ಬಾಗಲಕೋಟೆ(ಏ.12): ಜಿಲ್ಲೆಗೆ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರ ಸಕಲ ಸೌಲಭ್ಯಗಳನ್ನು ನೀಡುತ್ತಿದ್ದು ವೈದ್ಯಕೀಯ ಪರಿಕರಗಳು ಹಾಗೂ ವೈದ್ಯರ ರಕ್ಷಣಾ ಸಾಮಗ್ರಿಗಳಿಗೆ ಕೊರತೆ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 12668 ಥ್ರೀಲಿಯರ್‌ ಮಾಸ್ಕ್‌ಗಳಿದ್ದು ಹೆಚ್ಚುವರಿಯಾಗಿ 70 ಸಾವಿರ ತ್ರೀಬಲ್‌ ಲಿಯರ್‌ ಮಾಸ್ಕ್‌ಗಳು ರಾತ್ರಿಯೇ ಬರಲಿವೆ. 10742 ಎನ್‌95 ಮಾಸ್ಕ್‌ಗಳು ಸದ್ಯ ಜಿಲ್ಲೆಯಲ್ಲಿ ಲಭ್ಯ ಇವೆ. 3821 ಪಿಪಿಇ ರಕ್ಷಾ ಕವಚಗಳು, ರೋಗಿಯ ಮಾದರಿ ಸಂಗ್ರಹಣೆ ಮಾಡುವ 596 ಸ್ವಾಬ್‌ಗಳು, 15 ವೆಂಟಿಲೆಟರ್‌, ಕೋವಿಡ್‌ ಶಂಕಿತರನ್ನು ಸಾಗಿಸಲು 11 ಪ್ರತ್ಯೇಕ ಆಂಬ್ಯುಲೆನ್ಸ್‌ಗಳು ಲಭ್ಯ ಇವೆ ಎಂದು ಹೇಳಿದ್ದಾರೆ.

ಕೊರೋನಾ ಕರಿ ಛಾಯೆ: ಕೂಡಲಸಂಗಮ ರಥೋತ್ಸವ ರದ್ದು

ಜಿಲ್ಲೆಯಲ್ಲಿ ಒಟ್ಟು 56 ಆಂಬ್ಯುಲೆನ್ಸ್‌ಗಳಿದ್ದು 14 ಜ್ವರ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3 ಕೋವಿಡ್‌ ಆಸ್ಪತ್ರೆಗಳನ್ನಾಗಿ ಸೃಜಿಸಲಾಗಿದೆ. 104 ಪ್ರತ್ಯೇಕ ಕೊಠಡಿಗಳನ್ನು (ಐಸೊಲೇಶನ್‌) ರೂಪಿಸಲಾಗಿದೆ. ಜಿಲ್ಲಾಡಳಿತಕ್ಕೆ ನಿರಂತರವಾಗಿ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸಿ ಸಹಕರಿಸಿ ಎಂದು ಮನವಿ ಮಾಡಿರುವ ಗೋವಿಂದ ಕಾರಜೋಳ ಮನೆಯಲ್ಲಿಯೇ ಇರುವ ಮೂಲಕ ಕೊರೋನಾ ವಿರುದ್ಧ ಹೋರಾಡೊಣ, ವೈದ್ಯರು ನರ್ಸಗಳು, ಪೌರ ಕಾರ್ಮಿಕರು, ಕಂದಾಯ, ಪೊಲೀಸ್‌ ಇಲಾಖೆ ಅ​ಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುವ ಕೆಲಸ ನಮ್ಮಿಂದ ಆಗಲಿ ಎಂದು ಹೇಳಿದ್ದಾರೆ.