Asianet Suvarna News Asianet Suvarna News

ಹಸುಗೂಸು ಕಣ್ಣೆದುರೇ ಇದ್ದರೂ ಎತ್ತಿಕೊಳ್ಳಲಾಗದೆ ಡಿಸಿ ಸಂಕಟ

ಕಚೇರಿಯಲ್ಲಿ ಆಡಳಿತ ಕೆಲಸದ ಜೊತೆಗೆ ಮನೆಯಲ್ಲಿ ತಾಯಿಯಾಗಿ ನಿತ್ಯವೂ ತನ್ನ ಮಗುವಿನ ಆರೈಕೆ ಮಾಡುತ್ತಿದ್ದ ಮಂಗಳೂರಿನ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಅವರು ಕೊರೋನಾ ದೆಸೆಯಿಂದ ಕಳೆದ 21 ದಿನಗಳಿಂದ ಮಗುವಿನಿಂದ ದೂರವಿದ್ದಾರೆ. ಈ ಮೂಲಕ ಇತರರಿಗೆ ಮಾದರಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

Dakshina kannada dc who is under quarantine cant touch her 21 days old baby
Author
Bangalore, First Published Apr 14, 2020, 8:04 AM IST

ಮಂಗಳೂರು(ಏ.14): ಕಚೇರಿಯಲ್ಲಿ ಆಡಳಿತ ಕೆಲಸದ ಜೊತೆಗೆ ಮನೆಯಲ್ಲಿ ತಾಯಿಯಾಗಿ ನಿತ್ಯವೂ ತನ್ನ ಮಗುವಿನ ಆರೈಕೆ ಮಾಡುತ್ತಿದ್ದ ಮಂಗಳೂರಿನ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಅವರು ಕೊರೋನಾ ದೆಸೆಯಿಂದ ಕಳೆದ 21 ದಿನಗಳಿಂದ ಮಗುವಿನಿಂದ ದೂರವಿದ್ದಾರೆ. ಈ ಮೂಲಕ ಇತರರಿಗೆ ಮಾದರಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಹಾಗೆಂದು ಇವರು ಡಿಸಿ ಬಂಗಲೆ ಬಿಟ್ಟು ಹೊರಬಂದದ್ದಲ್ಲ. ತನಗೆ ಸರ್ಕಾರ ನೀಡಿದ ಡಿಸಿ ಬಂಗಲೆಯಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಮಂಗಳೂರಿನಲ್ಲಿ ಕೊರೋನೋ ಸೋಂಕು ಕಾಣಿಸಿದ ಮೊದಲ ದಿನದಿಂದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಅವರು ತನ್ನ ಎರಡು ವರ್ಷದ ಮಗುವಿನ ಲಾಲನೆ, ಪಾಲನೆಯಿಂದ ದೂರ ಉಳಿದುಕೊಂಡಿದ್ದಾರೆ. ಜಿಲ್ಲಾಧಿಕಾರಿಯಾಗಿ ಅಗತ್ಯ ಕಡೆಗಳಿಗೆ ಸುತ್ತಾಡಬೇಕಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ತಾವೇ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಸಿಂಧೂ ರೂಪೇಶ್‌ ಜೊತೆಗೆ ಅವರ ತಂದೆ, ತಾಯಿ ಇದ್ದಾರೆ. ಹಾಗಾಗಿ ಇವರು ಕರ್ತವ್ಯದಲ್ಲಿ ಇರುವಾಗ ದಿನಪೂರ್ತಿ ತಂದೆ, ತಾಯಿಯೇ ಮಗುವನ್ನು ನೋಡಿಕೊಳ್ಳುತ್ತಿದ್ದರು. ಸಿಂಧೂ ರೂಪೇಶ್‌ ಅವರು ಕಚೇರಿಯಿಂದ ಮನೆಗೆ ಬಂದ ಮೇಲೂ ಅಪ್ಪಿತಪ್ಪಿಯೂ ತನ್ನ ಮಗುವನ್ನು ಸ್ಪರ್ಶಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರು.

ನಾಳೆಯಿಂದ ಸರಳ, ಸ್ಮಾರ್ಟ್‌ ಲಾಕ್‌ಡೌನ್‌?: ಯಾರಿಗೆಲ್ಲಾ ಇರುತ್ತೆ ರಿಯಾಯಿತಿ?

ಅಳುವ ಮಗು, ಚುರ್‌ ಎನ್ನುವ ಹೆತ್ತ ಕರುಳು: ಮೊದಲ ಒಂದೆರಡು ದಿನಗಳ ಕಾಲ ಅಜ್ಜ-ಅಜ್ಜಿ ಜೊತೆಗೆ ಆಡವಾಡುತ್ತಾ ಇದ್ದ ಮಗಳಿಗೆ ತಾಯಿಯನ್ನು ಕಂಡಾಗ ಎತ್ತಿಕೊಂಡು ಮುದ್ದಾಡುತ್ತಾರೆ ಎಂಬ ತವಕ. ಆದರೆ ಎತ್ತಿಕೊಳ್ಳದೆ ದೂರದಿಂದಲೇ ಇರುವ ಅಮ್ಮನನ್ನು ಕಂಡು ಮಗು ಸಾಕಷ್ಟುಬಾರಿ ಅತ್ತು ರಂಪಾಟ ಮಾಡುತ್ತಿತ್ತು. ಆದರೆ ನಿರ್ವಾಹವಿಲ್ಲದೆ ಹೆತ್ತ ಕರುಳು ಚುರ್‌ ಎಂದರೂ ಮಗುವನ್ನು ನೋಡುತ್ತಲೇ ದೂರದಿಂದ ಸಮಾಧಾನಪಡಿಸುತ್ತಿದ್ದೆ ಎನ್ನುತ್ತಾರೆ ಸಿಂಧೂ ರೂಪೇಶ್‌.

ನಾನು ಜಿಲ್ಲಾಧಿಕಾರಿಯಾಗಿ ಹಲವು ಕಡೆ ಓಡಾಟ ನಡೆಸಬೇಕಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಇರುವವರಿಗೆ ಸೋಂಕು ತಟ್ಟದೇ ಇರಬಹುದು. ಆದರೆ ಸೋಂಕಿನ ಭೀತಿಯನ್ನು ನಿರಾಕರಿಸಲಾಗದು. ಹಾಗಿರುವಾಗ ಮನೆಯಲ್ಲೇ ನಾನೇ ಸ್ವತಃ ಅಂತರವನ್ನು ಕಾಯ್ದುಕೊಂಡು ಪ್ರತ್ಯೇಕ ನಿಗಾದಲ್ಲಿ ಇದ್ದೇನೆ. ಕೊರೋನಾ ಸೋಂಕಿನ ಪ್ರಮಾಣ ಮತ್ತಷ್ಟುಹೆಚ್ಚಾಗಿರುವುದು, ಲಾಕ್‌ಡೌನ್‌ ವಿಸ್ತರಣೆಯಾಗಿರುವುದರಿಂದ ನನ್ನ ಮಗುವನ್ನು ಶನಿವಾರ ಪತಿ ಇರುವಲ್ಲಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದೇನೆ ಎಂದು ಸಿಂಧೂ ರೂಪೇಶ್‌ ಹೇಳುತ್ತಾರೆ.

ಲಾಕ್‌ಡೌನ್‌: ತಾಯಿ ನಾಯಿ ಸೇರಿ 7 ಮರಿಗಳು ಹಸಿವಿನಿಂದ ಸಾವು

ಇವರಂತೆ ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಅವರು ಕೂಡ ತನ್ನ ಐದು ವರ್ಷದೊಳಗಿನ ಇಬ್ಬರು ಮಕ್ಕಳೊಂದಿಗೆ ಬೆರೆಯುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ರೂಪಾ ಅವರು ತನ್ನ ಮಕ್ಕಳನ್ನು ವಾರದ ಹಿಂದೆಯೇ ಮೈಸೂರಿನ ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಎಳೆಯ ಮಕ್ಕಳನ್ನು ಸಲಹುವ ಕಷ್ಟನನಗೆ ಮಾತ್ರವಲ್ಲ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಮಹಿಳೆಯರಿಗೂ ಇದೆ. ಅವರೆಲ್ಲರಿಗೂ ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೇನೆ. ತಾಯಂದಿರು ಎಲ್ಲವನ್ನೂ ನಿಭಾಯಿಸಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

-ಆತ್ಮಭೂಷಣ್‌

Follow Us:
Download App:
  • android
  • ios