ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕಾಗಿ ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯು ಪ್ರತಿನಿತ್ಯ ತಾಲೀಮು ನಡೆಸುವ ಮೂಲಕ ಜಂಬೂಸವಾರಿಗೆ ಸಿದ್ಧವಾಗುತ್ತಿವೆ. ಇದರ ಭಾಗವಾಗಿ ದಸರಾ ಗಜಪಡೆಗೆ ಮರಳು ಮೂಟೆ ಹೊರಿಸುವ ತಾಲೀಮು ಸಹ ಆರಂಭಿಸಲಾಗಿದ್ದು, ಮೊದಲ ದಿನ ಶುಕ್ರವಾರ ಅಂಬಾರಿ ಆನೆ ಅಭಿಮನ್ಯು ಮೈಮೇಲೆ 600 ಕೆ.ಜಿ ಬಾರ ಹೊರಿಸಿ ಯಶಸ್ವಿಯಾಗಿ ತಾಲೀಮು ನಡೆಸಲಾಗಿತ್ತು. 

ಬಿ. ಶೇಖರ್‌ಗೋಪಿನಾಥಂ

ಮೈಸೂರು (ಸೆ.18): ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕಾಗಿ ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯು ಪ್ರತಿನಿತ್ಯ ತಾಲೀಮು ನಡೆಸುವ ಮೂಲಕ ಜಂಬೂಸವಾರಿಗೆ ಸಿದ್ಧವಾಗುತ್ತಿವೆ. ಇದರ ಭಾಗವಾಗಿ ದಸರಾ ಗಜಪಡೆಗೆ ಮರಳು ಮೂಟೆ ಹೊರಿಸುವ ತಾಲೀಮು ಸಹ ಆರಂಭಿಸಲಾಗಿದ್ದು, ಮೊದಲ ದಿನ ಶುಕ್ರವಾರ ಅಂಬಾರಿ ಆನೆ ಅಭಿಮನ್ಯು ಮೈಮೇಲೆ 600 ಕೆ.ಜಿ ಬಾರ ಹೊರಿಸಿ ಯಶಸ್ವಿಯಾಗಿ ತಾಲೀಮು ನಡೆಸಲಾಗಿತ್ತು. 

ಒಂದು ದಿನ ಬಿಟ್ಟು ಅಂದರೆ ಮಹೇಂದ್ರ ಆನೆ ಮೈಮೇಲೆ 575 ಕೆ.ಜಿ. ಬಾರಿ ಹೊರಿಸಿ ಯಶಸ್ವಿಯಾಗಿ ತಾಲೀಮು ನಡೆಸಲಾಯಿತು. ಬಳ್ಳೆ ಆನೆ ಶಿಬಿರದಿಂದ ಬಂದಿರುವ 40 ವರ್ಷದ ಮಹೇಂದ್ರ ಆನೆಯ ಮೈಮೇಲೆ 200 ಕೆ.ಜಿ. ತೂಕದ ನಮ್ದಾ, ಗಾದಿಯನ್ನು ಬಿಗಿಯಾಗಿ ಕಟ್ಟಿದ ಬಳಿಕ 375 ಕೆ.ಜಿ ತೂಕದ ಮರಳು ಮೂಟೆ ಇರಿಸಲಾಯಿತು. ಒಟ್ಟು 575 ಕೆ.ಜಿ ಬಾರ ಹೊತ್ತು ಮಹೇಂದ್ರ ಆನೆಯು ರಾಜಮಾರ್ಗದಲ್ಲಿ ಗಜಗಾಂಭೀರ್ಯದ ಹೆಜ್ಜೆ ಹಾಕಿತು.

ದೇಶದಲ್ಲಿ ಸಂವಿಧಾನಕ್ಕಿಂತ ಬೇರೆ ಯಾವ ಧರ್ಮವು ದೊಡ್ಡದಲ್ಲ: ಸಚಿವ ಮಹದೇವಪ್ಪ

ಮಾವುತ ರಾಜಣ್ಣ, ಕಾವಾಡಿ ಮಲ್ಲಿಕಾರ್ಜುನ ಸೂಚನೆಯಂತೆ ಮಹೇಂದ್ರ ಆನೆಯು ಬಾರ ಹೊತ್ತು ಸಾಗುವ ಮೂಲಕ ಗಮನ ಸೆಳೆದನು. ಮಹೇಂದ್ರ ಆನೆಯು ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದು, ಕಳೆದ ವರ್ಷ ಮೊದಲ ಬಾರಿಗೆ ದಸರೆಯಲ್ಲಿ ಪಾಲ್ಗೊಂಡು, ಶ್ರೀರಂಗಪಟ್ಟಣ ದಸರಾದಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಎರಡನೇ ಬಾರಿಗೆ ಮೈಸೂರು ದಸರೆಗೆ ಆಗಮಿಸಿರುವ ಮಹೇಂದ್ರ ಆನೆಯು ಭವಿಷ್ಯದ ದೃಷ್ಟಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಭರವಸೆ ಮೂಡಿಸುತ್ತಿದೆ.

ಗಜಪಡೆ ನಡಿಗೆ: ಬಾರ ಹೊತ್ತ ಮಹೇಂದ್ರ ಆನೆ ಜೊತೆಗೆ ಅಂಬಾರಿ ಆನೆ ಅಭಿಮನ್ಯು, ಮಾಜಿ ಅಂಬಾರಿ ಆನೆ ಅರ್ಜುನ, ಧನಂಜಯ, ಭೀಮ, ಗೋಪಿ, ಕಂಜನ್, ವರಲಕ್ಷ್ಮಿ ಮತ್ತು ವಿಜಯ ಆನೆಗಳು ಪಾಲ್ಗೊಂಡಿದ್ದವು. ಅರಮನೆ ಮುಂಭಾಗದಿಂದ ಹೊರಟ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆರ್‌ಎಂಸಿ ವೃತ್ತ, ಹೈವೆ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ 1 ಗಂಟೆ 15 ನಿಮಿಷ ಅವಧಿಯಲ್ಲಿ ತಲುಪಿದವು. ಕೆಲಕಾಲ ವಿಶ್ರಾಂತಿ ಬಳಿಕ ಅದೇ ಮಾರ್ಗವಾಗಿ ಬನ್ನಿಮಂಟಪದಿಂದ ಅರಮನೆಗೆ ವಾಪಸ್ ಆದವು.

ಇನ್ನೂ ಭಾನುವಾರ ಸಂಜೆ ಸಹ ಅಭಿಮನ್ಯು ನೇತೃತ್ವದಲ್ಲಿ ಗಜಪಡೆಯು ಅರಮನೆಯಿಂದ ಆಯುರ್ವೇದ ವೃತ್ತದವರೆಗೆ ಬರಿ ಮೈಯಲ್ಲೇ ನಡಿಗೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಈ ತಾಲೀಮಿನಲ್ಲಿ ಅಭಿಮನ್ಯು, ಧನಂಜಯ, ಮಹೇಂದ್ರ, ಭೀಮ, ಗೋಪಿ, ಕಂಜನ್, ವರಲಕ್ಷ್ಮಿ ಮತ್ತು ವಿಜಯ ಆನೆಗಳು ಮಾತ್ರ ಪಾಲ್ಗೆಂಡಿದ್ದವು. ಮಾಜಿ ಅಂಬಾರಿ ಆನೆ ಅರ್ಜುನ ಮಾತ್ರ ಸಂಜೆ ನಡಿಗೆ ತಾಲೀಮಿನಿಂದ ದೂರ ಉಳಿದು ವಿಶ್ರಾಂತಿ ಪಡೆಯುತ್ತಿತ್ತು.

ಇಂದು ಆನೆಗಳಿಗೆ ಪೂಜೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೆ.18 ರಂದು ದಸರಾ ಗಜಪಡೆಯ 9 ಆನೆಗಳಿಗೆ ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಪ್ರತಿ ವರ್ಷದಂತೆ ವಿಶೇಷ ಪೂಜೆ ಸಲ್ಲಿಸಲು ಅರಣ್ಯ ಇಲಾಖೆಯು ಸಿದ್ಧತೆ ನಡೆಸಿದೆ. ಎಲ್ಲಾ ಆನೆಗಳನ್ನು ಒಟ್ಟಿಗೆ ನಿಲ್ಲಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಬ್ಬು, ಬೆಲ್ಲ, ಹಣ್ಣು, ಮೊದಕ ನೀಡಲಾಗುತ್ತದೆ.

ತಮಿಳುನಾಡಿಗೆ ಈಗಲೂ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ: ಸಂಸದ ಪ್ರತಾಪ್ ಸಿಂಹ ಕಿಡಿ

ದಸರಾ ಆನೆಗಳಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಡಿಗೆ ತಾಲೀಮು ನಡೆಯುತ್ತಿದೆ. ಜೊತೆಗೆ ದಿನ ಬಿಟ್ಟು ದಿನ ಒಂದೊಂದು ಆನೆಗಳ ಮೈಮೇಲೆ ಮರಳು ಮೂಟೆ ಬಾರ ಹೊರಿಸಿ ತಾಲೀಮು ಮಾಡಲಾಗುತ್ತಿದೆ. ಮೊದಲು ಅರ್ಜುನ ಆನೆ, ಈಗ ಮಹೇಂದ್ರ ಆನೆಗೆ ಬಾರ ಹೊರಿಸಲಾಗಿದೆ. ಇನ್ನೂ ಧನಂಜಯ, ಗೋಪಿ ಮತ್ತು ಭೀಮ ಆನೆಗಳ ಮೇಲೂ ಬಾರ ಹೊರಿಸಿ ತಾಲೀಮು ನಡೆಸಲಾಗುವುದು.
- ಸೌರಭಕುಮಾರ್, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ