ಗಿರಿ ಶ್ರೇಣಿ ಹಚ್ಚ ಹಸಿರ ಸೊಬಗಿನಿಂದ ನವವಧುವಿನಂತೆ ಸಿಂಗಾರ: ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಪ್ರವಾಸಿಗರ ಡ್ಯಾನ್ಸ್
ಹಚ್ಚ ಹಸಿರಿನಿಂದ ನಳನಳಿಸ್ತಿರೋ ಚಂದ್ರದ್ರೋಣ ಪರ್ವತಗಳ ಸಾಲು ಸಾಲು. ರಸ್ತೆಯ ತುಂಬೆಲ್ಲಾ ಮಂಜಿನದ್ದೇ ಆಟ ಹುಡುಗಾಟ. ಮಲೆನಾಡ ಸೆರಗಲ್ಲಡಗಿರೋ ಕಾಫಿನಾಡು ಚಿಕ್ಕಮಗಳೂರಿನ ಬೆಟ್ಟಗುಡ್ಡಗಳು ಹಚ್ಚ ಹಸಿರ ಸೊಬಗಿನಿಂದ ನವವಧುವಿನಂತೆ ಸಿಂಗಾರಗೊಂಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.14): ಚೆಲುವನ್ನೇ ಮೈಗತ್ತಿಕೊಂಡಿರೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ನಳನಳಿಸ್ತಿರೋ ಚಂದ್ರದ್ರೋಣ ಪರ್ವತಗಳ ಸಾಲು ಸಾಲು. ರಸ್ತೆಯ ತುಂಬೆಲ್ಲಾ ಮಂಜಿನದ್ದೇ ಆಟ ಹುಡುಗಾಟ. ಮಲೆನಾಡ ಸೆರಗಲ್ಲಡಗಿರೋ ಕಾಫಿನಾಡು ಚಿಕ್ಕಮಗಳೂರಿನ ಬೆಟ್ಟಗುಡ್ಡಗಳು ಹಚ್ಚ ಹಸಿರ ಸೊಬಗಿನಿಂದ ನವವಧುವಿನಂತೆ ಸಿಂಗಾರಗೊಂಡಿದೆ. ಅದರಲ್ಲೂ ಭೂಲೋಕದ ಸ್ವರ್ಗವೆನಿಸಿಕೊಂಡಿರೋ ಮುಳ್ಳಯ್ಯನಗಿರಿಯಂತೂ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ವೀಕ್ ಎಂಡ್ ಹಿನ್ನೆಲೆ ಸಾವಿರಾರು ವಾಹನಗಳ ಆಗಮನ. ಅಪಘಾತಗಳು. ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಪ್ರವಾಸಿಗರ ಡ್ಯಾನ್ಸ್. ಕಾಫಿನಾಡ ಮುಳ್ಳಯ್ಯನಗಿರಿಯಲ್ಲಿಂದು ಮತ್ತೊಂದು ಲೋಕ ಅನಾವರಣಗೊಂಡಿದೆ.
ಮುಳ್ಳಯ್ಯನಗಿರಿಯಲ್ಲಿಂದು ಮತ್ತೊಂದು ಲೋಕ ಅನಾವರಣ: ಸೃಷ್ಟಿಯ ಸೊಬಗು ನಿಜಕ್ಕೂ ಅತ್ಯದ್ಭುತ. ನೈಸರ್ಗಿಕ ಸೊಬಗನ್ನೆ ತನ್ನ ಮುಡಿಯಲ್ಲಿ ಮೆತ್ತಿಕೊಂಡಿರೋ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತ್ತಿದೆ. ಸಮುದ್ರಮಟ್ಟದಿಂದ 6,318 ಅಡಿ ಎತ್ತರದಲ್ಲಿರೋ ಮುಳ್ಳಯ್ಯನಗಿರಿ ರಾಜ್ಯದ ಎತ್ತರದ ಗಿರಿಶಿಖರವೆಂಬ ಖ್ಯಾತಿಗಳಿಸಿದೆ. ಇಲ್ಲಿನ ನಿಸರ್ಗದ ಸವಿಯನ್ನ ಸವಿಯಲು ಗಿರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರ ದಂಡೇ ಹರಿದು ಬರುತ್ತೆ. ಕಾಡ್ಗಿಚ್ಚಿನಿಂದಾಗಿ ಸುಟ್ಟು ಕರಕಲಾಗಿದ್ದ ಗಿರಿಶಿಖರಗಳಲ್ಲಿ ಹಸಿರ ಹುಲ್ಲನ್ನ ಹಾಸಿದಂತಿದೆ. ಗಿಡ ಮರಗಳು ಚಿಗುರೊಡೆದು ಹಚ್ಚ ಹಸಿರಿನಿಂದ ನಳನಳಿಸೋಕೆ ಶುರುವಾಗಿವೆ.
ಅದರಲ್ಲೂ ಮಲೆನಾಡಿನ ಚಿಕ್ಕಮಗಳೂರು ಪ್ರವಾಸಿಗರ ಪಾಲಿಗಂತೂ ಸ್ವರ್ಗವೆನಿಸುತ್ತಿದೆ. ಇನ್ನು ಮುಂಜಾನೆಯ ಮಂಜಿನ ಆಟವನ್ನ ನೋಡೋಕೆ ಮತ್ತಷ್ಟು ಖುಷಿ. ಕ್ಷಣಾರ್ಧದಲ್ಲಿ ವಾತಾವರಣವನ್ನೇ ಬದಲು ಮಾಡೋ ಶಕ್ತಿ ಈ ಮಂಜಿಗಿರೋದು ಪ್ರಕೃತಿಯಲ್ಲಡಗಿರೋ ಶಕ್ತಿ. ನಿನ್ನೆ ಮತ್ತು ಇಂದು ಕಡೂ ಸಾವಿರಾರು ಪ್ರವಾಸಿಗರು ಮುಳ್ಳಯ್ಯನಗಿರಿಗೆ ಭೇಟಿ ನೀಡಿದ್ದು ಟ್ರಾಫಿಕ್ ಜಾಮ್ ನಿಂದ ಪ್ರವಾಸಿಗರು ಪರದಾಡಿದ್ದಾರೆ. ಗಿರಿ ಭಾಗದಲ್ಲಿ ಅಲ್ಲಲ್ಲೇ ಅಪಘಾತಗಳು ಸಂಭವಿಸಿದ್ದು ಪ್ರವಾಸಿಗರು ಟ್ರಾಫಿಕ್ ಜಾಮ್ ನಿಂದ ಪರದಾಡಿದ್ದಾರೆ.
ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಪ್ರವಾಸಿಗರ ಡ್ಯಾನ್ಸ್: ಗಿರಿ ತಪ್ಪಲಿನ ಮಳೆ, ಮಂಜು, ಕುಳಿರ್ಗಾಳಿಯ ಅಹ್ಲಾದಕರ ವಾತಾವರಣದ ಮುಂದೆ ಟ್ರಾಫಿಕ್ ಜಾಮ್ ಸಮಸ್ಯೆ ಅನ್ನಿಸಲೇ ಇಲ್ಲ. ವಾಹನಗಳು ನಿಂತ ಕಡೆಯೇ ಕೆಳಗಿಳಿದು ಕುಣಿದು ಕುಪ್ಪಳಿಸಿದ ಪ್ರವಾಸಿಗರು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಕೇಕೆ ಹಾಕಿದರು. ನಿಂತಲ್ಲೇ ರೀಲ್ಸ್ ಮಾಡಿ ಮುಂಗಾರಿನ ಸೌಂದರ್ಯವನ್ನು ಆಸ್ವಾಧಿಸಿದರು.ತಮಿಳುನಾಡು, ಕೇರಳ ರಾಜ್ಯಗಳಿಂದ ಆಗಮಿಸಿದ್ದ ಪ್ರವಾಸಿಗರ ತಂಡ ದಾರಿಯುದಕ್ಕೂ ಕುಣಿದು, ಸುರಿಯುವ ಮಳೆಗೆ ಮೈಯೊಡ್ಡಿ, ಕೈಗೆ ಸಿಗುವಂತೆ ತಲೆಯ ಮೇಲೆ ಹಾದುಹೋಗುವ ಮೋಡದ ರಾಶಿಯಕಡೆಗೆ ನೆಗೆದು ಕ್ಯಾಮೆರಾಗೆ ಫೋಸ್ ನೀಡುತ್ತಿದ್ದುದು ಸಾಮಾನ್ಯವಾಗಿತ್ತು.
ಸೌಂದರ್ಯವನ್ನು ಕಣ್ತುಂಬಿಕೊಳ್ಳಲೇ ಬೇಕೆಂಬ ಪಣ: ನಿರಂತರ ಮಳೆ ಕಾರಣ ಪ್ರವಾಸಿ ತಾಣಗಳು ಹಚ್ಚಹಸಿರಿನಿಂದ ಕಂಗೊಳಿಸುವೆ. ಜಲಪಾತಗಳು ಮೈದುಂಬಿಕೊಂಡು ಕೈಬೀಸಿ ಕರೆಯುತ್ತಿವೆ. ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನ ಗಿರಿ, ಮಾಣಿಕ್ಯಾಧಾರಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಏಕ ಕಾಲದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರದಾಟದರು. . ಎಲ್ಲಾ ತಾಣಗಳಲ್ಲಿ ಹತ್ತಾರು ಪೊಲೀಸರ ನಿಯೋಜಿಸಲಾಗಿದೆ.
ಬ್ಲ್ಯಾಕ್ ಗೌನ್‌ನಲ್ಲಿ ಕಂಗೊಳಿಸಿದ ಕೃತಿ ಶೆಟ್ಟಿ: ಟಾಲಿವುಡ್‌ನ ಐರನ್ ಲೆಗ್ ಹೀರೋಯಿನ್ ಎಂದ ಫ್ಯಾನ್ಸ್
ಮುಂಗಾರಿನ ಮುದ ಅನುಭವಿಸಲೇ ಬೇಕೆಂಬ ಇರಾದೆಯೊಂದಿಗೆ ಬಂದಿರುವ ಪ್ರವಾಸಿಗರು ಕಷ್ಟವಾದರೂ ಪರವಾಗಿಲ್ಲ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲೇ ಬೇಕೆಂಬ ಪಣ ತೊಟ್ಟು ಬಂದಿರುವುದಾಗಿ ಹೇಳುತ್ತಾರೆ.ಪ್ರಕೃತಿಯ ಮಡಿಲಲ್ಲಿ ವಿಭಿನ್ನವಾಗಿ ಕಂಡುಬರೋ ಬೆಟ್ಟಗುಡ್ಡಗಳೊಳಗಿನ ಐಸಿರಿ ಮುಳ್ಳಯ್ಯನಗಿರಿಯಲ್ಲಿ ಅನಾವರಣಗೊಳ್ಳಲಿದೆ. ಕ್ಷಣಕ್ಕೊಮ್ಮೆ ಬದಲಾಗೋ ವಿಶಿಷ್ಠ ಹವಾಗುಣ ನೋಡುಗನ ಮೈಮನ ತಣಿಸೋದ್ರಲ್ಲಿ ಅನುಮಾನವಿಲ್ಲ. ಇಲ್ಲಿನ ಪ್ರಕೃತಿಯ ಸೊಬಗು ಪ್ರವಾಸಿಗರನ್ನು ಮೂಕವಿಸ್ಮತರನ್ನಾಗಿಸ್ತಿದೆ. ಅದೆನೇ ಇದ್ರೂ, ಒಂದು ಕ್ಷಣ ಎಲ್ಲವನ್ನು ಮರೆತ ಜನಸಾಮಾನ್ಯರು ಪ್ರಕೃತಿಯ ಸೊಬಗನ್ನ ಭಾವಪರವಶರಾಗಿ ವೀಕ್ಷಣೆ ಮಾಡಿದರು.