ಸಿಗಂದೂರು ಚೌಡೇಶ್ವರಿ ಸನ್ನಿಧಿ ಭಾರೀ ಉದ್ವಿಗ್ನ

ಸಿಗಂಧೂರು ಚೌಡೇಶ್ವರಿ ದೇಗುಲದಲ್ಲಿ ಆಡಳಿತ ಮಂಡಳಿ - ಹಾಗೂ ಅರ್ಚಕರ ನಡುವೆ ಭಾರೀ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು ಇದೀಗ ಅದು ದೊಡ್ಡದಾಗಿದೆ. 

Clashes in Siganduru Chowdeshwari Temple snr

 ಸಾಗರ (ಅ.17):  ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟ ಶುಕ್ರವಾರ ವಿಕೋಪಕ್ಕೆ ತಿರುಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಪ್ರಧಾನ ಅರ್ಚಕ ಎಸ್‌.ಪಿ.ಶೇಷಗಿರಿ ಭಟ್‌ ಅವರ ಸಹೋದರ ಸುಬ್ರಾಯ ಭಟ್‌ ದೇವಪ್ಪ ಗೌಡ ಎಂಬ ಭಕ್ತರ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

"

ಕಳೆದ ಕೆಲವು ತಿಂಗಳುಗಳಿಂದ ದೇವಸ್ಥಾನದಲ್ಲಿ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕ ಎಸ್‌.ಪಿ.ಶೇಷಗಿರಿ ಭಟ್‌ ನಡುವೆ ದೇವಸ್ಥಾನಕ್ಕೆ ಬರುವ ಆದಾಯ ಹಂಚಿಕೊಳ್ಳುವ ವಿಷಯದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈಚೆಗೆ ಶೇಷಗಿರಿ ಭಟ್‌ ತಮ್ಮ ಕೌಂಟರ್‌ಗೆ ಅಪರಿಚಿತರು ನುಗ್ಗಿದ್ದಾರೆ ಎಂದು ಕಾರ್ಗಲ್‌ ಪೊಲೀಸ್‌ ಠಾಣೆಗೆ ಲಿಖಿತ ದೂರು ಸಹ ನೀಡಿದ್ದರು.

ಸಿಗಂಧೂರು ಚೌಡೇಶ್ವರಿ ದೇಗುಲದಲ್ಲಿ ಇದೇನಾಯ್ತು..? ಮುನಿದಳಾ ದೇವತೆ..?

ಶುಕ್ರವಾರ ಶೇಷಗಿರಿ ಭಟ್‌ ನವರಾತ್ರಿ ಅಂಗವಾಗಿ ಚಂಡಿಕಾ ಹೋಮ ಮಾಡಲು ತಮಗೆ ಧರ್ಮದರ್ಶಿ ರಾಮಪ್ಪ ಅವರು ಅವಕಾಶ ನೀಡುತ್ತಿಲ್ಲ. ಯಾಗಶಾಲೆಗೆ ಬೀಗ ಹಾಕಿದ್ದಾರೆ ಎಂದು ಆರೋಪಿಸಿ ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ದೇವಿಯ ಸನ್ನಿಧಿಯಲ್ಲಿ ಕುಟುಂಬ ಸಮೇತರಾಗಿ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮೌನವ್ರತಕ್ಕೆ ಕುಳಿತಿದ್ದರು.

ಮೌನವ್ರತ ಮುಗಿಯುತ್ತಿದ್ದಂತೆಯ ಪ್ರಧಾನ ಅರ್ಚಕರ ಸಹೋದರ ಸುಬ್ರಾಯ್‌ ಭಟ್‌ ಮೈಮೇಲೆ ದೇವರು ಅವಾಹನೆಯಾದಂತೆ ಏಕಾಏಕಿ ದೇವಸ್ಥಾನದ ಕೌಂಟರ್‌ಗೆ ನುಗ್ಗಿ ಗ್ಲಾಸ್‌ ಪುಡಿ ಮಾಡಿದ್ದಾರೆ. ಜೊತೆಗೆ ದೇವಸ್ಥಾನದ ಭಕ್ತ ದೇವಪ್ಪಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಡೀ ದೇವಸ್ಥಾನದ ಆವರಣ ಉದ್ವಿಗ್ನಸ್ಥಿತಿಗೆ ತಲುಪಿದಾಗ ಪೊಲೀಸರು ಮಧ್ಯಪ್ರವೇಶ ಮಾಡಿ ಗಲಾಟೆಯನ್ನು ತಹಬಂದಿಗೆ ತಂದಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ವಿನಾಯಕ್‌ ಎನ್‌. ಶೆಟಿಗೇರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರ್ಕಾರ ಮಧ್ಯ ಪ್ರವೇಶಿಸಲಿ :  ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶೇಷಗಿರಿ ಭಟ್‌, ನಾನು ಕಳೆದ ಎರಡೂವರೆ ದಶಕದಿಂದ ಪ್ರಧಾನ ಅರ್ಚಕನಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ದೇವಸ್ಥಾನದ ಎಲ್ಲ ವಿಷಯಗಳಿಂದಲೂ ನನ್ನನ್ನು ದೂರ ಇರಿಸಲಾಗುತ್ತಿದೆ. ಶುಕ್ರವಾರ ನವರಾತ್ರಿ ಅಂಗವಾಗಿ ಚಂಡಿಕಾ ಹೋಮ ಮಾಡಲು ಯಾಗ ಶಾಲೆಗೆ ಹೋದಾಗ ರಾಮಪ್ಪ ಅವರು ಯಾಗಶಾಲೆಗೆ ಬೀಗ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಿ ಎದುರು ಕುಟುಂಬ ಸಹಿತವಾಗಿ ಮೌನವೃತ ಕುಳಿತಿದ್ದು, ತಕ್ಷಣ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

"

ಯಾಗಶಾಲೆ ಬೀಗ ಕೇಳಿಲ್ಲ : ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿರುವ ಧರ್ಮದರ್ಶಿ ರಾಮಪ್ಪ, ಶೇಷಗಿರಿ ಭಟ್ಟರು ಯಾಗಶಾಲೆ ಬೀಗ ಕೇಳಿಲ್ಲ. ಸರ್ಕಾರದ ಕೋವಿಡ್‌ ಮಾರ್ಗಸೂಚಿ ಇರುವ ಹಿನ್ನೆಲೆಯಲ್ಲಿ ಹೆಚ್ಚು ಜನರನ್ನು ಸೇರಿಸುವಂತೆ ಇಲ್ಲ. ನಾವು ಯಾವುದೇ ಪೂಜೆಗೆ ಅಡ್ಡಿಪಡಿಸುತ್ತಿಲ್ಲ. ಗರ್ಭಗುಡಿಯ ಬೀಗ ಅರ್ಚಕರ ಬಳಿಯೆ ಇದೆ. ನವರಾತ್ರಿಯ ಕೊನೆದಿನ ಚಂಡಿಕಾ ಯಾಗ ಮಾಡುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.

ಒಟ್ಟಾರೆ ಸಿಗಂದೂರು ಕ್ಷೇತ್ರದ ವರಮಾನ ಹಂಚಿಕೆ ವಿವಾದವೀಗ ಹೊಯ್‌ಕೈ ಹಂತಕ್ಕೆ ತಲುಪಿ ಪರಸ್ಪರ ದೂರು ದಾಖಲಾಗುವ ಸಾಧ್ಯತೆ ನಿಚ್ಚಳವಾಗಿದೆ.

Latest Videos
Follow Us:
Download App:
  • android
  • ios