ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.11): ದಲ್ಲಾಳಿಗಳಿಂದ ರೈತರ ಸುಲಿಗೆಯನ್ನು ತಪ್ಪಿಸಿ, ರೈತರೇ ನೇರವಾಗಿ ಮಾರಾಟ ಮಾಡುವಂತೆ ಆಗಬೇಕು ಎಂದು ಎಷ್ಟೇ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಆದರೆ, ಈಗ ಕೊರೋನಾ ಪರಿಣಾಮ ರೈತರೇ ನೇರವಾಗಿ ಮಾರಾಟ ಮಾಡುತ್ತಿದ್ದು, ತೋಟಗಾರಿಕಾ ಇಲಾಖೆ ಇದರ ಸಾರಥ್ಯ ವಹಿಸಿದೆ.

ಲಾಕ್‌ಡೌನ್‌ ಆಗುತ್ತಿದ್ದಂತೆ ಇಲ್ಲಿಯ ತೋಟಗಾರಿಕಾ ಇಲಾಖೆ ವೆಂಡರ್‌ (ಮಾರಾಟಗಾರರು) ಸೇರಿದಂತೆ ರೈತರಿಗೂ ನೇರವಾಗಿ ಮಾರಾಟ ಮಾಡುವುದಕ್ಕೆ ಆಹ್ವಾನ ಮಾಡಿ, 2 ಪ್ರತ್ಯೇಕ ವಾಹನಗಳನ್ನು ಮಾಡಿ ಕೊಡಲಾಯಿತು. ಇದರಿಂದ ರೈತರಿಗೆ ಬಹಳ ಅನುಕೂಲವೇ ಆಯಿತು.

ಲಾಕ್‌ಡೌನ್‌ ಎಫೆಕ್ಟ್‌: ಆಶ್ರಯ ಪಡೆದ ಕಾರ್ಮಿಕರಿಗೆ ಧರ್ಮಬೋಧೆ!

ಮಾರುಕಟ್ಟೆ ಇಲ್ಲದೆ ಕುಸಿದು ಹೋಗಿದ್ದ ರೈತರಿಗೆ ಜೀವ ಬಂದಂತೆ ಆಯಿತು. ಇದರ ಸಾರಥ್ಯವನ್ನು ವಹಿಸಿದ ತೋಟಗಾರಿಕೆ ಇಲಾಖೆ, ರೈತರು ತಾವೂ ಬೆಳೆದಿದ್ದ ತರಕಾರಿ, ಹಣ್ಣನ್ನು ಮಾರಾಟ ಮಾಡುವುದಕ್ಕೆ ಪಾಸ್‌ ನೀಡಿದೆ. ರೈತರು ವಾಹನವೊಂದರಲ್ಲಿ ವಾರ್ಡ್‌ವಾರು, ಹಳ್ಳಿವಾರು ಮಾರಾಟ ಮಾಡುವುದಕ್ಕೆ ಅನುಮತಿ ನೀಡಿತು. ಹೀಗೆ ಜಿಲ್ಲಾದ್ಯಂತ ಕೊಪ್ಪಳ, ಕುಷ್ಟಗಿ, ಗಂಗಾವತಿ, ಯಲಬುರ್ಗಾ ಹಾಗೂ ಕನಕಗಿರಿ ಸೇರಿ ಸುಮಾರು 200 ರೈತರ ವಾಹನಗಳು ಸಂಚರಿಸುತ್ತಿವೆ. ನಿತ್ಯವೂ ತಮ್ಮ ಹೊಲದಲ್ಲಿ ಬೆಳೆದ ತರಕಾರಿಯನ್ನು ರೈತರು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯ ಸಮಸ್ಯೆಯಿಂದ ಪರಿಪೂರ್ಣವಾಗದಿದ್ದರೂ ಗಂಡಾಂತರದಿಂದ ಪಾರಾಗುವುದನ್ನು ಕಲಿತಿದ್ದಾರೆ.

ವೆಂಡರ್‌ಗಳಿಂದಲೂ ಮಾರಾಟ:

ಇದಲ್ಲದೆ ತರಕಾರಿಯನ್ನು ವಾಹನದಲ್ಲಿ ಮಾರಾಟ ಮಾಡುವವರು ಇದ್ದಾರೆ. ಇವರ ಚಾಲಕನ ಸಂಖ್ಯೆ ಮತ್ತು ಮಾರಾಟ ಮಾಡುವವರ ಮೊಬೈಲ್‌ ಸಂಖ್ಯೆಯನ್ನು ರೈತರಿಗೆ ನೀಡಿದ್ದಾರೆ. ರೈತರು ತಮ್ಮ ಹೊಲದಲ್ಲಿ ಬೆಳೆದಿರುವುದನ್ನು ಇವರೊಂದಿಗೆ ಮಾತನಾಡಿ, ವ್ಯವಹಾರ ಕುದುರಿಸಿಕೊಂಡು ಇವರ ಮೂಲಕವೂ ಮಾರಾಟ ಮಾಡುತ್ತಾರೆ. ಹೀಗಾಗಿ, ರೈತರ ಉತ್ಪಾದನೆಯನ್ನು ಮಾರಾಟ ಮಾಡುವುದಕ್ಕೆ ಕೊಪ್ಪಳದ ಮಾದರಿ ಈಗ ರಾಜ್ಯಾದ್ಯಂತ ಜಾರಿಯಾಗುತ್ತಿದೆ.

ಕೃಷಿ ಇಲಾಖೆಯ ಆಯುಕ್ತರೇ ಸ್ವತಃ ಈ ಕುರಿತು ಮೌಖಿಕ ಆದೇಶ ಮಾಡಿ, ಕೊಪ್ಪಳದಲ್ಲಿ ಮಾಡುತ್ತಿರುವ ಪದ್ಧತಿಯನ್ನು ಇತರೆ ಜಿಲ್ಲೆಯಲ್ಲಿಯೂ ಮಾಡುವಂತೆ ಸೂಚಿಸಿದ್ದಾರೆ. ಪರಿಣಾಮ ಈಗ ರಾಜ್ಯಾದ್ಯಂತ ರೈತರು ನೇರವಾಗಿ ಮಾರಾಟ ಮಾಡುವ ಹೊಸಪರಂಪರೆ ಬೆಳೆದಿದೆ.

ತಳ್ಳುಗಾಡಿ:

ಈ ಹಿಂದೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದ್ದ ತಳ್ಳುಗಾಡಿಯೂ ಅನುಕೂಲವಾಗಿದ್ದು, ಅವುಗಳ ಮೂಲಕವೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.ರೈತರ ಉತ್ಪನ್ನಗಳನ್ನು ರೈತರೇ ಮಾರುವಂತೆ ಆಗಬೇಕು. ಇದರ ಎಲ್ಲ ಲಾಭ ರೈತರಿಗೆ ನೇರವಾಗಿ ಹೋಗಬೇಕು ಎನ್ನುವ ಕಲ್ಪನೆಯಲ್ಲಿ ಪ್ರಾರಂಭಿಸಿದ್ದು, ಈಗ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ. ಜಿಲ್ಲಾದ್ಯಂತ ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದಿ ಕೊಪ್ಪಳ ತೋಟಗಾರಿಕಾ ಇಲಾಖೆ ಡಿಡಿ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.