ಅಂಕೋಲಾ ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ಡಿಸಿ ಅಧಿಸೂಚನೆ
7.88 ಕೋಟಿ ಬಿಡುಗಡೆ| ಅಲಗೇರಿ, ಬೇಲೆಕೇರಿ, ಭಾವಿಕೇರಿಯಲ್ಲಿ 93.29 ಎಕರೆ ಭೂಸ್ವಾಧೀನ| ಅಂಕೋಲಾ ವಿಮಾನ ನಿಲ್ದಾಣಕ್ಕೆ ಸಮ್ಮತಿ ಸೂಚಿಸಿದ ರಾಜ್ಯ ಸರ್ಕಾರ| ವಿಮಾನ ನಿಲ್ದಾಣ ನಿರ್ಮಿಸಲು ಅಗತ್ಯ ಇರುವ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಆರಂಭ|
ಕಾರವಾರ(ಸೆ.02): ನೌಕಾನೆಲೆ ಜತೆ ಅಂಕೋಲಾದಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣ ಸ್ಥಾಪನೆಗೆ ಜಿಲ್ಲಾಧಿಕಾರಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಒಟ್ಟು 93.29 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಮೊದಲ ಕಂತಾಗಿ ಸರ್ಕಾರ 7.88 ಕೋಟಿ ಬಿಡುಗಡೆ ಮಾಡಿದೆ.
ಅಂಕೋಲಾದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಾಗರಿಕ ವಿಮಾನ ನಿಲ್ದಾಣಕ್ಕೆ ಅಗತ್ಯ ಇರುವ ಬೇಲೆಕೇರಿ ಹೋಬಳಿಯ ಅಲಗೇರಿ, ಬೇಲೆಕೇರಿ ಹಾಗೂ ಭಾವಿಕೇರಿ ಗ್ರಾಮದ ಒಟ್ಟೂ 93 ಎಕರೆ 29 ಗುಂಟೆ ಹಾಗೂ 05 ಆಣೆ ಕ್ಷೇತ್ರ ಸ್ವಾಧೀನಪಡಿಸಿಕೊಳ್ಳಲಾಗುವುದು.
ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು
ಅಲಗೇರಿ ಗ್ರಾಮದ 69-21-02 ಎಕರೆ, ಬೇಲೆಕೇರಿ ಗ್ರಾಮದ 20-35-15 ಎಕರೆ, ಭಾವಿಕೇರಿ ಗ್ರಾಮದ 03-12-04 ಎಕರೆ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನವಾಗಲಿದೆ. ಭೂಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಭರಿಸಲು ಅಗತ್ಯ ಇರುವ ಅನುದಾನದ ಮೊದಲನೆಯ ಕಂತಾಗಿ 7.88 ಕೋಟಿ ಹಣವನ್ನು ಸರ್ಕಾರವು ಕೆಎಸ್‌ಐಐಡಿಸಿ ನಿಗಮದ ಮುಖ್ಯ ಹಣಕಾಸು ಹಾಗೂ ಲೆಕ್ಕಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣ ನಿರ್ಮಿಸಲು ಅಗತ್ಯ ಇರುವ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು 2013ರ ಮೂಲ ಭೂಸ್ವಾಧೀನ ಕಾಯ್ದೆಯ ಅಧ್ಯಾಯ-2 ಅಡಿಯಲ್ಲಿ ಸಾಮಾಜಿಕ ಪರಿಣಾಮಗಳ ಅಧ್ಯಯನ ಮಾಡುವುದಕ್ಕೆ ವಿನಾಯಿತಿ ನೀಡಲಾಗಿದೆ.
ಭೂಸ್ವಾಧೀನ ಪಡಿಸಿಕೊಳ್ಳಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯಿದೆ ಅಡಿಯಲ್ಲಿ ಪ್ರಾಥಮಿಕ ಕರಡು ಅಧಿಸೂಚನೆ ಸಮರ್ಪಕವಾಗಿದೆ ಎಂದು ಮನಗಂಡು ಈ ಆದೇಶ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಕುಮಟಾ ಉಪ ವಿಭಾಗಾಧಿಕಾರಿ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸ್ಥಳೀಯರಿಂದ ವಿರೋಧದ ಕೂಗು
ರಾಜ್ಯ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣಕ್ಕೆ ಸಮ್ಮತಿ ಸೂಚಿಸಿದೆ. ಈ ನಡುವೆ ವಿಮಾನ ನಿಲ್ದಾಣಕ್ಕೆ ಭೂಮಿ ಕೊಡುವುದಿಲ್ಲ ಎಂಬ ಕೂಗು ಸ್ಥಳೀಯರಿಂದ ಎದ್ದಿದೆ. ನಿರಾಶ್ರಿತರಾಗಲಿರುವವರು ಹಾಗೂ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ನಡುವೆ ಒಂದು ಹಂತದ ಮಾತುಕತೆಯೂ ನಡೆದಿದೆ. ಆದರೆ ಸದ್ಯಕ್ಕೆ ಫಲಪ್ರದವಾಗಿಲ್ಲ. ಶಿವರಾಮ ಗಾಂವಕರ ನೇತೃತ್ವದಲ್ಲಿ ಅಲಗೇರಿ ಗ್ರಾಮಸ್ಥರು ಪ್ರತಿಭಟನಾ ಸಭೆಯನ್ನೂ ನಡೆಸಿದ್ದಾರೆ.