ಧಾರವಾಡ(ಏ. 11):  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದ ಮೇಲೆ ಹೇರಿಕೆಯಾಗಿರುವ ಲಾಕ್‌ಡೌನ್‌ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಡಳಿತದ ಆಶ್ರಯ ಪಡೆದಿರುವ 315 ಕಾರ್ಮಿಕರಿಗೀಗ ಆಯಾ ಧರ್ಮಗುರುಗಳಿಂದ ಮಾನಸಿಕ ಸ್ಥೈರ್ಯ ತುಂಬಲಾಗುತ್ತದೆ! ಶುಕ್ರವಾರ ಮಾಧ್ಯಮಗಳ ಸ್ಥಳೀಯ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಈ ವಿಷಯ ತಿಳಿಸಿದ್ದಾರೆ.

ಬೇರೆ ರಾಜ್ಯ, ಜಿಲ್ಲೆಗಳಲ್ಲಿ ಕೂಲಿಕಾರ್ಮಿಕರಾಗಿ ಇದ್ದ 315 ಜನ ಲಾಕ್‌ಡೌನ್‌ ವೇಳೆ ತಮ್ಮೂರಿಗೆ ತೆರಳುವಾಗ ದಾರಿಮಧ್ಯೆ ಇಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ಇಲ್ಲಿನ 9 ಹಾಸ್ಟೆಲ್‌ಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಹೊಸ ಬಟ್ಟೆ, ಹಾಸಿಗೆ ಇತ್ಯಾದಿ ಅಗತ್ಯ ವಸ್ತುಗಳನ್ನೂ ಪೂರೈಸಲಾಗಿದೆ. ನಿತ್ಯ ಇಸ್ಕಾನ್‌ ಬಿಸಿಯೂಟ, ವೈದ್ಯಕೀಯ ನೆರವು ಇತ್ಯಾದಿಗಳನ್ನೂ ನೀಡಲಾಗಿದೆ ಎಂದರು.

ಕೊರೋನಾ ಭೀತಿ: ರೈಲ್ವೆಯಿಂದ 80 ಸಾವಿರ ಐಸೋಲೇಷನ್‌ ಬೋಗಿ

ಈ ಮಧ್ಯೆ ಅವರಲ್ಲಿ ಆತ್ಮಸ್ಥೈರ್ಯ ತುಂಬಿಸಲು ಆಯಾ ಧರ್ಮಗುರುಗಳಿಂದ ಧರ್ಮಬೋಧೆ, ನೀತಿಬೋಧೆ, ಕಠಿಣ ಸಂದರ್ಭದಲ್ಲಿ ಬದುಕು ಎದುರಿಸುವ ಪರಿಯನ್ನು ಹೇಳಿಕೊಡಲಾಗುತ್ತಿದೆ. ಲಾಕ್‌ಡೌನ್‌, ಕೆಲಸವಿಲ್ಲ, ಊರಿಗೆ ಹೋಗಲಾಗುತ್ತಿಲ್ಲ, ಇನ್ನೆಷ್ಟುದಿನ ಹೀಗೆ ದಿನದೂಡುವುದು ಇತ್ಯಾದಿ ವಿಷಯಗಳಿಂದ ಅವರು ಮಾನಸಿಕವಾಗಿ ಕುಗ್ಗಿಹೋಗಬಾರದು ಎನ್ನುವ ಕಾರಣಕ್ಕೆ ಧಾರವಾಡ ಜಿಲ್ಲಾಡಳಿತ ಈ ವಿನೂತನ ಪ್ರಯೋಗ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುರುಷೋತ್ತಮ, ಹಾಸ್ಟೆಲ್‌ ವಾರ್ಡನ್‌ ಪ್ರಹ್ಲಾದ್‌ ಗೆಜ್ಜಿ ಮತ್ತಿತರರು ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ:

ಕೊರೋನಾ ಸಮೀಕ್ಷೆ, ತಪಾಸನೆಗೆ ತೆರಳುವ ಆಶಾ ಕಾರ್ಯಕರ್ತೆಯರ ಮೇಲೆ ಕೆಲವರು ಹಲ್ಲೆ ಮಾಡುವುದು, ಅವಮಾನಿಸುವುದು ಮಾಡುತ್ತ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಪ್ಪಿಸಲು ಪೊಲೀಸ್‌ ರಕ್ಷಣೆ ನೀಡಲಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಅಗತ್ಯವಿರುವ ಮಾಸ್ಕ್‌ ಇತ್ಯಾದಿಗಳನ್ನೂ ನೀಡಲಾಗುತ್ತದೆ. ಈ ಆಶಾ ಕಾರ್ಯಕರ್ತೆಯರಿಗೆ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಸಾಮಗ್ರಿ ಜಿಲ್ಲಾಡಳಿತಕ್ಕೆ ಕೊಡಿ:

ಈ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ, ಕೂಲಿ ಕಾರ್ಮಿಕರಿಗೆ ದವಸ ಧಾನ್ಯ ಹಂಚಲು ವಿವಿಧ ರಾಜಕೀಯ ಪಕ್ಷದವರು, ವಿವಿಧ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ದಾನಿಗಳು ಹೋಗುವುದರಿಂದ ಜನದಟ್ಟನೆ ಹೆಚ್ಚಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತಿದೆ. ಇದರಿಂದ ಕೊರೋನಾ ವೈರಸ್‌ ನಿಯಂತ್ರಣವೂ ಕಷ್ಟವಾಗುತ್ತಿದೆ. ಹಾಗಾಗಿ ಅಂಥ ದಾನಿಗಳು ತಾವು ನೀಡಬೇಕೆಂದಿರುವ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು. ಇಂಥ ಸಾಮಗ್ರಿಗಳ ಸಂಗ್ರಹಕ್ಕೆ ನಾಲ್ಕಾರು ಸೆಂಟರ್‌ಗಳನ್ನು ತೆರೆಯಲಾಗಿದೆ ಎಂದು ಅವರು ಮನವಿ ಮಾಡಿದರು. ಪಾಲಿಕೆ ಆಯುಕ್ತ ಸುರೇಶ್‌ ಇಟ್ನಾಳ್‌, ಹುಬ್ಬಳ್ಳಿ ತಹಸೀಲ್ದಾರ ಶಶಿಧರ ಮಾಡ್ಯಾಳ ಮತ್ತಿತರರು ಸಭೆಯಲ್ಲಿ ಇದ್ದರು.