Asianet Suvarna News Asianet Suvarna News

ದೇಶದಲ್ಲಿ ಸಂವಿಧಾನಕ್ಕಿಂತ ಬೇರೆ ಯಾವ ಧರ್ಮವು ದೊಡ್ಡದಲ್ಲ: ಸಚಿವ ಮಹದೇವಪ್ಪ

ದೇಶದಲ್ಲಿ ಸಂವಿಧಾನಕ್ಕಿಂತ ಬೇರೆ ಯಾವ ಧರ್ಮವು ದೊಡ್ಡದಲ್ಲ. ನಂಬಿಕೆ, ಆಚಾರ-ವಿಚಾರಗಳು ಅವರವರಿಗೆ ಬಿಟ್ಟ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. 

No other religion is bigger than the Constitution in the country Says Minister HC Mahadevappa gvd
Author
First Published Sep 17, 2023, 11:59 PM IST

ಮೈಸೂರು (ಸೆ.17): ದೇಶದಲ್ಲಿ ಸಂವಿಧಾನಕ್ಕಿಂತ ಬೇರೆ ಯಾವ ಧರ್ಮವು ದೊಡ್ಡದಲ್ಲ. ನಂಬಿಕೆ, ಆಚಾರ-ವಿಚಾರಗಳು ಅವರವರಿಗೆ ಬಿಟ್ಟ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ನಗರದ ಕಾಂಗ್ರೆಸ್ಭವನದಲ್ಲಿ ಜಿಲ್ಲಾ ಕಾಂಗ್ರೆಸ್ಸಮಿತಿ ಕಾನೂನು ಮಾನವ ಹಕ್ಕುಗಳ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ತಿಮ್ಮಯ್ಯ ಅವರ ಅಧಿಕಾರ ಸ್ವೀಕಾರ ಹಾಗೂ ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂತದ್ದೆ ಬಟ್ಟೆ ಹಾಕಬೇಕು, ಇದು ನಮ್ಮ ದೇವರು, ಅದನ್ನೇ ಪೂಜಿಸಬೇಕು ಎಂದು ಬಲವಂತವಾಗಿ ಹೇಳುವ ಕೆಲಸ ಮಾಡಬಾರದು. 

ಅಸ್ಪೃಶ್ತೆ, ಅಸಮಾನತೆ ದೂರವಾಗಿ ಎಲ್ಲರನ್ನು ಸಮಾನವಾಗಿ ನೋಡುವ ಮತ್ತು ಸಮಾನತೆ ಇಲ್ಲದ ಧರ್ಮ ಧರ್ಮವೇ ಅಲ್ಲ ಎಂದು ಪ್ರತಿಪಾದಿಸಿದರು. ನಮ್ಮನ್ನು ಗುಲಾಮರಾಗಿ ನೋಡುತ್ತಿದ್ದವರು ಈಗಲೂ ಅದನ್ನೇ ಬಯಸುತ್ತಿದ್ದಾರೆ. ಅಸಮಾನತೆ ಇರಬೇಕು ಎಂದುಕೊಳ್ಳುತ್ತಾರೆ. ಆದರೂ ಧರ್ಮವೇ ಸುಪ್ರಿಂ ಅಂತ ಹೇಳಲು ಯಾವುದೇ ನೈತಿಕತೆಯೂ ಇಲ್ಲ. ಕಾನೂನಿನ ಅರಿವು ಪ್ರತಿಯೊಬ್ಬ ಪ್ರಜೆಗೂ ಇರಬೇಕು. ಮನುವಾದ, ಶೂದ್ರವಾದ, ದ್ರಾವಿಡ ಚಳವಳಿಯನ್ನು ಮೂಲೆಗುಂಪು ಮಾಡುವವರ ವಿರುದ್ಧ ದೊಡ್ಡ ಕಾನೂನಿನ ಚಳವಳಿ ನಡೆಯಬೇಕು ಎಂದು ಅವರು ಹೇಳಿದರು.

ತಮಿಳುನಾಡಿಗೆ ಈಗಲೂ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ: ಸಂಸದ ಪ್ರತಾಪ್ ಸಿಂಹ ಕಿಡಿ

ಕಾನೂನಿನ ಅರಿವು ನಮಗಿಲ್ಲದಿದ್ದರೆ ಕತ್ತಲೆಯಲ್ಲಿ ಬದುಕಬೇಕಾಗುತ್ತದೆ. ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಂದು ಸಂವಿಧಾನದ ತಳಹದಿಯಲ್ಲಿ ನಡೆಯಲಿದೆ. ಪ್ರಸ್ತುತ ದಿನಗಳಲ್ಲಿ ಗೊಂದಲ, ಗಾಳಿಸುದ್ದಿ, ಪಿಸುಮಾತುಗಳನ್ನು ಮುಂಚೂಣಿಗೆ ತಂದು ಜೀವಂತವಾಗಿರುವ ವಿಚಾರಗಳನ್ನು ಮರೆಮಾಚಿ ರಾಜಕೀಯವಾಗಿ ಲಾಭ ಪಡೆಯುವ ಕೆಲಸ ನಡೆಯುತ್ತಿದೆ. ದೇಶದ ಜನರು ಸಾಕ್ಷರರಾಗುವುದಕ್ಕೆ ಅನೇಕ ವರ್ಷಗಳು ಕಳೆದು ಹೋಯಿತು. ಇಂದಿಗೂ ಕಾನೂನಿನ ಅರಿವು ಸರಿಯಾಗಿ ಇಲ್ಲ ಎಂದರು.

ಕೆಲವು ಮಾಧ್ಯಮಗಳು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ. ಸತ್ಯವನ್ನು ಸುಳ್ಳು ಮತ್ತು ಸುಳ್ಳನ್ನು ಸತ್ಯವೆಂದು ಹೇಳುವ ಕೆಲಸ ಮಾಡುತ್ತಿವೆ. ಕಾನೂನು ಘಟಕ ಅಂದರೆ ಬುದ್ಧಿವಂತರು ಮತ್ತು ಪ್ರಜ್ಞಾವಂತರ ತಂಡ. ಸರ್ಕಾರದ ನೀತಿ ನಿರ್ಧಾರ, ಕಾನೂನು ಮತ್ತು ನಿಯಮಗಳನ್ನು ಗಮನಿಸಿ ಸರ್ಕಾರಕ್ಕೆ ಸಲಹೆ ಕೊಡಬೇಕು. ಪ್ರಜಾಸತ್ತಾತ್ಮಕ ಪರವಾಗಿ ಇರುವ ಕಾನೂನು ಸದಾ ಜನರ ಬೆಂಬಲಕ್ಕೆ ಇರಬೇಕು ಅಂದರೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಇರಬೇಕು ಎಂದರು.

ಎಂದಿಗೂ ಕಾನೂನು ಬಿಟ್ಟು ಹೋಗಬಾರದು. ಅಭಿವೃದ್ದಿ ಪರವಾಗಿ ಇರಬೇಕು. ಸರಿಯಿದೆ ಅಥವಾ ಸರಿಯಿಲ್ಲ ಅಂತ ಹೇಳಬೇಕು. ನೈತಿಕತೆ ವ್ಯಕ್ತಿತ್ವ ಮುಖ್ಯ. ಯಾರು ಯಾವ ಆಹಾರ, ಬಟ್ಟೆಯನ್ನು ಧರಿಸುವ ಸ್ವಾತಂತ್ರ್ಯ ಹೊಂದಿದ್ದರೂ ಅದನ್ನು ನಿಯಂತ್ರಿಸುವುದಕ್ಕೆ ಅವಕಾಶವಿಲ್ಲ. ಅಸಮಾನತೆ, ಅಸ್ಪಶ್ಯತೆ ಜೀವಂತವಾಗಿರುವಾಗ ಧರ್ಮವೇ ಸುಪ್ರೀಂ ಅಂತೇಳುವ ನೈತಿಕತೆ ಇಲ್ಲ ಎಂದು ಅವರು ಕಿಡಿಕಾರಿದರು.

ಒಂದು ದೇಶ- ಒಂದು ಚುನಾವಣೆ ಸ್ವಾಯತ್ತತೆ ಕಸಿಯುವ ಕೆಲಸ. ದೇಶದಲ್ಲಿ ಹಲವು ಸಂಸ್ಕೃತಿ, ಭಾಷೆ, ನಾಗರಿಕತೆಯನ್ನು ಹೊಂದಿದ್ದೂ ಏಕರೂಪ ನಾಗರಿಕ ವ್ಯವಸ್ಥೆ ತರಲು ಹೊರಟಿರುವುದು ಸರಿಯಲ್ಲ. ಒಂದು ದೇಶ-ಒಂದು ಚುನಾವಣೆ ಮಾಡುತ್ತೇನೆ ಎಂದು ಹೇಳುವ ಮೂಲಕ ಆಯಾಯ ರಾಜ್ಯಗಳ ಸ್ವಾಯತ್ತತೆ ಕಸಿಯುವ ಕೆಲಸ ಮಾಡಲಾಗುತ್ತಿದೆ. ನಮ್ಮ ತಂದೆಗೆ ಸರಿಯಾದ ವಿಳಾಸ ಎನ್ನುವುದು ಗೊತ್ತಿಲ್ಲದ ಸನ್ನಿವೇಶದಲ್ಲಿ ಸಿಂಧೂ ನಾಗರಿಕತೆಯಿಂದ ಬಂದವರಿಗೆ ವಿಳಾಸ ಎಲ್ಲಿಂದ ಬರುತ್ತದೆ ಎಂದು ಅವರು ಪ್ರಶ್ನಿಸಿದರು.

ಎನ್ಇಪಿಯು ಮತ್ತೆ ಮನುವಾದದ ಕಡೆಗೆ ಹೋಗುವಂತೆ ಇ. ಅಕ್ಷರ ಕಲಿಯುವರಿಗೆ ಕಾಯಿಸಿದ ಎಣ್ಣೆಯನ್ನು ಮೈಗೆ ಬಿಟ್ಟಂತೆ ಮತ್ತೆ ಮನುವಾದವನ್ನು ಎನ್ಇಪಿ ತಂದು ವಂಚಿಸುವ ಕೆಲಸ ಮಾಡಿದ್ದರು .ಅದಕ್ಕಾಗಿ,ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿ ತರುವ ಕೆಲಸ ಮಾಡುತ್ತಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಮಾತನಾಡಿ, ಕಾವೇರಿ ನೀರಿನ ವಿಚಾರದಲ್ಲಿ ವಕೀಲರು ತೀವ್ರ ಆಸಕ್ತಿ ವಹಿಸಬೇಕು. ರಾಜ್ಯದ ಕಾನೂನು ಘಟಕ ಕಾವೇರಿ ಉಳಿಸಬೇಕು. ಜಲಾಶಯದಲ್ಲಿ ನೀರು ಇಲ್ಲದ ಕಾರಣ ನ್ಯಾಯಾಲಯದ ಆದೇಶಗಳು ದೊಡ್ಡ ಆತಂಕವನ್ನುಂಟು ಮಾಡಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಮತ್ತು ಮತ್ತಷ್ಟು ಪಕ್ಷವನ್ನು ಸದೃಢಗೊಳಿಸಬೇಕು. ಲೋಕಸಭೆ, ಜಿಪಂ, ತಾಪಂ ಚುನಾವಣೆ ಗೆಲುವಿಗೆ ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಅವರು ಹೇಳಿದರು. 

ಪ್ರತಾಪ ಸಿಂಹ ಗೆದ್ದರೆ ನಾನು ಊರು ಬಿಟ್ಟು ಹೋಗುತ್ತೇನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಎರಡು ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಬಲತುಂಬಿಸುವ ಕೆಲಸ ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳ ಬೆಳವಣಿಗೆಗೆ ಗಮನಹರಿಸಿ ಕೆಲಸ ಮಾಡುತ್ತಿದ್ದೇನೆ ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನ, ವಕೀಲರಾದ ಸಿ.ಎಂ. ಜಗದೀಶ್, ಶಿವಣ್ಣೇಗೌಡ, ಎಂ. ಮಹದೇವಸ್ವಾಮಿ, ಸಿ. ಬಸವರಾಜು, ರಾಮಕೃಷ್ಣ, ಮಂಜುಳಾ ಮಾನಸ, ಎಚ್. ಅರವಿಂದ, ತಿಮ್ಮಚಾರಿ, ಸಿ. ಶೇಷಯ್ಯ, ಶಿವಕುಮಾರ್, ವೈದ್ಯನಾಥ್, ಎಂ. ಶಿವಪ್ರಸಾದ್, ಡಿ. ಸುರೇಶ್, ಸುರೇಶ್ ಪಾಳ್ಯ, ಎ.ಆರ್. ಕಾಂತರಾಜ್ ಮೊದಲಾದವರು ಇದ್ದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾನೂನು ಮಾನವ ಹಕ್ಕುಗಳ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ತಿಮ್ಮಯ್ಯ ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು.

Follow Us:
Download App:
  • android
  • ios