Asianet Suvarna News Asianet Suvarna News

ಸಾಹಿತ್ಯ ಸಮ್ಮೇಳನ: ಕಚ್ಚಾಡುವರನ್ನು ಕೂಡಿಸಿ ‘ಕನ್ನಡ ಡಿಂಡಿಮ’ ಬಾರಿಸುತ್ತಿರುವೆ

ನಮ್ಮನ್ನು ಕರೆದಿಲ್ಲ, ನಿಮ್ಮನ್ನು ಕರೆದಿಲ್ಲವೆಂಬ ಸಾಹಿತಿಗಳು, ಕನ್ನಡ ಹೋರಾಟಗಾರರ ಸಿಟ್ಟಿಗೆ ಮುಲಾಮು ಅರೆಯುವ ಕೆಲಸ ಮಾಡುತ್ತಿರುವ ಡಿಸಿ ಶರತ್‌| ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ|

DC B Sharath Talks Over Kalaburagi Kannada Sahitya Sammelana
Author
Bengaluru, First Published Jan 24, 2020, 11:48 AM IST
  • Facebook
  • Twitter
  • Whatsapp

ಶೇಷಮೂರ್ತಿ ಅವಧಾನಿ

ಕಲಬುರಗಿ(ಜ.24): ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು 10 ದಿನ ಮಾತ್ರ ಬಾಕಿ. ಇಲ್ಲಿನ ಜಿಲ್ಲಾಧಿಕಾರಿ ಬಿ. ಶರತ್‌ ಸಾಹಿತ್ಯ ಸಮ್ಮೇಳನದ ಸಂಚಾಲಕರು ಹಾಗೂ ಕೋಶಾಧ್ಯಕ್ಷರು. ತಮ್ಮ ನಿತ್ಯದ ಕಚೇರಿ ಕೆಲಸ ಕಾರ್ಯಗಳ ಜೊತೆಗೆ ನಿತ್ಯವೂ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸುತ್ತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಮೇಲುಸ್ತುವಾರಿ ವಹಿಸುತ್ತಿದ್ದಾರೆ. 

ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿ ಮನವಿ

ಸಮ್ಮೇಳನಕ್ಕೆ ತಮ್ಮ ತಿಂಗಳ ಸಂಬಳ ದೇಣಿಗೆ ನೀಡಿದ್ದಾರೆ. ಸಮ್ಮೇಳನಕ್ಕೆ ಜನರ ಸಹಭಾಗಿತ್ವದ ರೂಪದಲ್ಲಿ ಸಂಪನ್ಮೂಲ ಕ್ರೂಢೀಕರಣ ಇದರಿಂದಾಗಿ ಹೊಸ ತಿರುವು ಪಡೆದುಕೊಂಡಿದೆ. ನಮ್ಮನ್ನು ಕರೆದಿಲ್ಲ, ನಿಮ್ಮನ್ನು ಕರೆದಿಲ್ಲವೆಂಬ ಸಾಹಿತಿಗಳು, ಕನ್ನಡ ಹೋರಾಟಗಾರರ ಸಿಟ್ಟು- ಸೆಡವಿಗೂ ಮುಲಾಮು ಅರೆಯುವ ಕೆಲಸ ಮಾಡುತ್ತಿರುವ ಡಿಸಿ ಶರತ್‌ ತಮ್ಮ ಎಡೆಬಿಡದ ಕೆಲಸ ಕಾರ್ಯಗಳ ನಡುವೆಯೂ ’ಕನ್ನಡಪ್ರಭ’ ಹಾಗೂ 'ಸುವರ್ಣ ನ್ಯೂಸ್' ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಕಲಬುರಗಿ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶ ಕಾಣಲಿದೆ ಎಂದೂ ಆಶಯ ಹೊರಹಾಕಿದ್ದಾರೆ.

ಬರೋಬ್ಬರಿ 32 ವರ್ಷಗಳ ನಂತರ ಕಲಬುರಗಿಗೆ ನುಡಿಹಬ್ಬದ ಆತಿಥ್ಯ ದೊರಕಿರುವಾಗ ನೀವು ಜಿಲ್ಲಾಧಿಕಾರಿಯಾಗಿದ್ದೀರಿ, ನಿಮಗೆ ಹೇಗನ್ನಿಸುತ್ತಿದೆ?

ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು... ಕುವೆಂಪು ಅವರ ಸದಾಕಾಲ ಹಸಿರಾಗಿರುವಂತಹ ಕವಿವಾಣಿಯೇ ಸಮ್ಮೇಳನದ ಪೂರ್ವಸಿದ್ಧತೆಯಲ್ಲಿ ತೊಡಗಿರುವ ನನಗೆ ಪ್ರೇರಣೆ. ನನ್ನ ಅದೃಷ್ಟ ಅಂತಲೇ ಹೇಳಬಹುದು, ನಾನಿಲ್ಲಿ ಜಿಲ್ಲಾಧಿಕಾರಿಯಾಗಿರುವಾಗಲೇ ಸಮ್ಮೇಳನ ಒಲಿದು ಬಂದಿದೆ. ಕನ್ನಡಮ್ಮನ ಸೇವೆ ಮಾಡಲು ಸುಯೋಗ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ನನ್ನ ಓರಗೆಯ ಡಿಸಿಗಳಿಗೂ ವಿಚಾರಿಸಿದೆ ಈ ಬಗ್ಗೆ, ಅವರೆಲ್ಲರೂ ’ ಯೂ ಆರ್‌ ಲಕ್ಕಿ ಪರ್ಸನ್‌’ ಅಂದ್ರು, ನನಗಂತೂ ಕನ್ನಡ ನುಡಿ ಹಬ್ಬದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಯೋಗಾಯೋಗ ಕೂಡಿ ಬಂದಿದ್ದು ನನ್ನಲ್ಲಿನ ಕನ್ನಡತನ ಜಾಗೃತಿಗೊಳಿಸಿದಂತಾಗಿದೆ.

85ನೇ ಸಾಹಿತ್ಯ ಸಮ್ಮೇಳನ: ಬಹುಲಕ್ಷ ಕೊಟೇಶನ್‌ಗೆ ದಂಗಾದ ಸಚಿವ ಕಾರಜೋಳ!

ಕಲಬುರಗಿ ಕನ್ನಡ ಹಬ್ಬದ ಸಿದ್ಧತೆ ಹೇಗೆ ಸಾಗಿದೆ? ಸರ್ಕಾರದ ಅನುದಾನ, ಜನರ ದೇಣಿಗೆ ಇತ್ಯಾದಿ...?

ಕನ್ನಡಮ್ಮನ ಹಬ್ಬವಾದ್ದರಿಂದ ಸಾರ್ವಜನಿಕರನ್ನು ಹೆಚ್ಚಿಗೆ ಒಳಗೊಳ್ಳುವಂತೆ ಮಾಡಿರಿ, ಡಿಸಿಎಂ ಗೋವಿಂದ ಕಾರಜೋಳ ಅವರ ಸಲಹೆಯಂತೆ ನಾನೇ ಸಂಪನ್ಮೂಲ ಸಂಗ್ರಹಕ್ಕಾಗಿ ಹೆಗಲಿಗೆ ಜೋಳಿಗೆ ಹಾಕಿರುವೆ. ಇದುವೆರಗೂ 21 ಜನ, ಸಂಘ- ಸಂಸ್ಥೆಗಳಿಂದ 8,13,419 ರು ಸಂಗ್ರಹವಾಗಿದೆ. ಸಮ್ಮೇಳನದ ವೆಚ್ಚ 14. 50 ಕೋಟಿ ರು ಎಂದು ಅಂದಾಜಿಸಲಾಗಿದೆ. ಈ ಕಡತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರದ ಹಣಕಾಸು ಇಲಾಖೆಗೆ ಹೋಗಿದೆ. ಇನ್ನೇನು 2 ಅಥವಾ 3 ದಿನದಲ್ಲಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸಮ್ಮೇಳನದ ವಸತಿ, ಮೆರವಣಿಗೆ, ಊಟೋಪಚಾರ ಇತ್ಯಾದಿ ಸಿದ್ಧತೆ ನಿರೀಕ್ಷೆಯಂತೆ ಸಾಗಿದೆ.

ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ: 85ನೇ ನುಡಿಜಾತ್ರೆಗೆ ಕಾಣದ 58ರ ಸಂಭ್ರಮ

ತಾವು ಇಂಗ್ಲಿಷ್‌ ಸ್ನಾತಕೋತ್ತರ ಪದವೀಧರರು, ಕನ್ನಡ ಸಾಹಿತ್ಯದ ಆಸಕ್ತಿಯೂ ತಮ್ಮಲ್ಲಿದೆ. ಇದು ಹೇಗೆ?

ಕನ್ನಡದ ಕಾವ್ಯ ಋುಷಿ ಬಿಎಂ ಶ್ರೀಕಂಠಯ್ಯನವರು ಹೇಳಿಲ್ಲವೆ? ಇವಳ ಸೀರೆ ಅವಳಿಗೆ ತೊಡಿಸಿ, ಅವಳ ಸೀರೆ ಇವಳಿಗೆ ತೊಡಿಸಿ... ಎಂದು, ಹಾಗೆಯೇ ಕನ್ನಡ ಹಾಗೂ ಆಂಗ್ಲ ಸಾಹಿತ್ಯದ ಒಳ ಸೆಳವುಗಳು ಒಂದೇ ಆಗಿವೆ. ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿದವ. ಅಲ್ಲಿ ಕುವೆಂಪು ಪ್ರಾಚಾರ್ಯರಾಗಿದ್ದವರು. ಇಂತಹ ಚಿರಿತ್ರೆ ಇರುವ ಸಂಸ್ಥೆಯಲ್ಲಿದ್ದಾಗ ನನಗೆ ಕನ್ನಡ, ಆಂಗ್ಲ ಸಾಹಿತ್ಯದ ಪ್ರಭಾವ ಆಯ್ತು. ಕುವೆಂಪು ಅವರೇ ಮೊದಲು ಇಂಗ್ಲಿಷ್‌ನಲ್ಲಿ ಪದ್ಯ ಬರೆದು ಮೇಷ್ಟ್ರಿಗೆ ತೋರಿಸಿದಾಗ ನಿನ್ನಲ್ಲಿ ಕಾವ್ಯ ರಚನೆಯ ಅದ್ಭುತ ಸಾಮರ್ಥ್ಯವಿದೆ. ಕನ್ನಡದಲ್ಲಿ ಸಾಹಿತ್ಯ ರಚನೆಗೆ ಮುಂದಾಗುವಂತೆ ಸಲಹೆ ದೊರಕಿತಂತೆ. ಆಗ ಕುವೆಂಪು ಕನ್ನಡದಲ್ಲಿ ಸಾಹಿತ್ಯ ಕೃಷಿಗೆ ತೊಡಗಿದರು. ಕನ್ನಡ, ಇಂಗ್ಲಿಷ್‌ ಎರಡರಲ್ಲಿಯೂ ನನಗೆ ಆಸಕ್ತಿ ಇದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲಿ ಹೆಚ್ಚಿನವರು ಇಂಗ್ಲಿಷ್‌ ಹಿನ್ನೆಲೆಯವರೇ ಎಂಬುದು ನಾವು ನೋಡುತ್ತೇವೆ. ನಾನೂ ಯು.ಆರ್‌.ಅನಂತಮೂರ್ತಿ ಹಾಗೂ ಚೀನು ಇವರ ನಡುವಣ ಸಮನ್ವಯದ ವಿಚಾರಗಳ ಮೇಲೆ ತೌಲನಿಕ ಅಧ್ಯಯನದ ಪಿಎಚ್‌ಡಿ ಮಾಡುವ ಆಸಕ್ತಿಯಿಂದ ಹೆಸರು ನೋಂದಾಯಿಸಿದ್ದೆ. ನನಗೆ ಕೆಲಸದ ಒತ್ತಡಲ್ಲಿ ಅದು ಮಾಡಲಾಗಿಲ್ಲ. ಆದರೆ ನಾನು ಆಂಗ್ಲ ಸ್ನಾತಕೋತ್ತರ ಪದವೀಧರನಾದರೂ ಕನ್ನಡದ ಸಾಹಿತ್ಯದ ಬಗ್ಗೆ ಅಷ್ಟೇ ಆಸಕ್ತಿ ಇಟ್ಟುಕೊಂಡವ.

ಸಮ್ಮೇಳನಕ್ಕೆ ಆರಂಭದಲ್ಲೇ ಕೆಲವು ಅಪಸ್ವರ ಕಾಡಿದವು, ಅವನ್ನೆಲ್ಲ ಹೇಗೆ ನಿವಾರಿಸಿದ್ರಿ?

ನಿಜ, ಸಮ್ಮೇಳನಕ್ಕೆ ಆರಂಭದಲ್ಲೇ ಹಲವು ದಿಕ್ಕಿನಿಂದ ಅಪಸ್ವರ ಕಾಡಿದವು. ಲಾಂಛನದಿಂದಲೇ ಶುರುವಾಯ್ತು ಸಣ್ಣಗಿನ ವಿವಾದ. ನನ್ನ ಗಮನಕ್ಕೆ ಬಂದ ತಕ್ಷಣ ಕಸಾಪದವರನ್ನು ಕರೆದು ಮಾಹಿತಿ ಪಡೆದೆ. ಸ್ಥಳೀಯ ಸಾಹಿತಿಗಳು ನಮಗೆ ಕರೆಯುತ್ತಿಲ್ಲ ಎಂದು ಕೊರಗು ಹೊರಹಾಕಿದಾಗ ನಾನೇ ಖುದ್ದು ಸಭೆ ನಡೆಸಿದೆ. ಸಂಕ್ರಮಣ ದಿನ ಎಳ್ಳು- ಬೆಲ್ಲ ನೀಡಿ ಆಹ್ವಾನಿಸಿದೆ. ಹೀಗೆಯೇ ಸ್ಥಳೀಯರನ್ನು ಒಳಗೊಂಡು ಸಮ್ಮೇಳನ ನಡೆಯಬೇಕೆ ವಿನಹಃ ಹೊರಗಿನವರೇ ಬಂದು ಮಾಡೋದಲ್ಲ ಎಂಬ ಸಂದೇಶ ಎಲ್ಲರಿಗೂ ಸಾರುತ್ತ ನಿಧಾನಕ್ಕೆ ಸಿಟ್ಟು- ಸೆಡವಿನ ವಾತಾವರಣ ತಿಳಿಗೊಳಿಸುವ ಯತ್ನ ಮಾಡಿದೆ. ಅದರಲ್ಲಿ ಅದೆಷ್ಟುಯಶ ಕಂಡಿದ್ದೇನೋ ಗೊತ್ತಿಲ್ಲ, ಆದರೆ ಈಗ ಸಮ್ಮೇಳನದ ಸಿದ್ಧತೆಯಂತು ಸುಸೂತ್ರ ಸಾಗಿದೆ. ಸಾಹಿತಿಗಳು, ಕನ್ನಡಪರ ಹೋರಾಟಗಾರರು ಅನೇಕರು ಬೆಂಬಲ ನೀಡುತ್ತ ಪಾಲ್ಗೊಳ್ಳುತ್ತಿದ್ದಾರೆ. ಎಲ್ರೂ ಸೇರಿ ತಾನೆ ಕನ್ನಡಮ್ಮನ ನುಡಿಜಾತ್ರೆ ಮಾಡೋದು, ಒಬ್ಬರಿಂದಲೇ ಸಾಧ್ಯವೆ? ಕಸಾಪ ಮಾಡಬೋಕಾದ ಅನೇಕ ಸಭೆ, ಫೋನ್‌ ಕರೆಗಳನ್ನೆಲ್ಲ ನಾನೇ ಮಾಡುವಂತಾಯ್ತು. ಅದೇನೂ ಹೊರೆಯಾಗಲಿಲ್ಲ ಬಿಡಿ. ಕನ್ನಡ ಸೇವೆ ಎಂದು ಮಾಡುತ್ತಿರುವೆ.

ಸಮ್ಮೇಳನ ಯಶಸ್ವಿಯಾಗಲು ಸಾರ್ವಜನಿಕರು, ಸಾಹಿತಿಗಳಿಂದ ನೀವು ನೀರಿಕ್ಷಿಸುವ ಸಂಗತಿಗಳೇನು?

ಸಮ್ಮೇಳನ ಎಂದರೆ ಒಬ್ಬಿಬ್ಬರು ಸೇರಿ ಮಾಡೋದಲ್ಲ, ಸಮಾಜದ ಎಲ್ಲರೂ ಇದ್ದರೆನೇ ಕನ್ನಡಮ್ಮನ ತೇರು ಎಳೆಯಲು ಸಾಧ್ಯ. ಹಿರಿಯ, ಕಿರಿಯ ಸಾಹಿತಿಗಳು ಎಲ್ಲರು ಸಿಟ್ಟು ಮರೆತು ಸಮ್ಮೇಳನಕ್ಕೆ ಬರಬೇಕು. ಹಮ್ಮು ಬಿಮ್ಮು ಯಾವುದೂ ಇಟ್ಟುಕೊಳ್ಳದೆ ಕನ್ನಡ ತೇರಿಗೆ ಕೈ ಜೋಡಿಸಲಿ, ಕಸಾಪ ಸಹ ಯಾವುದೇ ಭಿನ್ನಾಭಿಪಾಯಿದಂದ ಯಾರನ್ನೂ ನೋಡದೆ ಸಮ್ಮೇಳನ ಯಶಸ್ಸಿಗೆ ಬೆಂಬಲಿಸಲಿ. ಜಿಲ್ಲಾಡಳಿತವೂ ಇದಕ್ಕೆ ಪೂರಕವಾಗಿಯೇ ಸಾಗುತ್ತಿದೆ. ಕನ್ನಡಪರ ಸಂಘಟನೆಗಳವರಿಗೆ ಮೆರವಮಿಗೆಯಲ್ಲಿ ಮುಕ್ತ ಆಹ್ವಾನ ನೀಡಿದ್ದೇವೆ. ಹೀಗೆ ಎಲ್ಲರು ತಮಗಿರುವ ಸಾಮರ್ಥ್ಯಕ್ಕೆ ತಕ್ಕಂತೆ ಕನ್ನಡ ತಾಯಿ ಸೇವೆ ಮಾಡಲು ಇರುವ ಅವಕಾಶ ಎಂದು ನಾನಂತು ಭಾವಿಸಿರುವೆ. ಹೀಗೆ ಕಲಬುರಗಿ ಸೇರಿದಂತೆ ರಾಜ್ಯದ ಜನತೆ, ಸಂಘಟನೆಗಳವರು, ಸಾಹಿತಿ ಮಿತ್ರರ ಸಹಕಾರ ಬೇಕೇಬೇಕು.

ಸಮ್ಮೇಳನದ ಯಶಸ್ಸು ತಾವು ಯಾವ ರೀತಿ ನಿರೀಕ್ಷಿಸುತ್ತೀರಿ?

ಸಮ್ಮೇಳನ ನಭೂತೋ ಎಂಬಂತೆ ಯಶ ಕಾಣುವ ವಿಶ್ವಾಸವಿದೆ. 1987ರಲ್ಲಿ ನಡೆದ ಸಮ್ಮೇಳನದ ನೆನಪು ಈಗ ಜನ ಮೆಲಕು ಹಾಕುತ್ತಿದ್ದಾರೆ. ಹೀಗೆಯೇ 85ನೇ ಸಮ್ಮೇಳನದ ನೆನಪುಗಳನ್ನು ಜನ ಮುಂದಿನ ದಿನಗಳಲ್ಲಿ ಮೆಲಕು ಹಾಕುವಂತೆ ಅವಿಸ್ಮರಣೀಯವಾಗುವಂತಹ ಸಮ್ಮೇಳನ ಇದಾಗಲಿದೆ. ನಗರ, ಜಿಲ್ಲೆಯಲ್ಲಿ ಕನ್ನಡ ಹಬ್ಬದ ವಾತಾವರಣ ಮೂಡಿದೆ. ಬರುವ ದಿನಗಳಲ್ಲಿ ಇದು ಇನ್ನೂ ಹೆಚ್ಚಲಿದೆ. ಶಾಲಾ ಮಕ್ಕಳಿಂದ ಹಿಡಿದು ಹಿರಿಯ ಸಾಹಿತಗಳ ವರೆಗೂ ವಯೋಭೇದ ಮರೆತು ಜನ ಕನ್ನಡ ನುಡಿ ಹಬ್ಬದ ಚರ್ಚೆಯಲ್ಲಿದ್ದಾರೆ. ಅಂತಹವೆಲ್ಲರೂ ಹಬ್ಬ ನಡೆಯುವ ವಿಶ್ವವಿದ್ಯಾಲಯಕ್ಕೆ ಬಂದು ಕಣ್ಣುತುಂಬ ನುಡಿ ಜಾತ್ರೆ ವೈಭವ ನೋಡಲಿ ಎಂಬುದೇ ನನ್ನ ಮನವಿ.

ಕನ್ನಡದ ಕಮೀಷನರ್‌ ಅಂತಿದ್ದಾರಲ್ಲ ಕಲಬುರಗಿ ಜನ ನಿಮ್ಮನ್ನ

ನೋಡ್ರಿ ಕನ್ನಡ ಕೆಲಸ ಮಾಡಲು ನಾನಂತೂ ಸಿದ್ಧ. ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಕನ್ನಡ ಸೇವೆ ಮಾಡುವುದೇ ನನ್ನ ಆದ್ಯತೆ. ಕನ್ನಡ ತಾಯಿ ಕೆಲಸಕ್ಕೆ ಜೋಳಿಗೆ ನಾನೇ ಹಾಕುವಾಗ ನನ್ನ ಮಾಸಿಕ ಸಂಬಳ ಹಾಕಿಯೇ ನಾನು ಅನ್ಯರ ದೇಣಿಗೆ ಕೇಳಲು ಶುರು ಮಾಡಿದೆ. ನನ್ನ ಈ ಕೆಲಸ ಜನರಿಗೆ ಮನಕ್ಕೆ ತಟ್ಟಿದೆ ಅನ್ಕೋತೀನಿ. ಮನೆಯ ಹಿರಿಯರ ಚಾಳಿಯೇ ಇತರರು ಅನುಸರಿಸೋದಿಲ್ಲವೆ? ಹಾಗೆಯೇ ಇಲ್ಲಿ ನಾನು ಜೋಳಿಗೆಗೆ ದೇಣಿಗೆ ಹಾಕಿದಾಕ್ಷಣವೇ ಸಮಾಜದ ಎಲ್ಲಡೆಯಿಂದ, ಜನನಾಯಕರು, ಸರ್ಕಾರಿ ನೌಕರರಿಂದ ಹಿಡಿದು ಎಲ್ಲರು ಸ್ಪಂದಿಸುತ್ತಿದ್ದಾರೆ. ಇದನ್ನೆಲ್ಲ ಕಂಡಿರುವ ನಮ್ಮ ಹಿರಿಯ ಸಾಹಿತಿಗಳು ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಸಿದ್ಧಯ್ಯ ಪುರಾಣಿಕ ಐಎಎಸ್‌ ಆಗಿದ್ದವರು, ಕಂದಾಯಾ ಇಲಾಖೆಯಲ್ಲಿದ್ದೇ ಕನ್ನಡ ತಾಯಿ ಸೇವೆ ಮಾಡಿದವರು, ನೀವು ಹಾಗೆಯೇ ಇದ್ದೀರಿ ಎಂದು ಹೇಳುತ್ತಿದ್ದಾರೆ. ಹಾಗೇ ಹೇಳೋದನ್ನ ನಾನು ಕೆಲವೆಡೆ ಕೇಳಿದ್ದೇನೆ. ಹಿರಿಯರ ಆಶಿರ್ವಾದ ಅವರ ಔದಾರ್ಯದ ಮಾತುಗಳಿವು. ನಾನು ಎಂದಿನಂತೆ ಕನ್ನಡಮ್ಮನ ಸಾಮಾನ್ಯ ಸೇವಕ ಮಾತ್ರ ಎನ್ನುತ್ತಾರೆ ಕಲಬುರಗಿ ಡಿಸಿ ಶರತ್‌.

ಸಮ್ಮೇಳನ ಹೊರೆ ಅನ್ಕೋಬ್ಯಾಡ್ರಿ-ಒಡೆತನ ನಿಮ್ದೆ ಇರ್ಲಿ

ಕನ್ನಡಮ್ಮನ ನುಡಿಹಬ್ಬ ಹೊರೆಯಾಯ್ತು ಅನ್ಕೋ ಬೇಡ್ರಿ, ಒಡೆತನದಲ್ಲಿ ಬರ್ರಿ, ಇದು ನಮ್ಮ ಹಬ್ಬ ಅನ್ನೋ ಮಾಲೀಕತ್ವ ಭಾವನೆ ಎಲ್ಲರಲ್ಲಿ ಇರಲಿ. ಕನ್ನಡ ಸಮ್ಮೇಳನಕ್ಕೆ ಬರುವವರು ಎಲ್ಲರೂ ಒಡೆತನದಲ್ಲಿ ಬಂದರೆ ನುಡಿಹಬ್ಬದ ಕೀರ್ತಿ ಪತಾಕೆ ದಶದಿಕ್ಕು ಪಸರಿಸುವಲ್ಲಿ ಸಂಶಯವೇ ಬೇಡ. ಕೆರದಿಲ್ಲ ಅನ್ನೋ ಭಾವನೆ ಬೇಡ. ಎಲ್ಲರು ಅವರಿಗೆ ವಹಿಸಿದ ಕೆಲಸದಲ್ಲಿ ಮಗ್ನರಾಗಿದ್ದಾರೆ. ನೀವೂ ಬನ್ನಿ, ಬಾಕಿ ಇರೋ ಕೆಲಸದಲ್ಲಿ ಇದನ್ನ ಮಾಡುವೆ ಅಂತ ಮುಂದಾಗ್ರಿ. ಯಾರೂ ಬೇಡ ಅನ್ನೋದಿಲ್ಲ ಎನ್ನುತ್ತಾರೆ ಡಿಸಿ ಶರತ್‌.
 

Follow Us:
Download App:
  • android
  • ios