ಗಂಗಾವತಿ(ಫೆ.24): ಮಹತ್ವಾಕಾಂಕ್ಷಿ ಯೋಜನೆಯಾದ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ನವಲಿ ಬಳಿ ಸಮಾಂತರ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯದ ಸರ್ಕಾರಗಳು ಅಂದಾಜು 6 ಸಾವಿರ ಕೋಟಿ ಅನುದಾನ ನೀಡುತ್ತವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ನಗರದ ವಾಣಿಜ್ಯೋದ್ಯಮಿ ಪಂಪಾಪತಿ ಸಿಂಗನಾಳ ಅವರ ನಿವಾಸದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹವಾಗುತ್ತಿಲ್ಲ. ಈ ಕಾರಣಕ್ಕೆ ಬಿಜೆಪಿ ಆಡಳಿತ ಪರ್ಯಾಯವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಸಿದ್ಧವಿದೆ. ಈ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸರ್ಕಾರಗಳು ಒಪ್ಪಿಗೆ ನೀಡಿ ಅಂದಾಜು 6 ಸಾವಿರ ಕೋಟಿ ಅನುದಾನ ನೀಡಬೇಕಾಗಿದೆ. ಅಲ್ಲದೆ ಈ ಭಾಗಕ್ಕೆ ಶೇ. 35ರಷ್ಟು ನೀರನ್ನು ಕೊಡಬೇಕಾಗುತ್ತದೆ ಎಂದು ತಿಳಿಸಿದರು. 

900 ಶಿಕ್ಷಕರ ನೇಮಕ: 

ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ 1500 ಶಿಕ್ಷಕರ ನೇಮಕ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದು ಕಾರಜೋಳ ತಿಳಿಸಿದರು. ಈಗಾಗಲೇ 1500 ಶಿಕ್ಷಕರಲ್ಲಿ 600 ಶಿಕ್ಷಕರ ನೇಮಕವಾಗಿದ್ದು, ಇನ್ನು 900 ಶಿಕ್ಷಕರ ನೇಮಕದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಭ್ಯರ್ಥಿಗಳ ಸಿಂಧುತ್ವ ಪಡೆದು ಈ ತಿಂಗಳಲ್ಲಿ ನೇಮಕ ಮಾಡುವಂತೆ ಆದೇಶ ನೀಡಲಾಗಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದಲ್ಲಿ ವಸತಿ ನಿಲಯಗಳಿಗೆ ಕಟ್ಟಡ ಸೇರಿದಂತೆ ಮೂಲಸೌಕರ್ಯ ಇಲ್ಲದಿರುವ ಪ್ರಶ್ನೆಗೆ ಈಗಾಗಲೇ ರಾಜ್ಯದಲ್ಲಿ 824 ಮೊರಾರ್ಜಿ ವಸತಿ ಶಾಲೆಗಳಲ್ಲಿ 435  ಸ್ವಂತ ಕಟ್ಟಡಗಳು ಹೊಂದಿವೆ. 34 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದರು. ಹಂತ ಹಂತವಾಗಿ ಎಲ್ಲ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಶೇ. 90 ರಷ್ಟು ಲ್ಯಾಪ್‌ಟಾಪ್ ನೀಡಿದೆ ಎಂದು ತಿಳಿಸಿದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಎಲ್ಲ ಕ್ಷೇತ್ರಗಳಿಗೆ ಅನುದಾನ ನೀಡಿದೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಹುರುಳಿಲ್ಲ ಎಂದರು. 

ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ಮುಖಂಡ ದೇವಪ್ಪ ಕಾಮದೊಡ್ಡಿ, ಉದ್ಯಮಿ ಪಂಪಾಪತಿ ಸಿಂಗನಾಳ, ತಿಪ್ಪೇರುದ್ರಸ್ವಾಮಿ, ಹೊಸಕೇರಿ ಗಿರೇಗೌಡ, ಜಿಪಂ ಮಾಜಿ ಸದಸ್ಯ ಪರಶುರಾಮ, ನಗರಸಭಾ ಸದಸ್ಯರಾದ ವಾಸುದೇವ ನವಲಿ, ಉಮೇಶ ಸಿಂಗನಾಳ, ರಮೇಶ ಚೌಡ್ಕಿ, ಮಾರೇಶ ಮುಷ್ಟೂರು ಇದ್ದರು.

ಪಾಕಿಸ್ತಾನ ಪರ ಘೋಷಣೆ; ಪೂರ್ವಯೋಜಿತ ಕೃತ್ಯ 

ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಮಾಡಿರುವುದು ಪೂರ್ವಯೋಜಿತವಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಂಘಟನೆಗಳು ಮತ್ತು ಕೆಲವು ಪಕ್ಷಗಳ ಕುಮ್ಮುಕ್ಕಿನಿಂದ ಆ ವಿದ್ಯಾರ್ಥಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಮಾಡಿ ದೇಶದ್ರೋಹಿ ಕೆಲಸ ಮಾಡಿಸಿದ್ದಾರೆ. ಪಾಕಿಸ್ತಾನ ವೈರಿ ರಾಷ್ಟ್ರ. ಪಾಕಿಸ್ತಾನ ಪರ ಘೋಷಣೆ ಮಾಡಿರುವುದನ್ನು ಯಾರೂ ಸಹಿಸುವುದಿಲ್ಲ. ಅಂತಹ ಘೋಷಣೆ ಕೂಗುವುದು ನೋವಿನ ಸಂಗತಿಯಾಗಿದೆ. ನಮ್ಮ ದೇಶದ ಅನ್ನ, ನೆಲ, ಜಲ ಬಳಸಿಕೊಂಡು ದೇಶದ್ರೋಹಿ ಕೆಲಸ ಮಾಡುತ್ತಿರುವುದು ದೊಡ್ಡ ದುರಂತ ಎಂದು ವಿಷಾಧಿಸಿದರು. ವಿದ್ಯಾರ್ಥಿನಿ ತಂದೆ-ತಾಯಿಯೂ ಇಂತಹ ದೇಶದ್ರೋಹಿ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ ಶಿಕ್ಷೆ ನೀಡುವಂತೆ ಕೋರಿದ್ದಾರೆ. ಪ್ರತಿಯೊಬ್ಬ ಪ್ರಜೆಗೂ ದೇಶಾಭಿಮಾನ ಇರಬೇಕು ಎಂದು ಅವರು ಹೇಳಿದರು. ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಇದ್ದರು.