ನಾಳೆಯಿಂದ ಸರಳ, ಸ್ಮಾರ್ಟ್ ಲಾಕ್‌ಡೌನ್?: ಯಾರಿಗೆಲ್ಲಾ ಇರುತ್ತೆ ರಿಯಾಯಿತಿ?
ಸ್ಮಾರ್ಟ್ ಲಾಕ್‌ಡೌನ್‌ಗೆ ಸರ್ಕಾರ ಕ್ರಮ?| ಸೋಂಕು ಕಮ್ಮಿ ಇರುವ ಕಡೆ ನಿರ್ಬಂಧ ಕೊಂಚ ಸಡಿಲ, ಸೋಂಕಿರುವ ಕಡೆ ಮತ್ತಷ್ಟು ಬಿಗಿ| ಸ್ಮಾರ್ಟ್ ಲಾಕ್‌ಡೌನ್ ಬಗ್ಗೆ ಲಂಡನ್ ಸಂಸ್ಥೆ ಪ್ರಾತ್ಯಕ್ಷಿಕೆ ವೀಕ್ಷಿಸಿದ ಸಿಎಂ, ಇಂದು ನಿರ್ಧಾರ
ಬೆಂಗಳೂರು(ಏ.14): ಕೊರೋನಾ ಸೋಂಕು ತಡೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದ 21ದಿನಗಳ ಲಾಕ್‌ಡೌನ್ ಏ.14ರ ಮಂಗಳವಾರ ಅಂತ್ಯಗೊಳ್ಳಲಿದೆ. ಏ.15ರಿಂದ ಮತ್ತೆ 15 ದಿನಗಳ ಕಾಲ ಲಾಕ್‌ಡೌನ್ ಮುಂದುವರಿಯುವುದು ಬಹುತೇಕ ನಿಶ್ಚಿತವಾಗಿದೆ. ಆದರೆ ಈ ಬಾರಿ ಸೋಂಕಿಲ್ಲದ ಪ್ರದೇಶಗಳಲ್ಲಿ ಕೊಂಚ ಸಡಿಲಿಕೆ ಇರುವ ಸಾಧ್ಯತೆ ಇದೆ. ನಿರ್ಬಂಧಗಳ ಜತೆಗೆ ಜನ ಸಾಮಾನ್ಯರು ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಸುಲಲಿತವಾಗಿ ಪಡೆಯುವಂತೆ ಮಾಡಲು ಏ. 15 ರಿಂದ ಸ್ಮಾರ್ಟ್ ಲೌಕ್‌ಡೌನ್ ಜಾರಿಯಾಗುವ ಸಾಧ್ಯತೆಯಿದೆ.
ಎರಡನೇ ಹಂತದ ಕ್ರಮವಾಗಿ ರಾಜ್ಯದಲ್ಲಿ ಏ.30ರವರೆಗೆ ಲಾಕ್‌ಡೌನ್ ವಿಸ್ತರಿಸಿದ್ದರೂ, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮೂಲಕ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವುದು ಈ ಸ್ಮಾರ್ಟ್ ಲಾಕ್‌ಡೌನ್‌ನ ಉದ್ದೇಶವಾಗಿದೆ. ಆದರೆ, ಯಾವುದೇ ಕಾರಣಕ್ಕೂ ಜನರು ರಸ್ತೆಯಲ್ಲಿ ಓಡಾಡಲು ಅವಕಾಶ ನೀಡದೆ, ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆ ಹಾಗೂ ವಾರ್ಡುಗಳಲ್ಲಿ ಲಾಕ್‌ಡೌನ್ ಮತ್ತಷ್ಟುಬಿಗಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಸ್ಮಾರ್ಟ್ ಲಾಕ್‌ಡೌನ್ ಕುರಿತು ಲಂಡನ್ ಮೂಲದ ಪಿಡಬ್ಲ್ಯೂಸಿ ಸಂಸ್ಥೆ ವರದಿ ಸಿದ್ಧಪಡಿಸಿದ್ದು ಈ ವರದಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಯನ್ನು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀಕ್ಷಿಸಿದರು. ಬಳಿಕ ತಮ್ಮ ಸಚಿವ ಸಂಪುಟದ ವಿವಿಧ ಸಹಯೋದ್ಯೋಗಿಗಳು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಸ್ಮಾರ್ಟ್ ಲಾಕ್‌ಡೌನ್ ಜಾರಿ ಕುರಿತ ಸಾಧಕ ಬಾಧಕಗಳ ಚರ್ಚೆಯನ್ನೂ ನಡೆಸಿದರು.
ಪೊಲೀಸರಿಗೆ 'ಬೆತ್ತಲೆ' ಸವಾಲು, ಬಟ್ಟೆ ಕಳಚಿ ಕಿತ್ತೆಸೆದು ಮಹಿಳೆಯ ಹುಚ್ಚಾಟ!
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಕಂಪನಿಯೊಂದು ರಾಜ್ಯದಲ್ಲಿ ಸ್ಮಾರ್ಟ್ ಲಾಕ್‌ಡೌನ್ ಸಂಬಂಧ ಪ್ರಾತ್ಯಕ್ಷಿಕೆ ನೀಡಿದೆ. ಇದನ್ನು ಜಾರಿಗೊಳಿಸುವ ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಹಾಗಾಗಿ ಒಟ್ಟಾರೆ ಲಾಕ್‌ಡೌನ್ ಸಡಿಲತೆ ಹಾಗೂ ಸ್ಮಾರ್ಟ್ ಲಾಕ್‌ಡೌನ್ ಕುರಿತ ಸ್ಪಷ್ಟಚಿತ್ರಣ ಮಂಗಳವಾರ ಹೊರಬೀಳುವ ಸಾಧ್ಯತೆ ಇದೆ.
ಸ್ಮಾರ್ಟ್ ಲಾಕ್‌ಡೌನ್ ಹೇಗಿರುತ್ತೆ?:
‘ಸ್ಮಾರ್ಟ್ ಲಾಕ್‌ಡೌನ್’ ಜಾರಿಯಾದರೆ ಅಗತ್ಯ ವಸ್ತುಗಳು ಜನರಿಗೆ ಮತ್ತಷ್ಟುಸುಲಭವಾಗಿ ಸಿಗುವಂತಾಗಲಿದೆ. ಹೂವು, ಹಣ್ಣು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ಮತ್ತಷ್ಟುಅಂಗಡಿಗಳನ್ನು ತೆರೆಯಲು ಅವಕಾಶ ಸಿಗಲಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಿನ ಜಾರಿಯಲ್ಲಿ ರಾಜಿ ಇರುವುದಿಲ್ಲ. ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆ, ವಾರ್ಡುಗಳಲ್ಲಿ (ಹಾಟ್ ಸ್ಪಾಟ್ ಏರಿಯಾ) ಲಾಕ್‌ಡೌನ್ ಕೊಂಚವೂ ಸಡಿಲಗೊಳಿಸಿದೆ ಮತ್ತಷ್ಟುಬಿಗಿಯಾಗಲಿದೆ.
ಉಳಿದಂತೆ ಬಸ್, ಮೆಟ್ರೋ, ಆಟೋ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಮಾಲ್, ಚಿತ್ರಮಂದಿರ, ಜಿಮ್, ಬಾರ್ ಅಂಡ್ ರೆಸ್ಟೋರೆಂಟ್ಸ್, ಶಾಪಿಂಗ್ ಮಾಲ್, ಹೋಟೆಲ್‌ಗಳನ್ನು ತೆರೆಯಲು ಅವಕಾಶ ಇರುವುದಿಲ್ಲ. ಆದರೆ, ಹೋಟೆಲ್‌ಗಳ ಮೂಲಕ ಆಹಾರ ಮತ್ತು ಎಂಎಸ್‌ಐಎಲ್‌ಗಳ ಮೂಲಕ ಮದ್ಯವನ್ನು ಪಾರ್ಸೆಲ್ ಮಾದರಿಯಲ್ಲಿ ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಅವಕಾಶ ಸಿಗಲಿದೆ. ಯಾವುದೇ ವಾಹನ, ಜನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಸಾರ್ವಜನಿಕ ಶೌಚಾಲಯವನ್ನು ಬಂದ್ ಆಗಿರುತ್ತವೆ. ಹಿರಿಯ ನಾಗರಿಕರ ಓಡಾಟವನ್ನು ಸಂಪೂರ್ಣ ನಿಷೇಧಿಸುವುದು, ಪಾನ್, ಗುಟ್ಕಾ, ಚ್ಯೂಯಿಂಗ್ ಗಮ್ ನಂತರ ಜಗಿದು ಉಗುಳುವ ಉತ್ಪನ್ನಗಳನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿರ್ಬಂಧಿಸಬೇಕೆಂದು ಸ್ಮಾರ್ಟ್ ಲಾಕ್‌ಡೌನ್ ಸಂಬಂಧ ಖಾಸಗಿ ಸಂಸ್ಥೆ ನೀಡಿರುವ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
ಇನ್ನು, ಕಾರ್ಖಾನೆಗಳು, ಐಟಿ ಬಿಟಿ ಕಂಪನಿಗಳಲ್ಲಿ ಅರ್ಧದಷ್ಟು(ಶೇ.50) ಉದ್ಯೋಗಿಗಳು ಸಾಮಾಜಿಕ ಅಂತರ ಹಾಗೂ ಇತರೆ ಸುರಕ್ಷಣಾ ಕ್ರಮಗಳನ್ನು ಅನುಸರಿಸಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡುವುದು. ಕಟ್ಟಡ ಕಾಮಗಾರಿಗಳ ಆರಂಭಕ್ಕೆ ಅವಕಾಶ ನೀಡುವ ಮೂಲಕ ಕಾರ್ಮಿಕರಿಗೆ ಕೆಲಸ ಒದಗಿಸುವುದು. ಕೃಷಿ ಉತ್ಪನ್ನಗಳ ಸರಬರಾಜು, ಸಾಗಾಣಿಕೆ, ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡುವುದು ಸ್ಮಾರ್ಟ್ ಲಾಕ್‌ಡೌನ್‌ನ ಉದ್ದೇಶವಾಗಿದೆ.
ದೇಶದಲ್ಲಿ ಕೊರೋನಾ 'ಮಹಾ' ಸ್ಫೋಟ: ಈ ರಾಜ್ಯದಲ್ಲಿ ಒಂದೇ ದಿನ 352 ಕೇಸ್
ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಸ್ಮಾರ್ಟ್ ಲಾಕ್‌ಡೌನ್ ಬಗ್ಗೆ ವಿವರಣೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು.
- ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
ಸ್ಮಾರ್ಟ್ ಲಾಕ್‌ಡೌನ್ ಹೇಗಿರುತ್ತೆ?
- ಸೋಂಕು ಹೆಚ್ಚು ಇರುವ ಹಾಟ್‌ಸ್ಪಾಟ್‌ಗಳಿಗೆ ಅನ್ವಯ ಇಲ್ಲ
- ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತಷ್ಟುಬಿಗಿ ಲಾಕ್‌ಡೌನ್
- ಬಸ್, ಮೆಟ್ರೋ, ಆಟೋ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಇಲ್ಲ
- ಮಾಲ್, ಚಿತ್ರಮಂದಿರ, ಜಿಮ್, ಬಾರ್, ಹೋಟೆಲ್ ಬಂದ್
- ಹಿರಿಯ ನಾಗರಿಕರ ಸಂಚಾರ ನಿಷೇಧ
- ಸಾರ್ವಜನಿಕ ಶೌಚಾಲಯ ಬಂದ್
- ಪಾನ್ ಮಸಲಾ, ಗುಟ್ಕಾ, ಚೂಯಿಂಗ್ ಗಮ್ ನಿರ್ಬಂಧ
- ಸೋಂಕು ಕಮ್ಮಿ ಇರುವೆಡೆ ಮತ್ತಷ್ಟುಅಗತ್ಯ ವಸ್ತು ಅಂಗಡಿ ಓಪನ್
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
- ಕಾರ್ಖಾನೆ, ಐಟಿ ಬಿಟಿ ಕಂಪನಿಗಳಲ್ಲಿ ಶೇ.50 ಉದ್ಯೋಗಿಗಳ ಕೆಲಸಕ್ಕೆ ಅವಕಾಶ
- ಕಟ್ಟಡ ನಿರ್ಮಾಣ ಕಾಮಗಾರಿಗೂ ಅವಕಾಶ
- ಕೃಷಿ ಉತ್ಪನ್ನ ಸರಬರಾಜು, ಕೃಷಿ ಚಟುವಟಿಕೆಗೆ ಷರತ್ತುಬದ್ಧ ಅನುಮತಿ
"