ಸೋಲು ದಿಕ್ಕಿಲ್ಲದ ಮಗು ಇದ್ದಂತೆ : ಹೊಣೆ ಯಾರು ಹೊರುವುದಿಲ್ಲ
- ಕೆಲವೇ ವರ್ಷದಲ್ಲಿ ಅಸಾಧಾರಣ, ಅಸಾಮಾನ್ಯವಾದ ಕಠಿಣವಾದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ.
- ಗೆಲುವಿಗೆ ಕಡಿಮೆ ಮತ. ಸೋಲು ದಿಕ್ಕಿಲ್ಲದ ಮಗುವಂತೆ. ಸೋಲಿನ ಹೊಣೆಗಾರಿಕೆ ಯಾರೂ ತೆಗೆದುಕೊಳ್ಳಲ್ಲ
ಚಿಕ್ಕಬಳ್ಳಾಪುರ (ಸೆ.08): ಕೆಲವೇ ವರ್ಷದಲ್ಲಿ ಅಸಾಧಾರಣ, ಅಸಾಮಾನ್ಯವಾದ ಕಠಿಣವಾದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಕೇವಲ ಎರಡು ವರ್ಷದಲ್ಲಿ ನೀರಾವರಿ ಯೋಜನೆ ತಂದು ಅನುಷ್ಠಾನ ಮಾಡಿ, ಕನಸು ನನಸು ಮಾಡಿದ್ದೇವೆ. ಎಚ್‌ಎನ್ ವ್ಯಾಲಿಯಿಂದ ನೀರು ತರುವ ಅವಧಿ, ಅದರ ಹಿಂದಿನ ಪರಿಶ್ರಮ, ಹೋರಾಟ ಸುಲಭವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಪರಿಶಿಷ್ಟಜಾತಿ, ಪಗಂಡ ಜನಾಂಗಕ್ಕೆ ಹಾಗು ಹಿಂದು ವರ್ಗಗಳಿಗೆ ಮಂಜೂರಾದ ಕೊಳವೆ ಬಾವಿಗಳ ಆದೇಶಪತ್ರಗಳನ್ನು ವಿತರಿಸಿ ಸಚಿವರು ಮಾತನಾಡಿದರು.
ಸೋಲು ದಿಕ್ಕಿಲ್ಲದ ಮಗು ಇದ್ದಂತೆ
ಗೆಲುವಿಗೆ ಕಡಿಮೆ ಮತ. ಸೋಲು ದಿಕ್ಕಿಲ್ಲದ ಮಗುವಂತೆ. ಸೋಲಿನ ಹೊಣೆಗಾರಿಕೆ ಯಾರೂ ತೆಗೆದುಕೊಳ್ಳಲ್ಲ. ಗೆದ್ದಾಗ ನಮ್ಮಿಂದ ಎನ್ನುತ್ತಾರೆ. ಇದು ಪ್ರಕೃತಿಯ ನಿಯಮ ಎಂದು ಎಚ್‌ಎನ್ ವ್ಯಾಲಿ ಬಗ್ಗೆ ಎದ್ದಿದ್ದ ಪರ, ವಿರೋಧ ಬಗ್ಗೆ ಮಾರ್ಮಿಕವಾಗಿ ನುಡಿದರು.
ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಭೂಮಿ ಅಗತ್ಯ ಇರುವ ಕೊರಟಗೆರೆಯಲ್ಲಿ ರೈತರು ಗಲಾಟೆ ಮಾಡುತ್ತಿದ್ದಾರೆ. ಭೂಸ್ವಾಧೀನಕ್ಕೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಅಷ್ಟುಪ್ರಮಾಣದಲ್ಲಿ ಹಣ ನೀಡಲು ಸಾಧ್ಯವಾಗುವುದಿಲ್ಲ ಎಂದರು.
ನಂದಿ ಭಾಗದಲ್ಲಿ ಡ್ಯಾಂ: ದೊಡ್ಡಬಳ್ಳಾಪುರದಲ್ಲಿ 4ಟಿಎಂಸಿ ನೀರು ತುಂಬಿಸುವ ಟ್ಯಾಂಕ್ ಮಾಡಬೇಕಿದೆ. ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಸೇರಿ ಮಾಡಬೇಕು ಎಂದಿದೆ. ಅಲ್ಲಿ ಅರ್ಧ ಪ್ರಮಾಣದಲ್ಲಿ ಟ್ಯಾಂಕ್ ನಿರ್ಮಿಸಿ, ಇನ್ನರ್ಧ ಭಾಗ ನಂದಿ, ಕಸಬಾ, ಮಂಚೇನಹಳ್ಳಿಯಲ್ಲೆಲ್ಲಾದರೂ ಮಾಡಿ ಎಂದು ಹೇಳಿದ್ದೇನೆ. ಈ ಕುರಿತಂತೆ ಸಾಧ್ಯತೆಗಳ ಬಗ್ಗೆ ವರದಿ ಒಂದು ತಿಂಗಳಿಂದ ನಡೆಯುತ್ತಿದೆ. ವರದಿ ಬಂದ ಮೇಲೆ, 2 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯದ ನೀರು ಸಂಗ್ರಹ ಡ್ಯಾಮ್ ಆಗಲಿದೆ. ಇದಾದರೆ, ಯಾರೂ ಕೊಳವೆ ಬಾವಿ ಕೊರೆಸುವ ಅವಶ್ಯಕತೆ ಇರುವುದಿಲ್ಲ ಎಂದರು.
ತಾನು ಜನರಿಂದ ಆಯ್ಕೆಗೊಂಡ ಪ್ರತಿನಿಧಿ ಎಂಬುದನ್ನು ಮನ್ಸಿನಲ್ಲಿದ್ದರೆ, ಜನಪರ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಲಿದೆ. ಕ್ಷೇತ್ರದ ಜನರ ಕೊರತೆ ಏನು, ಎಲ್ಲಿ ನಷ್ಟಅನುಭವಿಸುತ್ತಿದ್ದಾರೆ, ಬದುಕನ್ನು ಕಟ್ಟಿಕೊಡಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅರಿತು, ಕಾರ್ಯಗತಗೊಳಿಸಬೇಕು. ಎಚ್‌ಎನ್ ವ್ಯಾಲಿ ತರುವಾಗ ಕೆ.ವಿ.ನಾಗರಾಜ್ ದಳದಲ್ಲಿದ್ದರು. ಆವರೂ ವಿರೋಧ ಮಾಡಿದರು, ಹೋರಾಟ ಮಾಡಿದರು, ಪೈಪ್‌ಗಳನ್ನು ಪ್ರದರ್ಶನ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್, ತಾಪಂ ಮಾಜಿ ಅಧ್ಯಕ್ಷ ರಾಮಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಕೃಷ್ಣಾರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ಎತ್ತಿನಹೊಳೆ ಯೋಜನಾ ಗಾತ್ರ 3 ಪಟ್ಟು ಆಗಬಹುದು
ಎತ್ತಿನಹೊಳೆ ಕುಡಿಯುವ ನೀರಿನ ದೊಡ್ಡ ಯೋಜನೆ, 16ಸಾವಿರ ಕೋಟಿ ಎಂದು ಮೊದಲು ಪ್ರಾರಂಭ ಮಾಡಲಾಗಿತ್ತು. ಆದರೆ ಈಗ ಯೋಜನೆ ಗಾತ್ರ ಡಬಲ್ ಆಗುತ್ತೋ ತ್ರಿಬಲ್ ಆಗುತ್ತೊ ಗೊತ್ತಿಲ್ಲ. ಸವಾಲುಗಳು ಎದುರಾಗಿ ಯೋಜನೆಗೆ ತಾತ್ಕಾಲಿಕವಾಗಿ ತಡೆಯಾಗಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ತಜ್ಞರ ಜೊತೆ ಚರ್ಚೆ ನಡೆಸಿ ಎಚ್‌ಎನ್ ವ್ಯಾಲಿ ರೂಪಿಸಲಾಗಿದೆ. ಕುಡಿವ ನೀರಿಗೂ ಬಳಕೆ ಮಾಡುವ ನೀರಿಗೂ ವ್ಯತ್ಯಾಸವಿದೆ. ಸುಮಾರು 15 ಕೆರೆ ನೀರು ತುಂಬಿದೆ. 44 ಕೆರೆ ತುಂಬಿಸುವ ಗುರಿ ಹೊಂದಿದ್ದೇವೆಂದರು.