ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.03): ಅವಳಿ ಜಿಲ್ಲೆಯಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಜೂನ್‌ ಅಂತ್ಯದವರೆಗೆ ಲಾಕ್‌ಡೌನ್‌ ವಿಸ್ತರಿಸಬೇಕು ಎಂಬ ಕೂಗು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದಲೂ ಬಲವಾಗಿ ಕೇಳಿ ಬರುತ್ತಿದೆ.

ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಇಳಿಕೆಯಾಗುತ್ತಿರುವ ಕೊರೋನಾ ಸೋಂಕು ಹಾಗೂ ಸಾವಿನ ಪ್ರಕರಣಗಳಿಂದ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು ಎರಡು ಜಿಲ್ಲೆಯಲ್ಲಿ ಕೋವಿಡ್‌ನ ಆರ್ಭಟ ಭಾಗಶಃ ಇಳಿಕೆಯಾಗಲು ಲಾಕ್‌ಡೌನ್‌ ಮುಂದುವರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಲಾಕ್‌ಡೌನ್‌ ವಿಸ್ತರಣೆ ಕುರಿತು ಪ್ರಸ್ತಾಪಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌, ತಜ್ಞರ ಅಭಿಪ್ರಾಯ ಪಡೆದು ಮುಂದಿನ ಹಂತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಲಾಕ್‌ಡೌನ್‌ ವಿಸ್ತರಣೆಯ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರು ಸಹ ಇದೇ ರೀತಿಯ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರಿಂದ ಸಹ ಲಾಕ್‌ಡೌನ್‌ ವಿಸ್ತರಣೆಯ ಒತ್ತಾಯಗಳು ಕೇಳಿ ಬಂದಿವೆ.

ಕೊರೋನಾ ಇನ್ನೂ ಹೋಗಿಲ್ಲ: ಎಚ್ಚರ ತಪ್ಪಿ​ದರೆ ಸೋಂಕು ಹೆಚ್ಚಳ ಭೀತಿ

ಲಾಕ್‌ಡೌನ್‌ನಿಂದ ಮಾತ್ರ ಸಾವು ಇಳಿಕೆ:

ಲಾಕ್‌ಡೌನ್‌ನಿಂದ ಅವಳಿ ಜಿಲ್ಲೆಯಲ್ಲಿ ಸೋಂಕು ತೀವ್ರ ಕಡಿಮೆಯಾಗಿದ್ದು, ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಇಳಿದಿದೆ. ಜೂನ್‌ 30ರ ವರೆಗೆ ವಿಸ್ತರಣೆ ಮಾಡಿದಲ್ಲಿ ಪೂರ್ಣ ಇಳಿಕೆ ಕಾಣುವ ಸಾಧ್ಯತೆ ನಿಚ್ಚಳವಾಗಿದೆ. ಲಾಕ್‌ಡೌನ್‌ ನಡುವೆಯೂ ಜನರು ಓಡಾಡುತ್ತಿದ್ದಾರೆ. ಇನ್ನು ತೆರವುಗೊಳಿಸಿದರೆ, ಇಡೀ ಜಿಲ್ಲೆ ಜನಜಾತ್ರೆಯಾಗುತ್ತದೆ. ಮತ್ತೆ ಸೋಂಕು ಏರಿಕೆ ಕಂಡು ಮತ್ತೆ ಲಾಕ್‌ಡೌನ್‌ಗೆ ಅವಕಾಶವಾಗಲಿದೆ. ಹೀಗಾಗಿ ಸೋಂಕು ನಿಯಂತ್ರಣ ವೇಳೆಯೇ ಪೂರ್ಣ ಕ್ರಮದ ನಿಲುವು ಕೈಗೊಳ್ಳುವುದು ಸೂಕ್ತ. ಅದರಲ್ಲೂ ಹಳ್ಳಿಗಳಲ್ಲೂ ವ್ಯಾಪಿಸಿರುವ ಸೋಂಕನ್ನು ನಿವಾರಿಸುವ ತುರ್ತು ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಯಿಸಿದ್ದಾರೆ.

ನೆಮ್ಮದಿ ಮೂಡಿಸಿದ ಸೋಂಕು ಇಳಿಕೆಯ ಕ್ರಮಾಂಕ:

ಕಳೆದ ಹದಿನೈದು ದಿನಗಳಲ್ಲಿ ಕೋವಿಡ್‌ ಸೋಂಕು ಹಾಗೂ ಸಾವಿನ ಇಳಿಕೆ ಪ್ರಮಾಣ ಗಮನಿಸಿದರೆ, ಹೆಚ್ಚು ಸಮಾಧಾನ ತಂದಿದೆ. ಮೇ 19ರಂದು 1297 ಸೋಂಕಿತ ಪ್ರಕರಣಗಳು ಕಂಡು ಬಂದಿದ್ದು 23 ಜನ ಸಾವಿಗೀಡಾಗಿದ್ದರು. 20ರಂದು 1109 ಪ್ರಕರಣ ಹಾಗೂ 22 ಸಾವು, 21ರಂದು 1650 ಸೋಂಕು, 23 ಸಾವಿನ ಪ್ರಕರಣಗಳು ಕಂಡು ಬಂದಿದ್ದವು. ಈ ಮೂರು ದಿನಕ್ಕೆ ಹೋಲಿಸಿದರೆ ಮೇ 22ರಂದು ಸೋಂಕಿತರ ಪ್ರಮಾಣ ಏರಿಕೆ ಕಂಡಿತ್ತು. 19 ಜನರು ಸಾವನ್ನಪ್ಪಿದ್ದರು. ಮೇ 27ರ ವರೆಗೆ 20ರಿಂದ 22 ಜನರು ನಿತ್ಯ ಸಾವಿನ ಮನೆಯ ಕದ ತಟ್ಟಿದ್ದರು. 28ರಂದು 782 ಸೋಂಕಿತರು ಕಂಡು ಬಂದರೆ, 17 ಸಾವು, 29ರಂದು ಮತ್ತಷ್ಟುಸೋಂಕು ಇಳಿಕೆ ಕಂಡಿತಲ್ಲದೆ 671 ಪ್ರಕರಣ ಹಾಗೂ 14 ಸಾವು, 30ರಿಂದ ಇಳಿಕೆಯ ಕ್ರಮಾಂಕ ಕಂಡು ಬಂತು. 30ರಂದು 598 ಸೋಂಕಿತರು ಹಾಗೂ 13 ಜನ ಸಾವಿಗೀಡಾದರು. ಮೇ 31ರಂದು ಸೋಂಕಿತರ ಸಂಖ್ಯೆ 437ಕ್ಕೆ ಹಾಗೂ ಸಾವಿನ ಸಂಖ್ಯೆ 8ಕ್ಕೆ ಕುಸಿಯಿತು. ಈ ಚಿತ್ರಣ ಅವಳಿ ಜಿಲ್ಲೆಯ ಜನರನ್ನು ಒಂದಷ್ಟುನೆಮ್ಮದಿ ಮೂಡಿಸಿದೆ.

ಸದ್ಯಕ್ಕೆ ಜೂನ್‌ 7ರ ವರೆಗೆ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ. ಮುಂದುವರಿಸುವುದೇ ಸೂಕ್ತ ಎನಿಸುತ್ತಿದೆ. ತಜ್ಞರ ಅಭಿಪ್ರಾಯ ಕೇಳಿಕೊಂಡು ಮುಂದಿನ ಹಂತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ತಿಳಿಸಿದ್ದಾರೆ. 

ಕೂಡ್ಲಿಗಿ: ಕೊರೋನಾಗೆ ಬೈಯ್ಯುವ ಮೌಢ್ಯಾಚರಣೆ

ಲಾಕ್‌ಡೌನ್‌ ವಿಸ್ತರಣೆ ಮಾಡಿದರೆ ಮಾತ್ರ ಸೋಂಕು ಸಂಪೂರ್ಣ ಇಳಿಕೆಯಾಗಲು ಸಾಧ್ಯ. ಜೂನ್‌ 30ರ ವರೆಗೆ ಮುಂದುವರಿಸುವುದು ಒಳ್ಳೆಯದು ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದ್ದಾರೆ. 
ಅವಳಿ ಜಿಲ್ಲೆಯಲ್ಲಿ ಕೊರೋನಾ ಇದೀಗ ನಿಯಂತ್ರಣಕ್ಕೆ ಬರುತ್ತಿದೆ. ಜೂನ್‌ 30ರ ವರೆಗೆ ಲಾಕ್‌ಡೌನ್‌ ವಿಸ್ತರಣೆಯಾದರೆ ಪೂರ್ಣ ಇಳಿಕೆಯ ಸಾಧ್ಯತೆ ಇದ್ದು, ಜನರ ಆರೋಗ್ಯ ಹಿತ ದೃಷ್ಟಿಯಿಂದ ಲಾಕ್‌ಡೌನ್‌ ವಿಸ್ತರಿಸಬೇಕು ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ತಿಳಿಸಿದ್ದಾರೆ.  

ಜೂ. 15ರ ವರೆಗೆ ಲಾಕ್‌ಡೌನ್‌ ಮುಂದುವರಿಸಲಿ. ಅಂದಿನ ಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದು ಸೂಕ್ತ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಸಹಕಾರಬೇಕು ಎಂದು ಬಳ್ಳಾರಿ ವೀವಿ ಸಂಘದ ಮಾಜಿ ಕಾರ್ಯದರ್ಶಿ, ಚೋರನೂರು ಕೊಟ್ರಪ್ಪ ಹೇಳಿದ್ದಾರೆ. 

ಕೋವಿಡ್‌ ನಿಯಂತ್ರಿಸಲು ಲಾಕ್‌ಡೌನ್‌ ಒಳ್ಳೆಯದೇ. ಆದರೆ, ಬಡಜನರು ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಶುರುವಾಗಿದೆ. ಹೀಗಾಗಿ ಜೂನ್‌ 15ರ ವರೆಗೆ ಮಾತ್ರ ಲಾಕ್‌ಡೌನ್‌ ಮುಂದುವರಿಸಲಿ ಎಂದು ಬಳ್ಳಾರಿ ಲೆಕ್ಕ ಪರಿಶೋಧಕರು ಸಿದ್ಧರಾಮೇಶ್ವರಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಸಂಪೂರ್ಣ ಇಳಿಕೆಯಾಗಬೇಕು. ಅದಕ್ಕಾಗಿ ಜೂ.30ರ ವರೆಗೆ ಲಾಕ್‌ಡೌನ್‌ ಮುಂದುವರಿಸುವುದೇ ಸೂಕ್ತ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಬಳ್ಳಾರಿ ಎಲ್‌ಐಸಿ ಪ್ರತಿನಿಧಿ ವಿ. ಶಿವಾಚಾರಿ ಹೇಳಿದ್ದಾರೆ. 
ಲಾಕ್‌ಡೌನ್‌ ಮುಂದುವರಿಸುವುದರಿಂದ ಜನರಿಗೆ ಕಷ್ಟವಾಗುತ್ತದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಲಾಕ್‌ಡೌನ್‌ ಮಾಡುವುದು ಸೂಕ್ತ. ಸರ್ಕಾರ ಗಮನ ಹರಿಸಬೇಕು ಎಂದು ಬಳ್ಳಾರಿ ತಾಲೂಕಿನ ಕೋಳೂರು ಗ್ರಾಮದ ರೈತ ಭೀಮಣ್ಣ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona