Asianet Suvarna News Asianet Suvarna News

ಗಾಜಿನ ಮನೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನ : ಕುಪ್ಪಣ್ಣ ಪಾರ್ಕ್ ನಲ್ಲಿ ಭರದ ಸಿದ್ಧತೆ

ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಲಕ್ಷಾಂತರ ಹೂಗಳಿಂದ ಚಂದ್ರಯಾನ 3 ರಾಕೆಟ್, ವಿಕ್ರಮ್ ಲ್ಯಾಂಡರ್ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.

Dasara  fruit and flower display in  glass house: preparations are underway at Kuppanna Park snr
Author
First Published Oct 13, 2023, 10:55 AM IST

 ಬಿ. ಶೇಖರ್ ಗೋಪಿನಾಥಂ

 ಮೈಸೂರು :  ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಲಕ್ಷಾಂತರ ಹೂಗಳಿಂದ ಚಂದ್ರಯಾನ 3 ರಾಕೆಟ್, ವಿಕ್ರಮ್ ಲ್ಯಾಂಡರ್ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.

ದಸರಾ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಫಲಪುಷ್ಪ ಪ್ರದರ್ಶನವನ್ನು ನಗರದ ಹಾರ್ಡಿಂಜ್ ವೃತ್ತದ ಬಳಿಯ ಕುಪ್ಪಣ್ಣ ಪಾರ್ಕ್ (ನಿಶಾದ್ ಬಾಗ್) ನಲ್ಲಿ ಅ.15 ರಿಂದ 24 ರವರೆಗೆ ಆಯೋಜಿಸಲು ಜಿಲ್ಲಾ ತೋಟಗಾರಿಕೆ ಸಂಘವು ತೀರ್ಮಾನಿಸಿ, ಸಿದ್ಧತೆಯನ್ನು ಈಗಾಗಲೇ ಆರಂಭಿಸಲಾಗಿದೆ.

ಗಾಜಿನ ಮನೆಯಲ್ಲಿ ಚಂದ್ರಯಾನ 3

ಭಾರತವು ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಡುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ. ಬಾಹ್ಯಾಕಾಶ ಚರಿತ್ರೆಯಲ್ಲಿ ಭಾರತವು ಹೊಸ ಮೈಲುಗಲ್ಲು ಸಾಧಿಸಲು ಕಾರಣವಾದ ಚಂದ್ರಯಾನ- 3 ರಾಕೆಟ್, ವಿಕ್ರಮ್ ಲ್ಯಾಂಡರ್ ಅನ್ನು ಲಕ್ಷಾಂತರ ಗುಲಾಬಿ ಹೂಗಳಿಂದ ನಿರ್ಮಿಸುವ ಮೂಲಕ ಫಲಪುಷ್ಪ ಪ್ರಿಯರ ಮನತಣಿಸುವುದು ಹಾಗೂ ಇಸ್ರೋ ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ.

ಚಂದ್ರಯಾನ 3 ರಾಕೆಟ್, ವಿಕ್ರಂ ಲ್ಯಾಂಡರ್ ಅನ್ನು ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿಕೆ ಹೂವುಗಳಿಂದ ಸುಮಾರು 24 ಅಡಿ ಎತ್ತರದಲ್ಲಿ ಗಾಜಿನ ಮನೆಯಲ್ಲಿ ನಿರ್ಮಿಸಲಾಗುತ್ತಿದೆ. ಚಂದ್ರ 40 ಚದುರ ಅಡಿ ಡಯಾ ಮತ್ತು 5 ಅಡಿ ಎತ್ತರ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು 15 ಅಡಿ ಎತ್ತರ, 15 ಅಡಿ ಅಗಲ ಮತ್ತು 15 ಅಡಿ ಉದ್ದದಲ್ಲಿ ರಚಿಸಲಾಗುತ್ತಿದೆ. ಈ ಪರಿಕಲ್ಪನೆಗಾಗಿ 2 ಲಕ್ಷಕ್ಕೂ ಹೆಚ್ಚಿನ ಗುಲಾಬಿ ಹೂವುಗಳನ್ನು ಬಳಸಲಾಗುತ್ತಿದೆ.

ಚಾಮುಂಡೇಶ್ವರಿ ಗೋಪುರ, ಕ್ರಿಕೆಟ್ ಬಾಲ್

20 ಅಡಿ ಎತ್ತರದ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹ ಹಾಗೂ ಗೋಪುರವನ್ನು ವಿವಿಧ ಹೂವುಗಳಿಂದ ನಿರ್ಮಿಸಲಾಗುತ್ತಿದೆ.

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯು ಭಾರತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಸಕ್ತರನ್ನು ಸೆಳೆಯುವ ನಿಟ್ಟಿನಲ್ಲಿ ಕ್ರಿಕೆಟ್ ಬಾಲ್ ನ ಪ್ರತಿರೂಪ ನಿರ್ಮಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ರಚನೆಯ ಸುವರ್ಣ ಸಂಭ್ರಮೋತ್ಸವದ ಪ್ರಯುಕ್ತ ರಾಜ್ಯದ ಶ್ರೀಮಂತ ಪರಂಪರೆ, ಸ್ಮಾರಕಗಳನ್ನು ವಿವಿಧ ಹೂವಿನ ಪ್ರತಿಕೃತಿಗಳೊಂದಿಗೆ ನಿರ್ಮಿಸಲಾಗುತ್ತಿದೆ.

ಸಂವಿಧಾನ ಓದು ಜೊತೆ ಸೆಲ್ಫಿ

ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಅಂಗವಾಗಿ ಸಂವಿಧಾನ ಪೀಠಿಕೆ ಮಾದರಿಯನ್ನು ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ನಿರ್ಮಿಸಲಾಗುತ್ತಿದೆ.

ಇಷ್ಟೇ ಅಲ್ಲದೆ, ಕೆಎಸ್ಆರ್ಟಿಸಿ ಕೆಂಪು ಬಸ್, ವಿದ್ಯುತ್ ದೀಪ ಮಹಿಳೆಯರನ್ನು ಹೂವುಗಳಿಂದ ನಿರ್ಮಿಸಲಾಗುತ್ತೆದೆ. ವೈವಿಧ್ಯತೆಯಿಂದ ಕೂಡಿದ ಹಲವು ಪ್ರತಿಕೃತಿಗಳನ್ನು ಫಲಪುಷ್ಪಗಳಲ್ಲಿ ನಿರ್ಮಿಸಲಾಗುತ್ತಿದೆ.

ಹೂವಿನ ಲೋಕ

ತೋಟಗಾರಿಕೆ ಇಲಾಖೆ ವತಿಯಿಂದ 60 ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬೆಳೆದಿದ್ದು, ಇಡೀ ಕುಪ್ಪಣ್ಣ ಪಾರ್ಕ್ ಅನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ.

ಕಾಕ್ಸ್ ಕಾಂಬ್, ಸೆಲೋಸಿಯಾ, ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಝೆನಿಯಾ ಪೆಟುನಿಯಾ, ಇಂಪಟೆನಿಸ್, ಕಾಕ್ಮಾಸ್, ಡಾಲಿಯಾ, ಅಜೆಟೇರಿಯಮ್, ಆನಿಯಲ್ ಕ್ರೈಸೆಂಥಮ್, ಬಟನ್ ಕ್ರೈಸೆಂಥಮ್, ಟುರೇನಿಯಾ, ಸ್ಪೈಡರ್, ಪೂನಾದದಿಂದ ವಿಶೇಷವಾಗಿ ಪೊಯಿನ್ಸಿಟಿಯಾ, ಕ್ಯಾಲಂಚಿ, ಆಂಥೋರಿಯಮ್, ಹಿಲ್ ಬಾಲಾಸಮ್, ಕಾರ್ಕುಮಾ ಗಿಡಗಳನ್ನು ತರಲಾಗಿದೆ.

ನಗರದ ಹಲವು ಕೈಗಾರಿಕಾ ಸಂಸ್ಥೆಗಳು ಫಲಪ್ರಷ್ಟ ಪ್ರದರ್ಶನ ಆವರಣದಲ್ಲಿ ವಿವಿಧ ಅಲಂಕಾರಿಕ ಗಿಡಗಳನ್ನು ಪ್ರದರ್ಶಿಸುತ್ತವೆ. ಅಲ್ಲದೆ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಕೃಷಿ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಹಾಗೂ ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಸಹ ನೀಡಲಾಗುತ್ತದೆ.

Follow Us:
Download App:
  • android
  • ios