ತಮಿಳುನಾಡಿಗೆ ಈಗಲೂ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ: ಸಂಸದ ಪ್ರತಾಪ್ ಸಿಂಹ ಕಿಡಿ
ತಮಿಳುನಾಡಿಗೆ ಈಗಲೂ ಕದ್ದುಮುಚ್ವಿ ನೀರನ್ನು ಹರಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಡ್ಯಾಂಗೆ ಹೋಗಿ ನೋಡಿ, ಹೊರಹರಿವು ಪ್ರಮಾಣ ಪರೀಕ್ಷೆ ಮಾಡಿ.
ಮೈಸೂರು (ಸೆ.17): ತಮಿಳುನಾಡಿಗೆ ಈಗಲೂ ಕದ್ದುಮುಚ್ವಿ ನೀರನ್ನು ಹರಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಡ್ಯಾಂಗೆ ಹೋಗಿ ನೋಡಿ, ಹೊರಹರಿವು ಪ್ರಮಾಣ ಪರೀಕ್ಷೆ ಮಾಡಿ. ಈ ವಿಚಾರವಾಗಿ ನಾನು ಚಾಲೆಂಜ್ ಮಾಡುತ್ತೇನೆ. ಪ್ರತಿನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಸೆ.13 ರಿಂದ ನೀರು ಹರಿಸಲಾಗುತ್ತಿದೆ. ನಾವು ಈ ವಿಚಾರವಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಹೇಮಾವತಿ ಡ್ಯಾಂನಲ್ಲಿ 12 ಟಿಎಂಸಿ ನೀರು ಇದೆ. ಹಾರಂಗಿ, ಕಬಿನಿ ಡ್ಯಾಂಗಳು ಬರಿದಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಕೊಡಬಾರದು. ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮೋದಿ ಬದಲು ಸ್ಟಾಲಿನ್ ಕರೆ ಮಾಡಲಿ: ಸರ್ವ ಪಕ್ಷ ಸಭೆಗೆ ಪ್ರಧಾನಿ ಟೈಮ್ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಒಬ್ಬ ಜನ ಪ್ರತಿನಿಧಿಗೆ ಸಾಮಾನ್ಯ ಜ್ಞಾನ ಇರಬೇಕು. ಮೋದಿ ಅಲ್ಲ, ಮನಮೋಹನ್ ಸಿಂಗ್ ಬಂದರು ಈ ವಿಚಾರದಲ್ಲಿ ಏನು ಮಾಡೋಕಾಗಲ್ಲ. ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಡಿಸೈಡ್ ಆಗಬೇಕು ಎಂದರು. ಸಿದ್ದರಾಮಯ್ಯ ಅವರು ಮೋದಿ ಬದಲು ಸ್ಟಾಲಿನ್ ಅವರಿಗೆ ಕರೆ ಮಾಡಲಿ. ನೀರು ಬಿಡೋದಕ್ಕೆ ಆಗಲ್ಲ ಎಂದು ಹೇಳಲಿ. ಇವರಿಗೆ ಲೋಕಸಭಾ ಚುನಾವಣೆ ಮುಖ್ಯನಾ? ರಾಜ್ಯದ ಜನರ ಹಿತಸಾಕ್ತಿ ಮುಖ್ಯನಾ? ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯ ರೈತರ ಹಿತ ಬೇಕಾಗಿಲ್ಲ. ಸ್ಟಾಲಿನ್ ಅವರ ಡಿಎಂಕೆ ಜೊತೆ ಮೈತ್ರಿ ಮುಖ್ಯ ಎಂದು ಅವರು ದೂರಿದರು.
ಪ್ರತಾಪ ಸಿಂಹ ಗೆದ್ದರೆ ನಾನು ಊರು ಬಿಟ್ಟು ಹೋಗುತ್ತೇನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ತಮಿಳುನಾಡಿಗೆ ನೀರು ಬಿಡಬೇಡಿ. ವಾಸ್ತವ ಸ್ಥಿತಿಯನ್ನು ಕೋರ್ಟ್ ಮುಂದಿಡಿ ಎಂದು ಸರ್ಕಾರಕ್ಕೆ ನಾನು ಹೇಳಿದ್ದೆ. ಮೊನ್ನೆಯ ಸಭೆಯಲ್ಲಿ ಅದನ್ನೇ ಹೇಳಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ಸ್ಟಾಲಿನ್ ಜೊತೆ ಒಳ್ಳೆಯ ನಂಟಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸಲುವಾಗಿ ರಾಜ್ಯದ ರೈತರ ಹಿತ ಹಾಳು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ರಾಜ್ಯದ ಜನ 135 ಸೀಟು ಕೊಟ್ಟಿದ್ದಾರೆ. ಇನ್ನೂ 5 ವರ್ಷ ಯಾರು ಏನು ಮಾಡೋಕ್ಕಾಗಲ್ಲ ಎಂದುಕೊಂಡಿದ್ದಾರೆ. ಇದೇ ತರ ನೀರು ಬಿಟ್ಟರೆ ಬೆಂಗಳೂರು, ಮೈಸೂರು, ಮಂಡ್ಯ ಎಲ್ಲಾ ಕಡೆ ಕುಡಿಯುವ ನೀರಿಗೂ ಹಾಹಾಕಾರ ಬರುತ್ತೆ. ತಮಿಳುನಾಡಿನಲ್ಲಿ 4 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಬೆಳೆದಿದ್ದಾರೆ. ಅಳತೆಗೆ ಮೀರಿದ ಬೆಳೆ ಬೆಳೆದಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಇದನ್ನು ಮನವರಿಕೆ ಮಾಡಿಕೊಡಬೇಕು. ರಾಜ್ಯಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.