರಿ ಕಡಿಮೆಯಾಗಿದೆ.
Ballari: ತಂದೆಯ ಹುಟ್ಟುಹಬ್ಬದಂದು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ ಮಗಳು
ಹೀಗಾಗಿ ರೇಷ್ಮೆ ಮೊಟ್ಟೆಗಳಿಗೆ ಬೇಕಾದಷ್ಟು ಸೊಪ್ಪು ಬೆಳೆಯುವುದು ರೈತರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಹೇಳುತ್ತಾರೆ. ಇನ್ನುಳಿದಂತೆ ಈ ಬಾರಿ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಆದ್ರೆ ರೇಷ್ಮೆ ಮೊಟ್ಟೆಗೆ ಬೇಕಾಗುವಷ್ಟು ಸೊಪ್ಪು ಉತ್ಪಾದನೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ರೇಷ್ಮೆ ಹುಳು ಆರೈಕೆ, ಮನೆಗಳಲ್ಲಿ ಉಷ್ಣಾಂಶ ಕಾಪಾಡುವುದು ಒಂದು ದೊಡ್ಡ ಸವಾಲಾಗಿದೆ. ಒಂದು ಕಡೆ ಅತಿಯಾದ ಮಳೆಯಾಗಿದ್ದರೆ ಈಗ ಚಳಿಯ ಜೊತೆಗೆ ಹಿಮ ಬೀಳುತ್ತಿದ್ದು ರೇಷ್ಮೆಗೆ ಬೇಕಾದ ಹಿಪ್ಪುನೇರಳೆ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಸದ್ಯ ರೈತರು ಯಾವುದೇ ಬೆಳೆ ಬೆಳೆದರೂ ಅವರಿಗೆ ಸಂಕಷ್ಟ ಎದುರಾಗ್ತಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.