ಉಡುಪಿ (ಫೆ.08):  ತಾನು ಭಿಕ್ಷೆ ಬೇಡಿ ಹೊಟ್ಟೆತುಂಬಿಸಿ, ಉಳಿದ ಹಣವನ್ನು ಒಟ್ಟು ಮಾಡಿ ಕೂಡಿಟ್ಟಿದ್ದ 1 ಲಕ್ಷ ರು.ಗಳನ್ನು ಇತ್ತೀಚೆಗೆ ಇಲ್ಲಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಾಲಯದ ಅನ್ನದಾನಕ್ಕೆ ದೇಣಿಗೆ ನೀಡಿ ಸುದ್ದಿಯಾದ 80ರ ಅಜ್ಜಿ ಯಾನೆ ಅಶ್ವತ್ಥಮ್ಮ ಅವರು, ಈ ಮೊದಲೂ ಅನೇಕ ದೇವಾಲಯಗಳಿಗೆ ಲಕ್ಷ ಲಕ್ಷ ರು. ದೇಣಿಗೆ ನೀಡಿದ್ದು ಇದೀಗ ಬೆಳಕಿಗೆ ಬಂದಿದೆ.

ಮೂಲತಃ ಮೈಸೂರಿನವರಾದ ಅಶ್ವತ್ಥಮ್ಮ, ನಾಟಕ ಕಂಪನಿಯ ಮಾಲೀಕರಾಗಿದ್ದ ಅವರ ಪತಿ ನಿಧನ ನಂತರ ಅವರು ಸಾಲಿಗ್ರಾಮಕ್ಕೆ ಬಂದು ಭಿಕ್ಷೆ ಭೇಡಿ, ಅಂಗಡಿ, ಮನೆ, ಜಗಲಿಗಳ ಮೇಲೆ ಮಲಗಿ ಜೀವನ ಸಾಗಿಸುತ್ತಿದ್ದಾರೆ.

ಯಾರದೇ, ಯಾವುದೇ ಗೋಜಿಗೆ ಹೋಗದೆ, ಬಟ್ಟೆಬರೆ, ಸ್ನಾನಾದಿ, ಪೂಜೆಗಳಿಂದ ಅತ್ಯಂತ ಶಿಸ್ತುಬದ್ಧ ಜೀವನ ಸಾಗಿಸುವ ಅವರನ್ನು ಕಂಡರೆ ಸ್ಥಳೀಯರು ಅಜ್ಜಿ ಎಂದು ಗೌರವದಿಂದ ಕರೆಯುತ್ತಾರೆ. ತನ್ನ ಹೊಟ್ಟೆಪಾಡಿಗಿಂತ ಹೆಚ್ಚು ಭಿಕ್ಷೆಯಿಂದ ಹಣ ಸಂಗ್ರಹವಾಗುವುದರಿಂದ ಅವರು ಅದನ್ನು ಒಂದೆಡೆ ಸಂಗ್ರಹಿಸಿಡುತ್ತಾರೆ.

ವೃದ್ಧ ಭಿಕ್ಷುಕಿಯಿಂದ ಸಾಲಿಗ್ರಾಮ ದೇವಾಲಯಕ್ಕೆ 1ಲಕ್ಷ ದೇಣಿಗೆ ! .

ಹೀಗೆ ಸಂಗ್ರಹಿಸಿದ 1.50 ಲಕ್ಷ ರು.ಗಳನ್ನು ಕಂಚಗೋಡು ದೇವಸ್ಥಾನ, 1 ಲಕ್ಷ ರು.ಗಳನ್ನು ಶಬರಿಮಲೆ ಪಂಪ ದೇವಸ್ಥಾನಕ್ಕೆ ಮತ್ತು 1.50 ಲಕ್ಷ ರು.ಗಳನ್ನು ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಮತ್ತು ಇತರ ದೇವಾಲಯಗಳಿಗೂ ಸೇರಿ 5 ಲಕ್ಷ ರು.ಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಇದೀಗ ಉಡುಪಿಯ ಸಾಲಿಗ್ರಾಮ ದೇವಸ್ಥಾನಕ್ಕೆ 1 ಲಕ್ಷ ರು. ನೀಡಿದ್ದಾರೆ. ಪ್ರತಿವರ್ಷವೂ ಸ್ಥಳೀಯ ಅಯ್ಯಪ್ಪ ವೃತಧಾರಿಗಳೊಂದಿಗೆ ತಾವೂ ಮಾಲೆ ಧರಿಸಿ, ತಮ್ಮದೇ ಖರ್ಚಿನಲ್ಲಿ ಶಬರಿಮಲೆಗೆ ಹೋಗಿ ಬರುತ್ತಾರೆ.

ಸಾಲಿಗ್ರಾಮ ದೇವಸ್ಥಾನಕ್ಕೆ ದೇಣಿಗೆ ನೀಡಿದ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ನೋಡಿಯೂ ಸ್ಥಿತಪ್ರಜ್ಞರಾಗಿರುವ ಅವರು ಭಿಕ್ಷಾಟನೆ ನಿಲ್ಲಿಸಿಲ್ಲ. ಶನಿವಾರ ಉಡುಪಿಯ ಆಸರೆಯ ಬೆಳಕು ಚಾರಿಟಿ ಸಂಸ್ಥೆ ಅವರನ್ನು ಹುಡುಕಿಕೊಂಡು ಹೋದಾಗ ಅವರು ಭಿಕ್ಷಾಟನೆಯಲ್ಲಿ ನಿರತರಾಗಿದ್ದರು. ಅವರು ಎಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಮಧ್ಯಾಹ್ನದವರೆಗೆ ಸಾಲಿಗ್ರಾಮದ್ಯಂತ ಹುಡುಕಬೇಕಾಯಿತು. ಬಳಿಕ, ಆಸರೆಯ ಬೆಳಕು ಸಂಸ್ಥೆಯ ನಯನಾ ಗಣೇಶ್‌, ರಾಜೇಶ್‌ ಕುಂದರ್‌, ರವಿ ಪಡುಕೆರೆ ಅವರು ದೇವಳದ ಶಿವರಾಮ ಉಡುಪ ಅವರ ಉಪಸ್ಥಿತಿಯಲ್ಲಿ ಅಜ್ಜಿಯನ್ನು ಸನ್ಮಾನಿಸಿದರು.

ದೇವಾಲಯಕ್ಕೆ ಬರುವ ಜನರ ಹೊಟ್ಟೆಹಸಿವು ನೀಗಿಸಲು ಮತ್ತು ಕೊರೋನಾ ವೈರಸ್‌ ದೂರವಾಗಲಿ ಎಂದು ಪ್ರಾರ್ಥಿಸಿ ದೇವಾಲಯಕ್ಕೆ 1 ಲಕ್ಷ ರು. ದೇಣಿಗೆ ನೀಡಿದ್ದೇನೆ. ತನ್ನ ಕೈಕಾಲು ಗಟ್ಟಿಇರುವರೆಗೆ ಭಿಕ್ಷೆ ಬೇಡುತ್ತೇನೆ, ದಾನ ಮಾಡುತ್ತೇನೆ ಎಂದವರು ಹೇಳಿದ್ದಾರೆ.