ವರದಿ : ವಸಂತಕುಮಾರ ಕತಗಾಲ

 ಕಾರವಾರ (ಸೆ.02):  ಕೋವಿಡ್‌ -19 ಸಾಕಷ್ಟುಬದಲಾವಣೆಗಳಿಗೆ ಕಾರಣವಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ವಿದ್ಯಾರ್ಥಿಗಳು ಈಗ ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಒಂದು ಮಹತ್ವದ ಬದಲಾವಣೆಯಾಗಿದೆ.

ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳು ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಸುಮಾರು 700ರಷ್ಟುವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು, ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ. ಇದೊಂದು ಅಚ್ಚರಿಯ ಬೆಳವಣಿಗೆಯಾಗಿದೆ.

ಕೊರೋನಾ ಮಧ್ಯೆ ಫೈನಲ್‌ ಇಯರ್‌ ಬಿಇ ಪರೀಕ್ಷೆ ಆರಂಭ..

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಖಾಸಗಿ ಶಾಲೆಗಳತ್ತ ವಾಲಿದ್ದರು. ಖಾಸಗಿ ಸ್ಕೂಲ್‌ಗಳು ವಿದ್ಯಾರ್ಥಿಗಳನ್ನು ಕರೆತರಲು ಹಳ್ಳಿಹಳ್ಳಿಗಳಿಗೆ ವಾಹನಗಳನ್ನು ಕಳುಹಿಸುತ್ತಿತ್ತು.

ಕೋವಿಡ್‌ -19 ಪ್ರಭಾವದಿಂದ ಖಾಸಗಿ ಶಾಲೆಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗೆ ಸರ್ಕಾರಿ ಶಾಲೆಗಳಿಗೆ ತೆರಳಲು ಮನಸ್ಸು ಮಾಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಪಾಲಕರ ಆರ್ಥಿಕ ಮಟ್ಟಕುಸಿದಿದೆ. ಖಾಸಗಿ ಶಾಲೆಗಳ ಫೀಸ್‌ಕಟ್ಟಲು ಸಮಸ್ಯೆ ಉಂಟಾಗಿದೆ. ಖಾಸಗಿ ಶಾಲೆಗಳು ನಗರ ಪ್ರದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿವೆ. ಕೊರೋನಾ ಇರುವುದರಿಂದ ದೂರದ ಶಾಲೆಗಳಿಗೆ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಗಳಾದರೆ ತಮ್ಮ ತಮ್ಮ ಊರಿನಲ್ಲೇ ಇರುವುದು ಪ್ಲಸ್‌ ಪಾಯಿಂಟ್‌ ಆಗಿದೆ.

ಕೊರೋನಾ ಮಧ್ಯೆ ಫೈನಲ್‌ ಇಯರ್‌ ಬಿಇ ಪರೀಕ್ಷೆ ಆರಂಭ...

ನೆಟ್‌ವರ್ಕ್ ಸಮಸ್ಯೆ:

ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿದೆ. ಆದರೆ, ಉತ್ತರ ಕನ್ನಡ ಗುಡ್ಡಗಾಡು, ಗ್ರಾಮೀಣ ಪ್ರದೇಶಗಳಿಂದ ಆವೃತವಾಗಿದೆ. ಮೊಬೈಲ್‌ ನೆಟ್‌ವರ್ಕ್ ಗ್ರಾಮೀಣ ಪ್ರದೇಶವನ್ನು ತಲುಪುತ್ತಿಲ್ಲ. ಕೆಲವು ವಿದ್ಯಾರ್ಥಿಗಳು ನೆಟ್‌ವರ್ಕ್ ಹುಡುಕುತ್ತ ಗುಡ್ಡಬೆಟ್ಟಗಳಲ್ಲಿ ಅಲೆದಾಡುವಂತಾಗಿದೆ. ಕೆಲವು ಪಾಲಕರಿಗೆ ಮಕ್ಕಳಿಗೆ ಟ್ಯಾಬ್‌, ಮೊಬೈಲ್‌ಗಳನ್ನು ಕೊಡಿಸುವುದೂ ಕಷ್ಟದ ಮಾತಾಗಿದೆ. ಆದರೆ, ಸರ್ಕಾರಿ ಶಾಲೆಗಳು ವಿದ್ಯಾಗಮ ಎಂಬ ವಿನೂತನ ಯೋಜನೆ ಆರಂಭಿಸಿದೆ. ಶಿಕ್ಷಕರು ವಿದ್ಯಾರ್ಥಿಗಳಿದ್ದಲ್ಲೇ ಬಂದು ಪಾಠ ಹೇಳುತ್ತಿದ್ದಾರೆ. ನೆಟ್‌ವರ್ಕ್ ಬೇಕಿಲ್ಲ. ಮೊಬೈಲ್‌, ಟ್ಯಾಬ್‌ ಬೇಡವೇ ಬೇಡ. ಇದಕ್ಕೆ ಹಣವೂ ಖರ್ಚಾಗವುದು.

"

ಸರ್ಕಾರಿ ಶಾಲೆಗಳಿಗೆ ಲಾಭ:
ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದ್ದವು. ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿ ಕಡಿಮೆಯಾಗುತ್ತಿತ್ತು. ಈ ಬಾರಿಯ ವಿದ್ಯಮಾನ ಶಿಕ್ಷಣ ಇಲಾಖೆಯಲ್ಲಿ ಭರವಸೆ ಮೂಡಿಸಿದೆ. ಇದರಿಂದ ಮಕ್ಕಳ ಕೊರತೆಯಾಗಿ ಹೆಚ್ಚುವರಿ ಶಿಕ್ಷಕರಾಗುವ ಆತಂಕವೂ ತಪ್ಪಿದೆ. ಮಕ್ಕಳೇ ಇಲ್ಲದೆ ಶಾಲೆಯನ್ನು ಸಮೀಪದ ಶಾಲೆಗೆ ವಿಲೀನಗೊಳಿಸುವ ಸಾಧ್ಯತೆಯೂ ಕಡಿಮೆಯಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗಿ ಶಾಲೆಗೆ ಪೈಪೋಟಿ ನೀಡಲು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರಿಗೆ ಸುಸಂದರ್ಭ ಬಂದೊದಗಿದೆ.
 
ಈ ಬಾರಿ ಕೊರೋನಾ ಕಾಯಿಲೆ ಹಾಗೂ ಇತರ ಕಾರಣಗಳಿಂದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 500ರಷ್ಟುವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಬಂದಿದ್ದಾರೆ.

ಹರೀಶ ಗಾಂವಕರ್‌ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ