Gruha Lakshmi scheme success story: ಬಂಟ್ವಾಳದ ಶಕುಂತಳಾ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಮೂರು ವರ್ಷಗಳ ಕಾಲ ಉಳಿತಾಯ ಮಾಡಿದ್ದಾರೆ. ಈ 72 ಸಾವಿರ ರೂ. ಹಣದೊಂದಿಗೆ ಕುಟುಂಬದ ಉಳಿತಾಯವನ್ನೂ ಸೇರಿಸಿ ಸ್ವಂತ ವಸ್ತ್ರಮಳಿಗೆಯನ್ನು ಆರಂಭಿಸಿದ್ದಾರೆ.
ಬಂಟ್ವಾಳ: ತಿಂಗಳಿಗೆ ಬರುತ್ತಿದ್ದ 2 ಸಾವಿರ ರು.. ಅಷ್ಟೇನೂ ದೊಡ್ಡ ಮೊತ್ತವಲ್ಲ. ಆದರೆ ಅದನ್ನು ಖರ್ಚು ಮಾಡದೆ, ಮೂರು ವರ್ಷಗಳ ಕಾಲ ಕೂಡಿಟ್ಟಾಗ ಅದೇ ಹಣ ಒಂದು ಕನಸಿಗೆ ಬುನಾದಿಯಾಯಿತು. ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಶಕುಂತಳಾ ಅವರ ಪಾಲಿಗೆ ‘ಗೃಹಲಕ್ಷ್ಮಿ’ ಹಣ ಸ್ವಾವಲಂಬನೆಯ ದಾರಿಗೆ ಬೆಳಕಾಯಿತು.
ಟೈಲರಿಂಗ್ ಯಂತ್ರಗಳ ಸಹಿತ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್ಸ್ & ಗಾರ್ಮೆಂಟ್ಸ್’
ಅಂಗನವಾಡಿ ಕಾರ್ಯಕರ್ತೆಯಾಗಿರುವ ಶಕುಂತಳಾ, ಕಳೆದ ಮೂರು ವರ್ಷಗಳಿಂದ ಗೃಹಲಕ್ಷ್ಮಿ ಯೋಜನೆಯಡಿ ದೊರೆತ ಹಣದಲ್ಲಿ ರು. 72 ಸಾವಿರವನ್ನು ಉಳಿತಾಯ ಮಾಡಿದ್ದರು. ತಮ್ಮದೇ ಆದ ಉದ್ಯಮ ಆರಂಭಿಸಬೇಕೆಂಬ ಕನಸಿಗೆ ಈ ಹಣವನ್ನು ಬಳಸಿಕೊಂಡ ಅವರು, ಕುಟುಂಬದ ಉಳಿತಾಯವನ್ನೂ ಸೇರಿಸಿ ಒಟ್ಟು ರು. 2.50 ಲಕ್ಷ ವೆಚ್ಚದಲ್ಲಿ ಎರಡು ಟೈಲರಿಂಗ್ ಯಂತ್ರಗಳ ಸಹಿತ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್ಸ್ & ಗಾರ್ಮೆಂಟ್ಸ್’ ಆರಂಭಿಸಿದ್ದಾರೆ.
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಗುರುವಾರ ಮಳಿಗೆಯ ಶುಭಾರಂಭ ನಡೆಯಿತು. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೇವಲ ದಿನನಿತ್ಯದ ಖರ್ಚಿಗೆ ಬಳಸದೆ, ಅದನ್ನೇ ಹೂಡಿಕೆಯಾಗಿ ಪರಿವರ್ತಿಸಿ ಸ್ವಾವಲಂಬನೆಯ ಹೆಜ್ಜೆ ಇಟ್ಟಿರುವ ಶಕುಂತಳಾ ಅವರ ಪ್ರಯತ್ನ ಗಮನ ಸೆಳೆಯಿತು.
ಮಹಿಳಾ ಸ್ವಾವಲಂಬನೆ
ಮಳಿಗೆಗೆ ಭೇಟಿ ನೀಡಿದ ಬಂಟ್ವಾಳ ತಾಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ ಅವರು ಶಕುಂತಳಾ ಅವರನ್ನು ಅಭಿನಂದಿಸಿದರು.
‘ಶಕುಂತಳಾ ಅವರ ಸಾಧನೆ ಇತರ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದು, ಮಹಿಳಾ ಸ್ವಾವಲಂಬನೆಗೆ ಪ್ರೇರಣಾದಾಯಕವಾಗಿದೆ,’ ಎಂದು ಜಯಂತಿ ವಿ. ಪೂಜಾರಿ ಹೇಳಿದರು.
ಚಾಲಕ ವೃತ್ತಿಯಲ್ಲಿರುವ ಪತಿ ಜಯಾನಂದ ಹಾಗೂ ಇಬ್ಬರು ವಿದ್ಯಾರ್ಥಿ ಪುತ್ರರಿರುವ ಕುಟುಂಬದಲ್ಲಿ, ಶಕುಂತಳಾ ಅವರು ತಮ್ಮದೇ ಆದ ಉದ್ಯಮದ ಮೂಲಕ ಕುಟುಂಬಕ್ಕೆ ಮತ್ತೊಂದು ಆದಾಯದ ದಾರಿ ತೆರೆದಿದ್ದಾರೆ.
ತಿಂಗಳಿಗೆ ಬಂದ 2 ಸಾವಿರ ರು. ವನ್ನು ಕೂಡಿಟ್ಟರು
ಮೂರು ವರ್ಷಗಳಲ್ಲಿ ರು. 72 ಸಾವಿರವಾಯಿತು. ಆ ಉಳಿತಾಯಕ್ಕೆ ಕುಟುಂಬದ ಹಣ ಸೇರಿಸಿ 2.50 ಲಕ್ಷ ರು. ದ ಉದ್ಯಮ ಕಟ್ಟಿದರು. ಗೃಹಲಕ್ಷ್ಮಿ ಹಣ ಶಕುಂತಳಾ ಅವರ ಪಾಲಿಗೆ ನೆರವಷ್ಟೇ ಅಲ್ಲ, ಸ್ವಾವಲಂಬನೆಯ ಮೊದಲ ಹೆಜ್ಜೆಯಾಯಿತು


