ಬಂಟ್ವಾಳದ ಪ್ರಸಿದ್ದ ದೇವಾಲಯ ಕಾರಿಂಜೇಶ್ವರ ಸುತ್ತ ಗಣಿಗಾರಿಕೆ ನಿಷೇಧ: ಸರ್ಕಾರಕ್ಕೆ ದ.ಕ ಡಿಸಿ ಪ್ರಸ್ತಾವನೆ
ಭಾರೀ ಗಣಿಗಾರಿಕೆಗೆ ನಲುಗಿ ಹೋಗಿದ್ದ ದ.ಕ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಕಾರಿಂಜೇಶ್ವರದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸುವಂತೆ ಕೊನೆಗೂ ದ.ಕ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೆಲವೇ ದಿನಗಳಲ್ಲಿ ಸರ್ಕಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಫೆ.5): ಭಾರೀ ಗಣಿಗಾರಿಕೆಗೆ ನಲುಗಿ ಹೋಗಿದ್ದ ದ.ಕ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಕಾರಿಂಜೇಶ್ವರದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸುವಂತೆ ಕೊನೆಗೂ ದ.ಕ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ದೇವಸ್ಥಾನದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ಸರ್ಕಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಕಾರಿಂಜೇಶ್ವರ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಗ್ಗ ಗ್ರಾಮದಲ್ಲಿ ಬರುವ ಪುಣ್ಯಕ್ಷೇತ್ರ. ಪೌರಾಣಿಕ ಶಿವ ಕ್ಷೇತ್ರಕ್ಕೆ ತನ್ನದೆ ಆದ ಐತಿಹ್ಯವಿದ್ದು, ದೇವಸ್ಥಾನಕ್ಕೆ ತೆರಳಲು ಬರೊಬ್ಬರಿ 355 ಮೆಟ್ಟಿಲು ಹತ್ತಿ ಬಳಿಕ ಶಿವ ದರ್ಶನ ಮಾಡಬೇಕು. ಇಂತಹ ಕ್ಷೇತ್ರದ ತಪ್ಪಿಲಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದು ಕ್ಷೇತ್ರದಲ್ಲಿರೋ ದೇವಸ್ಥಾನಕ್ಕೆ ಧಕ್ಕೆ ತರುತ್ತಿದೆ ಅನ್ನೊ ಆರೋಪ ಕೇಳಿ ಬಂದಿತ್ತು. ಈ ದೇವಸ್ಥಾನದ ಬುಡದಲ್ಲೇ ಭಾರೀ ಪ್ರಮಾಣದ ಸ್ಟೋಟಕ ಸಂಗ್ರಹ ಮಾಡಲಾಗಿದ್ದು, ಪೌರಾಣಿಕ ಶಿವ ಕ್ಷೇತ್ರದ ಬುಡದಲ್ಲೇ ಡೈನಾಮೆಟ್ ಇಟ್ಟು ಬಂಡೆ ಸ್ಟೋಟಿಸಲಾಗ್ತಿದೆ. ಇದ್ರ ಹಿಂದೆ ರಾಜಕೀಯ ಪ್ರಭಾವಿಗಳಿದ್ದಾರೆ ಅಂತ ಆರೋಪವಿದೆ.
ಇನ್ನು ದೇವಸ್ಥಾನದ ಗೋಮಾಳ ಜಾಗವನ್ನು ಅತಿಕ್ರಮಿಸಿ ಅಲ್ಲಿ ಅಕ್ರಮ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಧಕ್ಕೆಯಾಗುತ್ತಿದೆ. ದೇವಸ್ಥಾನ ಇರೋ ಬಂಡೆಯನ್ನು ಮತ್ತೊಂದು ಕಡೆ ಡೆಮಾಲಿಷ್ ಮಾಡುತ್ತಿದ್ದಾರೆ. ಜನವಸತಿ ಮತ್ತು ದೇವಸ್ಥಾನದ ಕೂಗಳತೆ ದೂರದಲ್ಲಿ ಭಾರೀ ಪ್ರಮಾಣದ ಡಿಟೋನೇಟರ್ ಸಂಗ್ರಹ ಮಾಡಲಾಗಿದೆ. ದೇವಸ್ಥಾನದ ಅಣತಿ ದೂರದಲ್ಲೇ ಭಾರೀ ಪ್ರಮಾಣದ ಡಿಟೋನೇಟರ್ ಸ್ಟೋರೇಜ್ ಮಾಡಲಾಗಿದೆ. ಕಲ್ಲು ಗಣಿಗಾರಿಕೆ ಸ್ಟೋಟಕ್ಕೆ ಹತ್ತಾರು ಮನೆಗಳಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿ ಗಣಿಗಾರಿಕೆ ನಿಷೇಧಕ್ಕೆ ಹಿಂದೂ ಪರ ಸಂಘಟನೆಗಳು ನಿರಂತರ ಹೋರಾಟ ನಡೆಸಿತ್ತು. ಇದೀಗ ಕೊನೆಗೂ ಹೋರಾಟದ ಫಲವಾಗಿ ಜಿಲ್ಲಾಡಳಿತ ಗಣಿಗಾರಿಕೆ ನಿಷೇಧಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ಗಣಿ ಇಲಾಖೆಗೆ ದ.ಕ ಜಿಲ್ಲಾಡಳಿತ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಏನಿದೆ?
ಶ್ರೀ ಕಾರಿಂಜೇಶ್ವರದ ಕ್ಷೇತ್ರ ಸಂರಕ್ಷಣೆಗಾಗಿ ಪರಿಸರದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಲು ಮತ್ತು ಪಾವಿತ್ರ್ಯತೆ ಉಳಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ತಿರುಲೇಶ್ ಬೆಳ್ಳೂರು, ಸಂಚಾಲಕರು, ಹಿಂದೂ ಜಾಗರಣ ವೇದಿಕೆ, ಬಂಟ್ವಾಳ ಇವರು ಕರ್ನಾಟಕ ಸರ್ಕಾರದ ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಿಗೆ ಉಲ್ಲೇಖ (1) ರಲ್ಲಿ ಮನವಿಯನ್ನು ಸಲ್ಲಿಸಿರುತ್ತಾರೆ. ಮಾನ್ಯ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳು ಸದರಿ ಮನವಿಯ ಕುರಿತು ಕೂಡಲೇ ಕ್ರಮ ಜರುಗಿಸಲು ಉಲ್ಲೇಖ (2) ರ ಪತ್ರದಲ್ಲಿ ನಿರ್ದೇಶನ ನೀಡಿರುತ್ತಾರೆ.
ಅಕ್ರಮ ಗಣಿಗಾರಿಕೆ: ದೂರು ನೀಡಿದ್ರೂ ಗಣಿ ಲೀಸ್ ನವೀಕರಣ: ಆರೋಪ
ಆದ ಕಾರಣ, ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳು, ಮಂಗಳೂರು ಉಪ ವಿಭಾಗ ಹಾಗೂ ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು ಇವರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕು: ಕಾವಳಮುಡೂರು ಗ್ರಾಮದಲ್ಲಿರುವ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ 02.00 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ, ರಕ್ಷಿತ ವಲಯವೆಂದು ಘೋಷಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ದಿನಾಂಕ 12-01-2023 ರಂದು ಜಂಟಿ ಸ್ಥಳ ಪರಿಶೀಲನೆ ಕೈಗೊಂಡು ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲು ನಿರಂತರವಾಗಿ 2008 ರಿಂದಲೂ ಕರ್ನಾಟಕ ಸರ್ಕಾರದ ಗೌರವಾನ್ವಿತ ರಾಜ್ಯಪಾಲರು, ಸನ್ಮಾನ್ಯ ಮುಖ್ಯಮಂತ್ರಿಯವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳು, ಮಾನ್ಯ ಸಚಿವರುಗಳು, ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕು ಆಡಳಿತಕ್ಕೆ, ಸ್ಥಳೀಯ ಪ್ರಾಧಿಕಾರಿಗಳಿಗೆ ಹಿಂದೂ ಜಾಗರಣಾ ವೇದಿಕೆ ಮತ್ತು ಸ್ಥಳೀಯ ನಾಗರೀಕರಿಂದ ಹೋರಾಟ, ಮನವಿ, ಆಕ್ಷೇಪಣೆ, ದೂರುಗಳನ್ನು ಸಲ್ಲಿಸುತ್ತಿರುವುದರಿಂದ ಶ್ರೀ ಕ್ಷೇತ್ರದ ಪಾವಿತ್ರತೆ ಮತ್ತು ಸಂರಕ್ಷಣೆಗಾಗಿ ಸ್ಥಳೀಯ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ಪರಿಸರ ಮಾಲಿನ್ಯವನ್ನು ತಡೆಯಲು ಶ್ರೀ ಕಾರಿಂಜೇಶ್ವರ ಕ್ಷೇತ್ರದ 02 ಕಿ.ಮೀ., ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ, ರಕ್ಷಿತ ವಲಯವೆಂದು ಸರ್ಕಾರವು ಘೋಷಿಸಲು ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಅಭಿಪ್ರಾಯಿಸಿ ಜಂಟಿ ಸ್ಥಳ ಪರಿಶೀಲನಾ ವರದಿಯೊಂದಿಗೆ ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು ಇವರು ಕ್ರೂಢೀಕೃತ ವರದಿಯನ್ನು ಉಲ್ಲೇಖ (4) ರಲ್ಲಿ ಸಲ್ಲಿಸಿರುತ್ತಾರೆ.
Mining Effect ಬಂಟ್ವಾಳ ಕಾರಿಂಜೇಶ್ವರನಿಗೆ ಆಪತ್ತು, ಉರುಳಿಬಿದ್ದ ಬೃಹತ್ ಬಂಡೆ!
ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನಲ್ಲಿರುವ ಪಾರ್ವತಿ ಪರಮೇಶ್ವರರ ಆವಾಸಸ್ಥಾನವಾದ ಶ್ರೀಕಾರಿಂಜೇಶ್ವರ ದೇವಾಲಯವು ಪುರಾಣ ಪ್ರಸಿದ್ಧ ಸ್ಥಳವಾಗಿದ್ದು, ಶ್ರೀ ಕ್ಷೇತ್ರದ ಪಾವಿತ್ರತೆ ಮತ್ತು ಸಂರಕ್ಷಣೆಗಾಗಿ ಸ್ಥಳೀಯ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೇವಾಲಯದ ಸುತ್ತಮುತ್ತಲಿನ 02.00 ಕಿ.ಮೀ. ವ್ಯಾಪ್ತಿಯನ್ನು ಗಣಿಗಾರಿಕೆ ಚಟುವಟಿಕೆಗಳ ನಿಷೇಧಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.