ಸಿಗಂದೂರು ದೇಗುಲ ವಿವಾದ : ಎಸ್‌ಪಿ, ಡಿಸಿ ಭೇಟಿ
ಸಿಗಂದೂರು ದೇಗುಲ ವಿವಾದ ಹೆಚ್ಚಾಗುತ್ತಲೇ ಇದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ.
ಶಿವಮೊಗ್ಗ (ಅ.18): ನಾಡಿನಾದ್ಯಂತ ಬಹುದೊಡ್ಡ ಭಕ್ತಗಣವನ್ನು ಹೊಂದಿರುವ, ಸದ್ಯ ತೀವ್ರ ಚರ್ಚೆಗೆ ಒಳಗಾಗಿರುವ ಸಾಗರ ತಾಲೂಕಿನ ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ವಿವಾದ ಪರಿಹಾರಕ್ಕೆ ಇದೀಗ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿದೆ.
"
ನಾಲ್ಕೈದು ತಿಂಗಳಿಂದ ದೇವಸ್ಥಾನದ ಅರ್ಚಕರು ಮತ್ತು ಆಡಳಿತ ವ್ಯವಸ್ಥಾಪಕರ ನಡುವೆ ಉಂಟಾದ ಅಸಮಾಧಾನದ ಕಿಡಿ ಹಲ್ಲೆ ವರೆಗೂ ಮುಂದುವರಿದಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತು ಎಸ್ಪಿ ಶಾಂತರಾಜು ದೇಗುಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಗಂದೂರು ಚೌಡೇಶ್ವರಿ ಸನ್ನಿಧಿ ಭಾರೀ ಉದ್ವಿಗ್ನ ..
ಖಾಸಗಿ ಟ್ರಸ್ಟ್ ಆಡಳಿತದಲ್ಲಿರುವ ಸಿಗಂದೂರು ದೇವಸ್ಥಾನದ ಅರ್ಚಕ ಶೇಷಗಿರಿ ಭಟ್ಟರ ಪುತ್ರ ಮೈಮೇಲೆ ದೇವಿಯನ್ನು ಆಹ್ವಾನಿಸಿಕೊಂಡಂತೆ ವರ್ತಿಸುತ್ತಾ ಶುಕ್ರವಾರ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ದೇವಸ್ಥಾನದ ವಸ್ತುಗಳಿಗೂ ಹಾನಿಯಾಗಿದೆ. ಇದರ ಬೆನ್ನಲ್ಲೇ ಶನಿವಾರ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
"
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರ ಜೊತೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ.ದೇವಸ್ಥಾನದ ಆಡಳಿತ ವ್ಯವಸ್ಥೆ, ಆರ್ಥಿಕ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸಾಗರ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವರು ವರದಿ ನೀಡಿದ ಬಳಿಕ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ನೀಡುವ ಸೂಚನೆ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.