85ನೇ ಸಾಹಿತ್ಯ ಸಮ್ಮೇಳನ: ಬಹುಲಕ್ಷ ಕೊಟೇಶನ್‌ಗೆ ದಂಗಾದ ಸಚಿವ ಕಾರಜೋಳ!
ಸರಾಸರಿ 50 ಲಕ್ಷಕ್ಕಿಂತ ಅಧಿಕ ಹಣ ಬೇಕೆಂದು ಎಲ್ಲಾ ಸಮಿತಿಗಳಿಂದ ಅಂದಾಜು ಮಂಡನೆ| ಸಮಿತಿಗಳ ಮುಖ್ಯಸ್ಥರ ಲೆಕ್ಕಪತ್ರ ಅಂದಾಜು ಕೇಳಿ ಜಿಲ್ಲಾ ಉಸ್ತವಾರಿ ಸಚಿವರು ಸುಸ್ತು| ಸರ್ಕಾರದ ಅನುದಾನ ಅಪೇಕ್ಷಿಸದಂತೆ ಸಮ್ಮೇಳನ-ಸಂಪನ್ಮೂಲ ಕ್ರೂಢೀಕರಿಸುವಂತೆ ಸಚಿವರು ಸೂಚನೆ|
ಕಲಬುರಗಿ(ಜ.11): ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಹಾಗೂ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿವಿಧ ಸಮಿತಿಗಳು ಮಂಡಿಸಿದ ಬಹುಲಕ್ಷ ಮೊತ್ತದ ಅಂದಾಜು ಪಟ್ಟಿಗೆ ಪರೇಶಾನ್ ಆಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಮ್ಮೇಳನದ ವೇದಿಕೆ ಸಮಿತಿಯಿದ ಶುರುವಾದ ವಿವರ ಮಂಡನೆಯಲ್ಲಿ 15 ಸಮಿತಿಗಳು ತಾವು ಮಾಡಿರುವ ಯೋಜನೆ, ಅದಕ್ಕೆ ತಗಲುವ ವæಚ್ಚದ ಮಾಹಿತಿ ನೀಡಿದರು. ಪ್ರತಿಯೊಂದು ಸಮಿತಿಯವರು ಸರಾಸರಿ 50 ಲಕ್ಷಕ್ಕೂ ಹೆಚ್ಚಿನ ವೆಚ್ಚದ ಅಂದಾಜು ಮಂಡಿಸಿದಾಗ ಸಚಿವ ಕಾರಜೋಳ್ ದಂಗಾದರು.
ಸ್ಥಳೀಯ ದಾನಿಗಳ ನೆರವು ಪಡೆಯಿರಿ:
ಸಮ್ಮೇಳನ ಜನರ ಒಳಗೊಳ್ಳುವಿಕೆಯಿಂದ ನಡೆಯಬೇಕೇ ಹೊರತು ಸರ್ಕಾರದ ಅನುದಾನವನ್ನೇ ಅವಲಂಬಿಸಿ ನಡೆಯಬಾರದು. ಸಮ್ಮೇಳನದ ಅನೇಕ ಕೆಲಸಗಳನ್ನು ವಿವಿಧ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಉದ್ದಿಮೆಗಳು, ಉದ್ದಿಮೆದಾರರ ದೇಣಿಗೆಯನ್ನು ಕ್ರೂಢೀಕರಿಸಿ ನಡೆಸಿ. ಜೊತೆಗೆ ಸಮ್ಮೇಳನದಲ್ಲಿನ ಶೇ.50ಕ್ಕೂ ಹೆಚ್ಚಿನ ವೆಚ್ಚದ ಪಟ್ಟಿಗಳಿಗೆ ಸ್ಥಳೀಯವಾಗಿ ದಾನಿಗಳನ್ನು ಹುಡುಕಿ ತಮಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಸ್ಥಳೀವಾಗಿರುವ ಸಿಮೆಂಟ್, ಸಕ್ಕರೆ ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳ ಮುಖಂಡರ ಸಭೆ ಕರೆಯಿರಿ, ಅವರನ್ನೆಲ್ಲ ವಿಶ್ವಾಸಕ್ಕೆ ಪಡೆದು ಸಾಹಿತ್ಯ ಸಮ್ಮೇಳನದ ಮಾಹಿತಿ ನೀಡಿ ಅವರಿಂದ ನೆರವು ಪಡೆಯಿರಿ. ಜೊತೆಗೆ ಸ್ಥಳೀಯವಾಗಿರುವ ಸಾಹಿತ್ಯಾಸಕ್ತ ದಾನಿಗಳಿಗೂ ಕರೆದು ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗಿರಿ ಎಂದು ಕಿವಿಮಾತು ಹೇಳಿದರು.
ಸರ್ಕಾರದಿಂದ ನೆರವು ಬರಲಿದೆ:
ಸಮ್ಮೇಳನಕ್ಕೆ ಸರ್ಕಾರ ಅದೇನು ನೆರವು ಕೊಡುತ್ತವೋ ಕೊಟ್ಟೇ ಕೊಡುತ್ತದೆ. ಮಿಕ್ಕಂತೆ ಕನ್ನಡ ಕೆಲಸಕ್ಕೆ ಹಣ ನೀಡುವ ದಾನಿಗಳು ಸಾಕಷ್ಟುಜನ ಈ ನಾಡಿನಲ್ಲಿದ್ದಾರೆ. ಅವರನ್ನೆಲ್ಲ ಗುರುತಿಸಿ ಅವರ ನೆರವು ಪಡೆಯುವದರ ಜತೆಗೇ ಕನ್ನಡ ಕಟ್ಟುವ ಕೆಲಸಕ್ಕೆ ಅವರನ್ನು ತೆಗೆದುಕೊಳ್ಳುವಂತೆ ಮಾಡುವುದೇ ಅವರೊಂದಿಗೆ ಸಂಬಂಧ ಹೊಂದುವುದರ ಹಿಂದಿನ ಉದ್ದೇಶವಾಗಿರಲಿ ಎಂದರು.
ಆಹಾರ, ವಸತಿ, ಸಾರಿಗೆ, ಪ್ರದರ್ಶನ, ಮೆರವಣಿಗೆ, ಸ್ಮರಣ ಸಂಚಿಕೆ, ಕಲಾ ಪ್ರದರ್ಶನ, ಪ್ರಚಾರ ಸಮೀತಿ ಸೇರಿದಂತೆ ಸಮ್ಮೇಳನದ ತರಹೇವಾರಿ ಸಮೀತಿಗಳವರು ಲಕ್ಷಾಂತರ ರುಪಾಯಿ ವೆಚ್ಚಕ್ಕೆ ಬೇಕು, ತಕ್ಷಣ ಅನುಮತಿ ನೀಡಿರಿ ಎಂದು ಆಗ್ರಹಿಸೋದನ್ನ ಕೇಳಿ ಕೇಳಿ ದಂಗಾದ ಸಚಿವರು, ನೀವೆಲ್ಲ ಬರೀ ಕೋಟೇಷನ್ ಹಾಕೋದ್ರಾಗೇ ಮಗ್ನ ಆದಂಗ ಅದೀರಿ, ನೀವು ಮೊದ್ಲು ಈ ನಾಡಿನಲ್ಲಿರುವ ಕನ್ನಡ ಸೇವಕರ, ಸಿರಿವಂತರನ್ನ, ಶಿಕ್ಷಣ ಸಂಸ್ಥೆಗಳನ್ನ, ಮಠಗಳನ್ನ ಗುರುತಿಸಿರಿ. ಅವರಿಂದ ದೇಣಿಗೆ ಪಡೆಯಿರಿ, ಬೇಡಲು ಯಾಕೆ ನಾಚಿಕೆ, ಕನ್ನಡ ಕೆಲಸಕ್ಕೆ ಎಲ್ಲರು ಸೇರಿ ದೇಣಿಗೆ ಪಡೆಯೋಣ, ಜೊತೆಗೆ ಸರ್ಕಾರದ ನೆರವು ಇದ್ದೇ ಇರುತ್ತದೆ ಎಂದರು.
5 ಸಾವಿರ ಟೀ ಶರ್ಟ್‌ಗೆ ಬಿಜಿಪಿ ಒಪ್ಪಿಗೆ
ಸಮ್ಮೇಳನದಲ್ಲಿ ಪಾಲ್ಗೊಳ್ಳುವ ವಿವಿಧ ಶಾಲೆ, ಕಾಲೇಜಿನ ಸ್ವಯಂ ಸೇವಕ ಮಕ್ಕಳಿಗೆ ತಮ್ಮ ಶಿಕ್ಷಣ ಸಂಸ್ಥೆ ಪರವಾಗಿ 5 ಸಾವಿರ ಟೀ ಶರ್ಟ್ ಸಿದ್ಧಪಡಿಸಿ ನೀಡೋವುದಾಗಿ ಸಭೆಯಲ್ಲಿ ಎಂಎಲ್ಸಿ ಬಿಜಿ ಪಾಟೀಲ್ ಒಪ್ಪಿಕೊಂಡರು. ತಮಗೆ ಯಾರೂ ಕೇಲಿಲ್ಲ. ಸಚಿವರಾದ ತಾವು ಹೇಳಿದ್ದೀರಿ, ನಾವಂತೂ ಕನ್ನಡ ಕೆಲಸಕ್ಕೆ ಸದಾಸಿದ್ಧ ಎಂದು ಖುಷಿಯಿಂದ ಬಿಜಿ ಪಾಟೀಲ್ ಒಪ್ಪಿಕೊಂಡರು.
ಸಭೆಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಎಂವೈ ಪಾಟೀಲ್, ಸುಭಾಸ ಗುತ್ತೇದಾರ್, ಅವಿನಾಶ ಜಾಧವ್, ರಾಜಕುಮಾರ ತೇಲ್ಕೂರ್, ಬಿಜಿ ಪಾಟೀಲ್, ತಿಪ್ಪಣ್ಣ ಕಮಕನೂರ್, ಕಸಾಪ ಅಧ್ಯಕ್ಷ ಡಾ. ಮನು ಬಳಗಾರ್, ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಸಿಇಓ ಡಾ. ರಾಜಾ, ಡಿಸಿ ಬಿ ಶರತ್, ಪಾಲಿಕೆ ಆಯುಕ್ತ ಪಾಂಡ್ವೆ, ಎಸ್ಪಿ ಯಡಾ ಮಾರ್ಟಿನ್, ಎಎಸ್ಪಿ ಪ್ರಸನ್ನ ದೇಸಾಯಿ ಪಾಲ್ಗೊಂಡಿದ್ದರು.
ನಿಮ್ಮ ಖರ್ಚು-ವೆಚ್ಚ ನೀವೇ ನೋಡ್ಕೋಳ್ರಿ
ಸಮ್ಮೇಳನದಲ್ಲಿ ಬಂದವರಿಗೆ ತುರ್ತು ಆರೋಗ್ಯ ಸೇವೆ ನೀಡುವ ಹಾಗೂ ನಗರ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಪಾಲಿಕೆ ನೇತೃತ್ವದ ನೈರ್ಮಲ್ಯ ಸಮಿತಿ, ಜಿಲ್ಲಾ ಆರೋಗ್ಯ ಅಧಿಕಾರಿಗಳ ನೇತೃತ್ವದ ಆರೋಗ್ಯ ಸಮಿತಿಯವರು ತಮಗೂ ಇಷ್ಟೆಲ್ಲಾ ಹಣ ಬೇಕೆಂದು ಬೇಡಿಕೆ ಇಟ್ಟಾಗ ಸಚಿವರು ಇವರನ್ನು ಉದ್ದೇಶಿಸಿ ಇದನ್ನೆಲ್ಲ ನೀವು ನಿಮ್ಮ ಇಲಾಖೆಯ ಅನುದಾನದಲ್ಲೇ ಹೊಂದಿಸಬೇಕೆ ಹೊರತು ಹೆಚ್ಚುವರಿ ಅನುದಾನ ನೀಡಲಾಗದು. ನೀವು ಬಂದವರಿಗೆ ಉತ್ತಮ ಸೇವೆ ನೀಡಬೇಕು, ಹಾಗಂತ ಹೆಚ್ಚುವರಿ ಅನುದಾನ ಕೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.
35 ಎಕರೆ ಜಾಗದಲ್ಲಿ ವೇದಿಕೆ
20 ಸಾವಿರ ಜನ ಏಕಕಾಲಕ್ಕೆ ಕುಳಿತು ಸಮಾರಂಭ ವೀಕ್ಷಿಸುವಂತಹ ಬೃಹತ್ ವೇದಿಕೆ, ಪಕ್ಕದಲ್ಲೇ ಊಟ ಸವಲತ್ತಿರುವಂತೆ 35 ಎಕರೆ ಜಾಗದಲ್ಲಿ ಸಿದ್ಧತೆ ಸಾಗಿವೆ. 500 ಪುಸ್ತಕ ಮಳಿಗೆ, 350 ವಾಣಿಜ್ಯ ಮಳಿಗೆ ಹಾಕಲಾಗುತ್ತದೆ, 6 ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ ಎಂಬ ವೇದಿಕೆ ಸಮಿತಿ ಪರವಾಗಿ ಪಿಡಬ್ಲೂಡಿ ಎಂಜಿನಿಯರ್ ವಿವರಣೆ ನೀಡಿದಾಗ ಸಚಿವ ಕಾರಜೋಳ ಎಲ್‌ಇಡಿ ಪರದೆ 15 ಅಳವಡಿಸಿರಿ, ವೇದಿಕೆ ಇನ್ನೂ ವಿಶಾಲವಾಗಿರಲಿ, ಮಳೆ, ಗಾಳಿ ಬಂದರೂ ಯಾವುದೇ ತೊಂದರೆಯಾಗದಂತಹ ವೇದಿಕೆ ಅದಾಗಲಿ ಎಂದು ಸೂಚಿಸಿದರು.
200 ಆಹಾರ ಕೌಂಟರ್ ಮಾಡ್ರಿ
ಕೇವಲ 80 ಆಹಾರ ಕೌಂಟರ್ ಮಾಡಿದರೆ ಯಾತಕ್ಕೂ ಸಾಲದು. 25ರಿಂದ 50 ಸಾವಿರ ಜನ ಊಟಕ್ಕೆ ಬಂದಾಗ 80 ಕೌಂಟರ್ ಅದೆಲ್ಲಿ ಸಾಲುತ್ತವೆ? ಕನಿಷ್ಠ 200 ಆಹಾರ ಕೌಂಟರ್ ಮಾಡಬೇಕು. ಸ್ವಯಂ ಸೇವಕರಿಂದ ಅಲ್ಲೆಲ್ಲಾ ಸೂಕ್ತ ಸವಲತ್ತು ಎಲ್ಲರಿಗೂ ದೊರಕುವಂತಾಗಬೇಕು. ಸಮ್ಮೇಳನಕ್ಕೆ ಬಂದವರು ಯಾರೊಬ್ಬರೂ ಊಟ ಸಿಕ್ಕಿಲ್ಲವೆಂದು ಹಸಿವೆಯಿಂದ ಮರಳುವಂತಾಗಬಾರದು. ಶೇಂಗಾ, ಸಜ್ಜಿಗೆ, ಹೂರಣ, ಕೊಬ್ಬರಿ ಹೋಳಿಗೆ, ಗೋಧಿ ಹುಗ್ಗಿ ಕಡ್ಡಾಯವಾಗಿ ಊಟದಲ್ಲಿ ಇರಲೇಬೇಕು. ಇವುಗಳ ಜೊತೆಗೆ ಕರಾವಳಿ, ಉ-ಕ, ಮಧ್ಯ ಕರ್ನಾಟಕ, ಹಳೆ ಮೈಸೂರು ಪ್ರದೇಶದ ತರಹೇವಾರಿ ಖಾದ್ಯಗಳು ಇರಲಿ, ಮ್ಮೇಳನಕ್ಕೆ ನಾನಾ ಪ್ರದೇಶಗಳಿಂದ ಜನರು ಬರುತ್ತಾರೆ. ಅವರಿಗೆ ಇಲ್ಲಿ ಎಲ್ಲಾ ರುಚಿಯ ಊಟ ಶುಚಿಯಾಗಿ ಸಿಗುವಂತೆ ಮಾಡಿ. 7 ಲಕ್ಷ ಜನ ಮೂರು ದಿನಗಳ ಮೇಳದಲ್ಲಿ ಬಂದು ಹೋಗುವ ಲೆಕ್ಕಾಚಾರ ಇಟ್ಟುಕೊಂಡಿರುವ ನೀವು ಕೌಂಟರ್ ಹೆಚ್ಚಿಗೆ ಮಾಡಿ ನೂಕು ನುಗ್ಗಲು ಆಗದಂತೆ ಎಚ್ಚರಿಕೆ ವಹಿಸಿ ಎಂದು ಆಹಾರ ಸಮಿತಿ ಉಸ್ತುವಾರಿ ಡಾ. ರಿತೇಂದ್ರನಾಥ ಸುಗೂರ್‌ಗೆ ಸೂಚಿಸಿದರು.
ಸಾರಿಗೆ ವೆಚ್ಚ ಈಶಾನ್ಯ ಸಾರಿಗೆ ಭರಿಸಲಿ: ಖರ್ಗೆ
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮೇಳನಕ್ಕೆ ಬಂದು ಹೋಗುವವರಿಗೆ ನೀಡುವ ಸಾರಿಗೆ ವೆಚ್ಚ 6 ಲಕ್ಷ ದಷ್ಟಿದೆ. ಇದನ್ನ ಸಂಸ್ಥೆಯೆ ಭರಿಸಲಿ. ಇದಲ್ಲದೆ ತಾಲೂಕಿನಿಂದ 2ರಂತೆ 3 ದಿನ 20 ಬಸ್‌ಗಳು ಸಮ್ಮೇಳನ ಸ್ಥಳಕ್ಕೆ ಬಂದು ಹೋಗುವಂತೆ ವ್ಯವಸ್ಥೆಯಾಗಬೇಕು. ಇದನ್ನೂ ಸಂಸ್ಥೆಯೇ ನೋಡಿಕೊಳ್ಳಬೇಕು. ಈಶಾನ್ಯ ಸಾರಿಗೆಗೆ ಈ ವಿಚಾರದಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿದರು.
ಸ್ಮರಣ ಸಂಚಿಕೆಗೆ ಸಾಹಿತಿಗಳಿಂದ ಲೇಖನ ತರಿಸಿಕೊಳ್ಳಿ
ಸಮ್ಮೇಳನದ ಸ್ಮರಣ ಸಂಚಿಕೆ ಕವಿ ಜನ ಮಾರ್ಗಕ್ಕೆ ನಾಡಿನ ಖ್ಯಾತ ಲೇಖಕರು, ಚಿಂತಕರು, ಬರಹಗಾರ ಮಠಾಧೀಶÜರಿಂದ ಲೇಖನ ತರಿಸಿಕೊಳ್ಳಿ. ಸಿರಿಗೆರಿ ಶ್ರೀಗಳು, ಭೈರಪ್ಪ, ಜ್ಞಾನಪೀಠ ಪುರಸ್ಕೃತರಾದ ಕಂಬಾರ, ಪ್ರಧಾನ ಗುರುದತ್ತ, ಸಿದ್ದಲಿಂಗ ಪಟ್ಟಣಶೆಟ್ಟಿ, ರಹಮತ್ ತರಿಕೇರಿ, ಗೋರು ಚೆನ್ನಬಸಪ್ಪ, ಡಾ. ಚಿದಾನಂದಮೂರ್ತಿ ಸೇರಿದಂತೆ ನಾಡಿನ ಹೆಸರಾಂತರಿಂದ ಲೇಖನ ತರಿಸಿಕೊಳ್ಳಿ. ಸಮ್ಮೇಳನದ ಸ್ಮರಣ ಸಂಚಿಕೆ ಮಹತ್ವದಾಗಿರುತ್ತದೆ. ಸದಾಕಾಲ ತೆಗೆದಿಟ್ಟು ಓದುವಂತೆ ಸಂಚಿಕೆ ರೂಪಿಸಬೇಕಾದ ಜವಾಬ್ದಾರಿ ಪ್ರಧಾನ ಸಂಪಾದಕರದ್ದಾಗಿರುತ್ತದೆ. ಅದಕ್ಕೇ ಇನ್ನೂ ಸಮಯವಿದೆ. ನಾಡಿನ ಕ್ಯಾತನಾಮರೆಲ್ಲರಿಗೂ ಲೇಖನ ಬರೆಯುವಂತೆ ಹೇಳಿ ಪ್ರಕಟಿಸಿರಿ. ಸಮಾಜದ ಏಳ್ಗೆ ಬಯಸುವಂತಹ ಲೇಖನ ಯಾರೇ ಬರೆಯಲಿ, ಅವರಿಂದ ಕೇಳಿ ಪಡೆಯಿರಿ, ಲೇಖನಗಳ ಮೂಲಕರ ಉತ್ತಮ ಸಮಾಜ ಕಟ್ಟುವ ಕೆಲಸವಾಗಲಿಳ್ಳುವಂತೆ ಕಾರಜೋಳ ಸಲಹೆ ನೀಡಿದರು.
ವಿವಿಧ ಸಮಿತಿಗಳ ಕೋಟೇಷನ್
1) ಪುಸ್ತಕ ಪ್ರದರ್ಶನ, ಮಳಿಗೆ ಸಮಿತಿ: 47 ಲಕ್ಷ ರು
2) ವಸತಿ-ಸಾರಿಗೆ ಸಮಿತಿ: 76 ಲಕ್ಷ ರು
3) ಸ್ವಯಂ ಸೇವಕರ ಸಮಿತಿ: 50 ಲಕ್ಷ ರು
4) ಸ್ವಚ್ಛತಾ ಸಮಿತಿ: 50 ಲಕ್ಷ ರು
5) ಆರೋಗ್ಯ ಸಮಿತಿ: 10 ಲಕ್ಷ ರು
6) ಚಿತ್ರಕಲೆ ಪ್ರದರ್ಶನ: 20 ಲಕ್ಷ ರು
7) ಪ್ರತಿನಿಧಿ ನೋಂದಣಿ ಸಮಿತಿ: 80 ಲಕ್ಷ ರು
8) ಅಲಂಕಾರ ಸಮಿತಿ: 55 ಲಕ್ಷ ರು
9) ಸ್ಮರಣ ಸಂಚಿಕೆ ಸಮಿತಿ: 5. 50 ಲಕ್ಷ ರು
10) ಸಂಸ್ಕೃತಿ ಸಮಿತಿ: 65 ಲಕ್ಷ ರು